

ಅಮರಾವತಿ: ದೇವರ ದರ್ಶನಕ್ಕೆಂದು ಬಂದ ಭಕ್ತರು ಇಂದು ನಸುಕಿನ ವೇಳೆ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಟೆಂಪೋ ಮತ್ತು ಸರಕು ತುಂಬಿದ್ದ ಲಾರಿಯ ನಡುವೆ ನಡೆದ ಈ ಭೀಕರ ರಸ್ತೆ ಅಪಘಾತದಲ್ಲಿ ಐವರು ಮಹಿಳೆಯರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದು ಇನ್ನು ಆರು ಮಂದಿ ಸ್ಥಿತಿ ಚಿಂತಾಜನಕವಾಗಿದೆ.
ಬುಚ್ಚಿರೆಡಿಪಲೆಂ ಮಂಡಲಂ ದಾಮರಮಡುಗು ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿಕೊಟ್ಟು ಸುತ್ತಮುತ್ತಲಿನ ದೇವಾಲಯಕ್ಕೆ ಭೇಟಿ ನೀಡಲು ಹೋಗಿದ್ದರು. ಎಲ್ಲರೂ ತಮಿಳುನಾಡು ಮೂಲದವರು ಎನ್ನಲಾಗಿದೆ.
ಇಂದು ನಸುಕಿನ ಸುಮಾರು 2 ಗಂಟೆಗೆ ಈ ಘಟನೆ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಟೆಂಪೋದಲ್ಲಿ ತೆರಳುತ್ತಿದ್ದರು, ಈ ವೇಳೆ ಸರಕು ತುಂಬಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಂಟು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.