

ಉಡುಪಿ: ಕಡಲು ಎಂದರೆ ಅದು ವಿಚಿತ್ರಗಳ ಆಗರವೇ. ಇತ್ತೀಚೆಗೆ ವಿಶ್ವದ ಕೆಲವು ಕಡೆಗಳಲ್ಲಿ ಚಿತ್ರ-ವಿಚಿತ್ರ ಜೀವಿಗಳು ಸಮುದ್ರದ ದಡದಲ್ಲಿ ಬಂದು ಬೀಳುತ್ತಿರುವುದು ವರದಿಯಾಗಿದೆ.
ಅಂಥದ್ದೇ ಒಂದು ವಿಚಿತ್ರ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ನಡೆದಿದೆ.
ದೂರದಿಂದ ಯಾವುದೋ ವಿಚಿತ್ರ ಪ್ರಾಣಿಯಂತೆ ತೋರುವ ವಸ್ತುವೊಂದು ಪತ್ತೆಯಾಗಿದೆ. ಸಮೀಪ ಹೋಗಿ ನೋಡಿದಾಗ ಇದು ಕ್ಷಿಪಣಿಯಂತೆ ಕಾಣುತ್ತಿದೆ. ಕೆಂಪು ಬಣ್ಣದ್ದಿರುವ ಈ ವಸ್ತು ಸುಮಾರು 10 ಅಡಿ ಉದ್ದವಿದೆ, ಇದನ್ನು ನೋಡಿದ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಿಬ್ಬಂದಿ ವಸ್ತುವನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನು ನೋಡಿದರೆ ಹಡಗಿನ ದಿಕ್ಕು ಸೂಚಕ ವಸ್ತುವಿನಂತೆ ತೋರುತ್ತಿದೆ. ಸಾಮಾನ್ಯವಾಗಿ ಬಂದರಿನ ಸಮೀಪದಲ್ಲಿ ಇಂತಹ ಉಪಕರಣವನ್ನು ಅಳವಡಿಸಲಾಗುತ್ತದೆ. ಹಡಗುಗಳು ಬಂದರು ತಲುಪಲು ಈ ಉಪಕರಣಗಳು ಸಹಾಯ ಮಾಡುತ್ತವೆ. ಆದರೂ ಇದು ಏನು ಎಂದು ಶೀಘ್ರದಲ್ಲಿಯೇ ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.