ಎಸ್​ಬಿಐ ಸಾಲಗಾರರಿಗೆ ಗುಡ್​ನ್ಯೂಸ್​: ಇಎಂಐಯಿಂದ ಎರಡು ವರ್ಷ ಮುಕ್ತಿ- ಷರತ್ತುಗಳು ಇಲ್ಲಿವೆ...

SBI
Published on

ಮುಂಬೈ: ಕರೊನಾ ಬಿಕ್ಕಟ್ಟು ಹಾಗೂ ಅದರ ನಂತರ ಉಂಟಾದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅವೆಷ್ಟೋ ವ್ಯವಹಾರಗಳು ನಿಂತು ಹೋಗಿವೆ. ಇದೇ ಕಾರಣಕ್ಕೆ ಬ್ಯಾಂಕ್​ಗಳಿಂದ ತೆಗೆದುಕೊಂಡಿರುವ ಸಾಲದ ಇಐಎಂ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಿಂದ ಭರ್ಜರಿ ಸುದ್ದಿ ಸಿಕ್ಕಿದೆ.

ಗೃಹಸಾಲ ಸೇರಿದಂತೆ ಇತರ ಸಾಲಗಳನ್ನು ಪಡೆದಿರುವ ಗ್ರಾಹಕರು ಕಟ್ಟಬೇಕಿರುವ ಇಎಂಐ ಅವಧಿಯನ್ನು ಬ್ಯಾಂಕ್​ ಎರಡು ವರ್ಷ ಅಂದರೆ 24 ತಿಂಗಳವರೆಗೆ ವಿಸ್ತಾರ ಮಾಡಿದೆ.

ಇದಕ್ಕಾಗಿ ಸ್ಟೇಟ್​ ಬ್ಯಾಂಕ್​ ವತಿಯಿಂದ ಹೊಸದೊಂದು ಪೋರ್ಟಲ್​ ತೆರೆಯಲಾಗಿದ್ದು, ಅಲ್ಲಿ ನೀವು ಈ ಸೌಲಭ್ಯಕ್ಕೆ ಅರ್ಹರೋ ಎಂಬುದನ್ನು ತಿಳಿದುಕೊಳ್ಳಬಹುದು. ಏಕೆಂದರೆ, ಈ ಸೌಲಭ್ಯವನ್ನು ಪಡೆಯಲು ಒಂದು ಷರತ್ತನ್ನು ಎಸ್​ಬಿಐ ವಿಧಿಸಿದೆ.

ಅದೇನೆಂದರೆ, 2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್‌ಡೌನ್‌ವರೆಗೆ ಸಾಲಮರುಪಾವತಿ ಕಂತನ್ನು ನಿಗದಿತ ಅವಧಿಯಲ್ಲಿ ಕಟ್ಟುತ್ತಾ ಬಂದಿರುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ಅಷ್ಟೇ ಅಲ್ಲದೇ, ಇಐಎಂ ಎರಡು ವರ್ಷ ಮುಂದೂಡಿದ ಮಾತ್ರಕ್ಕೆ ಗ್ರಾಹಕರು ತುಂಬಬೇಕಿರುವ ಮೊತ್ತವು ಕಡಿಮೆಯಾಗುತ್ತದೆ ಎಂಬ ಅರ್ಥ ಕಲ್ಪಿಸಕೂಡದು. ಏಕೆಂದರೆ, ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವವರು ಎರಡು ವರ್ಷಗಳವರೆಗೆ ಕಂತನ್ನು ತುಂಬಬೇಕಿಲ್ಲ ಎನ್ನುವುದು ನಿಜವಾದರೂ, ಈ ಅವಧಿ ಮುಗಿದ ಮೇಲೆ 0.35 ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್​ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net