ತಿನ್ನುವುದಕ್ಕಾಗಿ ಬಸವನಹುಳು ಖರೀದಿಸಿದಳು: ಮುತ್ತಿನಿಂದ ರಾತ್ರೋ ರಾತ್ರಿ ಲಕ್ಷಾಧೀಶ್ವರೆ ಆದಳು!

pearl
Published on

ಸಾತುನ್​ (ಥಾಯ್ಲೆಂಡ್​): ಅದೃಷ್ಟ ಎನ್ನುವುದು ಯಾವಾಗ ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ತುತ್ತು ಅನ್ನಕ್ಕಾಗಿ ಪರದಾಡುವವರೂ ಅದೃಷ್ಟ ಒಂದಿದ್ದರೆ ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿಬಿಡುತ್ತಾರೆ.

ಅಂಥದ್ದೇ ಒಂದು ಅದೃಷ್ಟ ಥಾಯ್ಲೆಂಡ್​ನ ಮಹಿಳೆಗೆ ಒದಗಿಬಂದಿದೆ. ಕೊಡ್ಚಕಾರ್ನ್ ತಂತಿವಿವಾಟ್ಕುಲ್ ಎಂಬ ಕಡು ಬಡವ ಮಹಿಳೆ ರಾತ್ರೋರಾತ್ರಿ ಶ್ರೀಮಂತ ಆಗಿರುವ ಘಟನೆ ಇದು.

ಅಷ್ಟಕ್ಕೂ ಆಗಿರುವುದು ಏನೆಂದರೆ ಕೊಡ್ಚಕಾರ್ನ್ ತಿನ್ನುವುದಕ್ಕಾಗಿ ಬಸವನಹುಳುಗಳನ್ನು ಖರೀದಿಸಿದ್ದಳು. ಈ ಭಾಗದಲ್ಲಿ ಬಸವನಹುಳುಗಳ ಸಾಂಬಾರ್​ ಮಾಡಿ ತಿನ್ನುವುದು ಮಾಮೂಲು. ಅದರಂತೆ ಆಕೆ 70 ಬಹತ್​ (ಸುಮಾರು 163 ರೂಪಾಯಿ) ಕೊಟ್ಟು ಬಸವನಹುಳುಗಳನ್ನು ಖರೀದಿಸಿದ್ದಳು.

ಅದನ್ನು ಆಕೆ ರಾತ್ರಿ ಸಾಂಬಾರ್​ ಮಾಡಲು ರೆಡಿ ಮಾಡುತ್ತಿದ್ದಳು. ಬಸವನಹುಳುಗಳನ್ನು ಕತ್ತರಿಸಿದಾಗ ಆಕೆಗೆ ಒಂದು ಬಸವನಚಿಪ್ಪಿನಲ್ಲಿ ಕಿತ್ತಳೆ ಬಣ್ಣದ ವಸ್ತು ಕಂಡಿತು. ಅದನ್ನು ನೋಡಿದಾಗ ಅವಳು ಅದನ್ನು ಹುಳುವಿನ ಮೇಲ್ಭಾಗದ ಶಂಕು ಎಂದುಕೊಂಡಿದ್ದಾಳೆ. ಆದರೆ ಅದು ಸ್ವಲ್ಪ ಭಿನ್ನವಾಗಿತ್ತು. ಸುಮಾರು 1.5 ಸೆಂಟಿಮೀಟರ್​ನಷ್ಟು ಇತ್ತು.

ನಂತರ ಅದನ್ನು ಅಕೆ ಪರಿಶೀಲಿಸಿದಾಗ ಇದು ಚಿಪ್ಪಲ್ಲ, ಬದಲಿಗೆ ಏನೋ ವಿಶೇಷ ವಸ್ತು ಎನ್ನುವುದು ತಿಳಿದಿದೆ. ನಂತರ ಅದನ್ನು ಆಕೆ ಪರಿಚಯದವರ ಬಳಿ ಪರೀಕ್ಷಿಸಿದಾಗ ಅದು ಮುತ್ತು ಎಂದು ತಿಳಿದಿದೆ. ನಂತರ ಅದರ ಬೆಲೆ ಒಂದು ಮಿಲಿಯನ್​ ಬಹತ್​ (ಅಂದರೆ ಸುಮಾರು 24 ಲಕ್ಷ ರೂಪಾಯಿ) ಎಂದು ತಿಳಿದದ್ದೇ ಆಕೆಗೆ ತಲೆತಿರುಗಿದಂತಾಗಿದೆ.

ಅದನ್ನು ಮಾರಿರುವ ಕೊಡ್ಚಕಾರ್ನ್, ತನ್ನ ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ವಿನಿಯೋಗ ಮಾಡಿದ್ದಾಳೆ. ದುಡ್ಡು ಇಲ್ಲದೇ ತನ್ನ ತಂದೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಈ ಯುವತಿಗೆ ಈ ಮುತ್ತು ವರದಾನವಾಗಿ ಪರಿಣಮಿಸಿದೆ. ನಾನು ತಂದೆಯ ಚಿಕಿತ್ಸೆಗಾಗಿ ಇಷ್ಟು ಹಣ ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿ ಇದ್ದೆ. ನಾವು ತೀರಾ ಕಡುಬಡವರು. ಆದರೆ ದೇವರ ದಯೆಯಿಂದ ಇಷ್ಟು ಸುಲಭದಲ್ಲಿ ನಮಗೆ ಹಣ ಸಿಕ್ಕಿದೆ ಎಂದು ಕಣ್ಣೀರಿಡುತ್ತಾರೆ ಕೊಡ್ಚಕಾರ್ನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net