ಸಮುದ್ರ ದಡಕ್ಕೆ ಬಂದ ದೇವರ ಮೀನು: ಇದು ಜಗತ್ತಿನ ವಿನಾಶದ ಮುನ್ಸೂಚನೆಯಂತೆ! ವಿಡಿಯೋ ವೈರಲ್​... Doomsday Fish

Doomsday Fish
Published on

Doomsday Fish : ಮನುಷ್ಯ ಎಷ್ಟೇ ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿದರೂ, ಸಾಗರದ ಆಳವೂ ನಮ್ಮಿಂದ ಇನ್ನೂ ನಿಗೂಢವಾಗಿ ಉಳಿದಿರುವ ಅದ್ಭುತಗಳ ಭಂಡಾರವಾಗಿದೆ. ಇಂದಿಗೂ ಸಮುದ್ರದಲ್ಲಿ ಸಂಭವಿಸುವ ಅನೇಕ ವಿದ್ಯಮಾನಗಳಿಗೆ ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಇದರ ನಡುವೆ ಸಮುದ್ರದ ದಡ ತಲುಪಿದ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜಗತ್ತಿನ ವಿನಾಶದ ಮುನ್ಸೂಚನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಹೊಳೆಯುವ ಹಾಗೂ ಉದ್ದವಾದ ಓರ್ಫಿಶ್​ ಇತ್ತೀಚೆಗೆ ಮೆಕ್ಸಿಕೋದಲ್ಲಿ ಕಾಣಿಸಿಕೊಂಡಿದೆ. ಈ ಓರ್ಫಿಶ್​ ಅನ್ನು ಡೂಮ್ಸ್​ಡೇ ಮೀನು ಎಂತಲೂ ಕರೆಯಲಾಗುತ್ತದೆ. ಈ ಮೀನಿನ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೀನುಗಳು ಸಾಮಾನ್ಯವಾಗಿ ಸಮುದ್ರದ ಆಳದಲ್ಲಿ ಕಂಡುಬರುತ್ತವೆ. ಓರ್ಫಿಶ್​ ಆಳ ಸಮುದ್ರದ ಮೀನುಗಳಾಗಿದ್ದು, ಅವು ವಿಪತ್ತುಗಳನ್ನು ಮುನ್ಸೂಚಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಂಬಲಾಗಿದೆ.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಓರ್ಫಿಶ್​, ಸಮುದ್ರದಿಂದ ದಡಕ್ಕೆ ಬಹಳ ವೇಗವಾಗಿ ಬರುವುದನ್ನು ಕಾಣಬಹುದು. ಅದಕ್ಕೆ ಕಿತ್ತಳೆ ಬಣ್ಣದ ರೆಕ್ಕೆಗಳೂ ಇವೆ. ಅದು ದಡ ತಲುಪಿದ ತಕ್ಷಣ, ಅದು ಸ್ಥಿರವಾಗಿ ಮಲಗಿರುತ್ತದೆ. ನಂತರ, ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಅದನ್ನು ಎತ್ತಿಕೊಂಡು ಮತ್ತೆ ಸಮುದ್ರಕ್ಕೆ ಬಿಡುವುದನ್ನು ಕಾಣಬಹುದು.

ಓರ್ಫಿಶ್ ವಿಶ್ವದ ಅತ್ಯಂತ ಉದ್ದವಾದ ಮೂಳೆ ಮೀನು. ಜಪಾನ್‌ನಲ್ಲಿ ಈ ಮೀನಿನ ಬಗ್ಗೆ ವಿವಿಧ ದಂತಕಥೆಗಳಿವೆ. ಜಪಾನಿಗರ ನಂಬಿಕೆಯ ಪ್ರಕಾರ, ಡೂಮ್ಸ್​ಡೇ ಮೀನು ಕಾಣಿಸಿಕೊಳ್ಳುವುದು ಸಮೀಪಿಸುತ್ತಿರುವ ವಿಪತ್ತಿನ ಮುನ್ಸೂಚನೆಯಾಗಿದೆ. 2011 ರ ಭೂಕಂಪದ ಮೊದಲು ಜಪಾನ್ ಕರಾವಳಿಯಲ್ಲಿ ಓರ್ಫಿಶ್ ಕಂಡುಬಂದ ನಂತರ ಮೂಢನಂಬಿಕೆ ಮತ್ತಷ್ಟು ಹರಡಿತು. ಈ ಮೀನನ್ನು “ಸಮುದ್ರ ದೇವರ ಅರಮನೆಯ ಸಂದೇಶವಾಹಕ” ಎಂದು ಕರೆಯಲಾಗುತ್ತದೆ. ದೇವರ ಮೀನು ಎಂದು ನಂಬಲಾಗಿದ್ದು, ಸುನಾಮಿ ಮತ್ತು ಭೂಕಂಪಗಳ ಬಗ್ಗೆ ಎಚ್ಚರಿಕೆ ನೀಡುವಾಗ ಈ ಮೀನುಗಳು ಕಾಣಿಸಿಕೊಳ್ಳುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಈ ನಂಬಿಕೆ ಪುಷ್ಠಿ ನೀಡುವಂತೆ ಕಳೆದ ವರ್ಷ ನವೆಂಬರ್​ 14ರಂದು ಈ ಮೀನಿನ ಕಳೇಬರ ಕ್ಯಾಲಿಫೋರ್ನಿಯಾದಲ್ಲಿ ಪತ್ತೆಯಾಗಿತ್ತು. ಇದಾದ ಇಂದೇ ತಿಂಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿತು. ಈ ರೀತಿಯ ಘಟನೆಗಳು ಸಾಕಷ್ಟು ಬಾರಿ ನಡೆದಿರುವುದರಿಂದ ಈ ಮೀನಿನ ಮೇಲಿನ ನಂಬಿಕೆ ಇನ್ನಷ್ಟು ಬಲವಾಗಿದೆ.

ಅಂದಹಾಗೆ ಈ ಓರ್ಫಿಶ್ ಉದ್ದವಾದ ಈಲ್ ತರಹದ ದೇಹವನ್ನು ಹೊಂದಿದೆ. ಸಾಮಾನ್ಯವಾಗಿ ಇದು ಸಮುದ್ರದ ಕೆಳಭಾಗದಲ್ಲಿ ವಾಸಿಸುತ್ತದೆ. ಮೇಲ್ಮೈಯಿಂದ ಸುಮಾರು 700 ರಿಂದ 3,280 ಅಡಿ ಕೆಳಗೆ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಈ ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಆದಾಗ ಮಾತ್ರ ಹೊರಗಡೆ ಬರುತ್ತವೆ ಹೊರತು, ಇದು ಸನ್ನಿಹಿತವಾಗುತ್ತಿರುವ ವಿಪತ್ತಿನ ಸಂಕೇತವಲ್ಲ ಎಂದು ಸಂಶೋಧಕರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net