

ಮುಂಬೈ: ಅಯೋಡಿನ್ ದ್ರಾವಣವು ಕರೊನಾ ವೈರಸ್ ಹರಡುವಿಕೆಯನ್ನು ತಡೆಯುತ್ತದೆ ಎಂದು ಕನೆಕ್ಟಿಕಟ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.
ಕರೊನಾ ಸೋಂಕು ತಗುಲಿದ ವ್ಯಕ್ತಿಯಿಂದ ಬಹು ಬೇಗನೆ ಇದು ಇತರರಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಮನೆಯಲ್ಲಿ ಒಬ್ಬರಿಗೆ ಸೋಂಕು ಬಂದರೆ ಇಡೀ ಮನೆಯವರಿಗೂ ಅದು ಹರಡುತ್ತಿದೆ. ಇದನ್ನು ತಡೆಯಲು ಉಪ್ಪಿನ ದ್ರಾವಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಕುರಿತು ಜಮಾ ಒಟೋಲರಿಂಗೋಲಜಿ-ಹೆಡ್ ಮತ್ತು ನೆಕ್ ಸರ್ಜರಿಯಲ್ಲಿ ಲೇಖನ ಪ್ರಕಟವಾಗಿದ್ದು, ಅಯೋಡಿನ್ ದ್ರಾವಣದ ಗುಣಗಳ ಬಗ್ಗೆ ಅದರಲ್ಲಿ ವಿವರಣೆ ನೀಡಲಾಗಿದೆ.
ಅಧ್ಯಯನಕ್ಕಾಗಿ, ಸಂಶೋಧಕರು ಮೂರು ವಿಭಿನ್ನ ಸಾಂದ್ರತೆಯ ದ್ರಾವಣಗಳನ್ನು ಬಳಸಿ ಪ್ರಯೋಗ ಮಾಡಿದ್ದಾರೆ. ಅವರು ಶೇ. 0.5, ಶೇ. 1.25 ಶೆ. 2.5 ರಷ್ಟು ಸಾಂದ್ರತೆಯ ದ್ರಾವಣಗಳನ್ನು ಬಳಸಿ ಪ್ರತ್ಯೇಕ ಪ್ರಯೋಗ ಕೈಗೊಂಡಿದ್ದಾರೆ. ಅಚ್ಚರಿ ಎಂದರೆ ಅತ್ಯಂತ ಕಡಿಮೆ ಸಾಂದ್ರತೆ ಎಂದುಕೊಂಡಿರುವ ಅಂದರೆ ಶೇ.0.5 ರಷ್ಟು ಸಾಂದ್ರತೆಯ ದ್ರಾವಣದ ಮೂಲಕವೂ ವೈರಸ್ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ಕುರಿತು ಖುದ್ದಾಗಿ ಸಂಶೋಧಕರೇ ಅಚ್ಚರಿಪಟ್ಟುಕೊಂಡಿದ್ದಾರೆ. 15 ಸೆಕೆಂಡ್ಗಳಿಗಿಂತಲೂ ಅತ್ಯಂತ ಕಡಿಮೆ ಅವಧಿಯಲ್ಲಿ ಈ ದ್ರಾವಣವು ವೈರಸ್ ಅನ್ನು ಕೊಂದಿದೆ. ಇದು ಎಷ್ಟು ಪರಿಣಾಮಕಾರಿಯೆಂದರೆ, ಇದೇ ಪರೀಕ್ಷೆಯನ್ನು ನಾವು ಎಥೆನಾಲ್ ಆಲ್ಕೋಹಾಲ್ ಬಳಸಿಯೂ ಮಾಡಿದ್ದೆವು. ಆದರೆ ಇದರಲ್ಲಿ ಅಷ್ಟೊಂದು ಫಲಿತಾಂಶ ಕಂಡುಬಂದಿಲ್ಲ. ಆದ್ದರಿಂದ ಅಯೋಡಿನ್ ದ್ರಾವಣವೇ ಎಲ್ಲಕ್ಕಿಂತ ಬೆಸ್ಟ್ ಎಂದು ಸಂಶೋಧಕರು ಹೇಳಿದ್ದಾರೆ.
ಇದು ಕರೊನಾ ಮಾತ್ರವಲ್ಲದೇ ಅಯೋಡಿನ್ ದ್ರಾವಣವು ಸಾರ್ಸ್ ಮತ್ತು ಮೆರ್ಸ್ (SARS ಮತ್ತು MERS ) ಸೇರಿದಂತೆ ಇತರ ರೀತಿಯ ಸೋಂಕುಗಳ ವಿರುದ್ಧವೂ ಪರಿಹಾರವಾಗಿದೆ ಎಂದು ತಾವು ಕಂಡುಕೊಂಡಿರುವುದಾಗಿ ಹೇಳಿದ್ದಾರೆ.
ಇದರ ಬಳಕೆಯ ಬಗ್ಗೆ ಸಂಶೋಧಕರು ವಿವರ ನೀಡುವುದು ಹೀಗೆ: ಇದನ್ನು ಮೂಗಿನ ಮೂಲಕ ಸೋಂಕಿತರಿಗೆ ನೀಡಬಹುದಾಗಿದೆ. ಇಂಟ್ರಾನಾಸಲ್ ಪ್ರಕ್ರಿಯೆಗೆ ಸೋಂಕಿತರನ್ನು ಒಳಪಡಿಸುವ ಮುನ್ನ ಅವರಿಗೆ ಅಯೋಡಿನ್ ದ್ರಾವಣ ನೀಡುವುದು ಅತ್ಯುತ್ತಮ ವಿಧಾನವಾಗಿದೆ. ಹೀಗೆ ಮಾಡಿದರೆ ನೀರಿನ ಹನಿಗಳು (ಸೀನಿದಾಗ, ಕೆಮ್ಮಿದಾಗ ಬರುವ ಹನಿಗಳು) ಮತ್ತು ಏರೋನಾಸ್ಗಳ ಮೂಲಕ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದಿದ್ದಾರೆ.
ವೈದ್ಯಕೀಯ ವೃತ್ತಿಪರರು ಈ ದ್ರಾವಣವನ್ನು ಸೋಂಕಿತರಿಗೆ ಬಳಸುವಂತೆ ಹೇಳಬೇಕು. ಆನಂತರವಷ್ಟೇ ಅವರ ದಾಖಲಾತಿ ಮಾಡಿಕೊಳ್ಳಬೇಕು. ಈ ರೀತಿಯಾದರೆ ಕರೊನಾ ಸೋಂಕು ಬೇರೆಯವರಿಗೆ ಹರಡುವುದರಿಮದ ತಪ್ಪಿಸಬಹುದು. ಹೀಗಾದಲ್ಲಿ ವೈರಸ್ನ ಹರಡುವಿಕೆಯ ಪ್ರಮಾಣದಲ್ಲಿ ಇಳಿತವಾಗಲಿದೆ ಎಂದಿದ್ದಾರೆ ಸಂಶೋಧಕರು.
ಕೊನೆಯದಾಗಿ ಎಚ್ಚರಿಕೆ ನೀಡಿರುವ ಸಂಶೋಧಕರು, ಇದನ್ನು ಮನೆಯಲ್ಲಿ ಪ್ರಯತ್ನಿಸಬೇಡಿ ಎಂದಿದ್ದಾರೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಈ ಪ್ರಕ್ರಿಯೆ ಅನುಸರಿಸಬೇಕು ಎಂದಿದ್ದಾರೆ.