

ಬೆಂಗಳೂರು: ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವ ಎರಡು ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಈ ಮಸೂದೆಯಿಂದ ರೈತರಿಗೆ ಎಷ್ಟು ಅನುಕೂಲಕರ ವಾತಾವರಣ ಕಲ್ಪಿಸಲಿದೆ ಎಂಬುದಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ವಿವರವಾಗಿ ಹೇಳಿದ್ದರೂ, ಈ ಮಸೂದೆಗಳ ವಿರುದ್ಧ ಎದ್ದಿರುವ ಊಹಾಪೋಹಗಳ ಹಿನ್ನೆಲೆಯಲ್ಲಿ ರೈತರನ್ನು ಬೀದಿಗಿಳಿಸಲಾಗಿದೆ.
ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ರೈತ ವಿರೋಧಿ ಎಂದು ಪ್ರಚಾರ ಮಾಡಲಾಗುತ್ತಿದೆ.
ಅದೇ ವೇಳೆ, ಈ ನಡುವೆಯೇ, ಎಪಿಎಂಸಿ, ವಿದ್ಯುತ್, ಭೂ ಸುಧಾರಣಾ ಕಾಯ್ದೆ ಸುಗ್ರಿವಾಜ್ಞೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಹೊಸ ಕೃಷಿ ಕಾನೂನು: ವಾಸ್ತವವೇನು? ಗಾಳಿಮಾತುಗಳೇನು? ಪ್ರಧಾನಿ ಏನು ಹೇಳಿದ್ದಾರೆ ನೋಡಿ…
ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಇದೇ ಶುಕ್ರವಾರ (ಸೆಪ್ಟೆಂಬರ್ 25) ಕರ್ನಾಟಕ ಬಂದ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‍ಗೆ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲಿಸಲಿದ್ದು, ಇವರಿಗೆ ಜತೆಗೆ, ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಸೇರಿದಂತೆ 32ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಲಿವೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ಇಂದು ಸಭೆ ಸೇರಲಾಗಿದ್ದು ಶುಕ್ರವಾರ ರಾಜ್ಯ ಬಂದ್‍ಗೆ ಕರೆ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇಂದು ಸಂಜೆ ಮತ್ತೊಮ್ಮೆ ಸಭೆ ನಡೆಸಿ ಬಂದ್ ರೂಪುರೇಷೆ ಬಗ್ಗೆ ರೈತ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.