ಒಂದೇ ರೂಪಾಯಿಯಲ್ಲಿ ಕರೊನಾ ಗೆದ್ದ 106 ವರ್ಷದ ಅಜ್ಜಿ!

corona-ajji
Published on

ಥಾಣೆ (ಮಹಾರಾಷ್ಟ್ರ): ಈ ಫೋಟೋದಲ್ಲಿ ತಮ್ಮ ಬಾಯಿತುಂಬಾ ನಗುಬೀರಿ ಹೆಮ್ಮೆಯಿಂದ ಬೀಗುತ್ತಿರುವ ಅಜ್ಜಿ ಮಹಾರಾಷ್ಟ್ರದ ಥಾಣೆಯವರು. ಇವರ ವಯಸ್ಸು 106. ಇದೀಗ ಮಹಾಮಾರಿ ಕರೊನಾ ಗೆಲ್ಲುವ ಮೂಲಕ ಸಕತ್​ ಫೇಮಸ್​ ಆಗಿದ್ದಾರೆ.

ಕರೊನಾ ಹಾಟ್​ಸ್ಪಾಟ್​ ಎಂದೇ ಬಿಂಬಿತವಾಗಿರುವ, ದೇಶದಲ್ಲೇ ಅತಿ ಹೆಚ್ಚು ಕರೊನಾ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರದಲ್ಲಿ ಈ ಅಜ್ಜಿಯ ಗುಣಮುಖರಾಗಿ ಕರೊನಾ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.

ಇನ್ನೂ ಒಂದು ವಿಶೇಷ ಎಂದರೆ ಇವರು ಸೋಂಕಿಗೆ ಚಿಕಿತ್ಸೆ ಪಡೆಯಲು ಖರ್ಚು ಮಾಡಿರುವುದು ಕೇವಲ ಒಂದು ರೂಪಾಯಿ!

ಹೌದು. ಕೆಡಿಎಂಸಿ ವತಿಯಿಂದ ಸವ್ಳಾರಾಮ್ ಕ್ರೀಡಾ ಸಂಕುಲದಲ್ಲಿ 1 ರೂಪಾಯಿ ಆಸ್ಪತ್ರೆ ತೆರೆಯಲಾಗಿದೆ. ಮನೆಯಲ್ಲಿ ಬಡವರಾಗಿದ್ದ ಅಜ್ಜಿ ಮನೆಯವರಿಗೆ ಅಜ್ಜಿಗೆ ಕರೊನಾ ಸೋಂಕು ತಗುಲಿದೆ ಎಂದಾಗ ಏನು ಮಾಡಬೇಕು ಎನ್ನುವುದು ತೋಚದಾಯಿತು. ಲಕ್ಷ ಲಕ್ಷಗಟ್ಟಲೆ ಹಣ ಸುರಿಯುವ ಆಸ್ಪತ್ರೆಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಅಜ್ಜಿಗೆ ದಿಕ್ಕೇ ತೋಚಲಿಲ್ಲ.

ಆದರೂ ಕೆಲವೊಂದು ಆಸ್ಪತ್ರೆಗಳ ಬಾಗಿಲು ತಟ್ಟಿದರು ಅಜ್ಜಿ. ವಯಸ್ಸಾಗಿದ್ದ ಹಿನ್ನೆಲೆಯಲ್ಲಿ ಬಹುತೇಕ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ನಿರಾಕರಿಸಿದವು.

ನಂತರ ಅವರ ನೆರವಿಗೆ ಬಂದದ್ದು ಈ ಒಂದು ರೂಪಾಯಿ ಆಸ್ಪತ್ರೆ. ಅಲ್ಲಿ ದಾಖಲಾಗಿದ್ದ ಇವರಿಗೆ 10 ದಿನಗಳ ಚಿಕಿತ್ಸೆ ನೀಡಲಾಗಿದೆ. ಇದೀಗ ಗುಣಮುಖರಾದ ಬಳಿಕ ಇವರಿಗೆ ಪ್ರಮಾಣಪತ್ರ ಕೊಡುವ ಮೂಲಕ ಸನ್ಮಾನಿಸಲಾಗಿದೆ. ಪ್ರಮಾಣಪತ್ರದ ಜತೆ ಖುಷಿಯಿಂದ ಫೋಟೋಗೆ ಪೋಸ್​ ಕೊಟ್ಟಿದ್ದಾರೆ ಇವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net