ಈ ರೀತಿ ಮಾಡುವುದು ಸರಿಯಲ್ಲ... ಭಾರತ ವಿರುದ್ಧ ಪಂದ್ಯಕ್ಕೂ ಮುನ್ನವೇ ಐಸಿಸಿಗೆ ದೂರು ಕೊಟ್ಟ ಪಾಕಿಸ್ತಾನ! Team India

Team India
Published on

Team India: ಸದ್ಯ ಎಲ್ಲೆಡೆ ಚಾಂಪಿಯನ್ಸ್ ಟ್ರೋಫಿಯದ್ದೇ ಸದ್ದು. ಮಿನಿ ವಿಶ್ವಕಪ್​ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್​ ಟ್ರೋಫಿಯನ್ನು ಈ ಬಾರಿ ಪಾಕಿಸ್ತಾನ ಆಯೋಜಿಸಿದೆ. ಈ ಮೆಗಾ ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಇದೇ ಭಾನುವಾರ (ಫೆ. 23) ನಡೆಯಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನವೇ ವಿವಾದವೊಂದು ಭುಗಿಲೆದ್ದಿದೆ. ಅದೇನೆಂದರೆ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಒಂದು ತಪ್ಪು ನಡೆದಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ದೂರು ನೀಡಿದೆ.

ಫೆಬ್ರವರಿ 20ರಂದು ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ನೇರ ಪ್ರಸಾರದ ಉದ್ದಕ್ಕೂ ಚಾಂಪಿಯನ್ಸ್ ಟ್ರೋಫಿ ಲೋಗೋವನ್ನು ಪ್ರದರ್ಶಿಸಲಾಯಿತು. ಆದರೆ, ಆತಿಥೇಯ ರಾಷ್ಟ್ರವಾದ ಪಾಕಿಸ್ತಾನದ ಹೆಸರು ಎಲ್ಲಿಯೂ ಇರಲಿಲ್ಲ. ದುಬೈನಲ್ಲಿ ನಡೆಯುವ ಪಂದ್ಯಗಳು ಸೇರಿದಂತೆ ಎಲ್ಲ ಪ್ರಸಾರಗಳಲ್ಲಿ ಟೂರ್ನಿಯ ಲೋಗೋ ಮತ್ತು ಆತಿಥೇಯ ರಾಷ್ಟ್ರದ ಹೆಸರು ಎರಡನ್ನೂ ಪ್ರದರ್ಶಿಸುವ ಒಪ್ಪಂದವನ್ನು ಪ್ರಸಾರಕರು ಪಾಲಿಸಲಿಲ್ಲ ಎಂದು ಐಸಿಸಿಗೆ ಬರೆದ ಪತ್ರದಲ್ಲಿ ಪಿಸಿಬಿ ದೂರಿದೆ.

ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಚಾಂಪಿಯನ್ಸ್​ ಟ್ರೋಫಿಯ ಉದ್ಘಾಟನಾ ಪಂದ್ಯ ಹಾಗೂ ಫೆಬ್ರವರಿ 21ರ ಶುಕ್ರವಾರದಂದು ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ ಲೋಗೋವನ್ನು ಸರಿಯಾಗಿ ಪ್ರದರ್ಶಿಸಲಾಯಿತು. ಆದರೆ, ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯದಲ್ಲಿ ಪ್ರಸಾರ ಮಾಡಲಿಲ್ಲ ಎಂದು ಪಿಸಿಬಿಗೆ ಅಸಮಾಧಾನ ಹೊರಹಾಕಿದೆ.

ಇದೇ ಸಂದರ್ಭದಲ್ಲಿ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ನೇರಪ್ರಸಾರದ ವೇಳೆ ಚಾಂಪಿಯನ್ಸ್​ ಟ್ರೋಫಿಯ ಲೋಗೋದಿಂದ ಪಾಕಿಸ್ತಾನದ ಹೆಸರನ್ನು ತೆಗೆದುಹಾಕಿದ್ದು ತಾಂತ್ರಿಕ ದೋಷದಿಂದ ಎಂದು ಸ್ವತಃ ಜಿಯೋ ಟಿವಿ ವರದಿ ಮಾಡಿದೆ ಎಂದು ಐಸಿಸಿ ಪ್ರತಿನಿಧಿಯೊಬ್ಬರು ವಿವರಿಸಿದ್ದಾರೆ.

ಟೀಮ್ ಇಂಡಿಯಾ ಭಾಗವಹಿಸುವ ಉಳಿದ ಎಲ್ಲ ಪಂದ್ಯಗಳ ನೇರಪ್ರಸಾರದ ಸಮಯದಲ್ಲಿ ಪಾಕಿಸ್ತಾನದ ಹೆಸರು ಸೇರಿದಂತೆ ಅಧಿಕೃತ ಲೋಗೋವನ್ನು ಪ್ರದರ್ಶಿಸಲಾಗುವುದು ಎಂದು ಐಸಿಸಿ ಪ್ರತಿನಿಧಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ನೇರ ಪ್ರಸಾರದಲ್ಲಿ ತಾಂತ್ರಿಕ ಸಮಸ್ಯೆಯ ಹೊರತಾಗಿಯೂ, ಸಾಮಾಜಿಕ ಜಾಲತಾಣದ ವಿಡಿಯೋಗಳಲ್ಲಿ ಬಳಸಲಾದ ಲೋಗೋದಲ್ಲಿ ಪಾಕಿಸ್ತಾನದ ಹೆಸರನ್ನು ಸರಿಯಾಗಿ ಪ್ರದರ್ಶಿಸಲಾಗಿದೆ ಎಂದು ಐಸಿಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಫೆಬ್ರವರಿ 23ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಸೋಲಿನೊಂದಿಗೆ ಆರಂಭಿಸಿದ್ದರೆ, ಭಾರತ ಗೆಲುವಿನೊಂದಿಗೆ ಆರಂಭಿಸಿದೆ. ಇದರೊಂದಿಗೆ, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಪಾಕಿಸ್ತಾನ ಭಾರತದ ವಿರುದ್ಧ ಗೆಲ್ಲಲೇಬೇಕಿದೆ. ಪಾಕಿಸ್ತಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿ. ಭಾರತ ಈ ಪಂದ್ಯವನ್ನು ಗೆದ್ದರೆ, ಸೆಮಿಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ. ಅದೇ ಸಮಯದಲ್ಲಿ ಪಾಕಿಸ್ತಾನ ಈ ಪಂದ್ಯಾವಳಿಯಿಂದ ಹೊರಗುಳಿಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net