ಯಾರನ್ನೋ ಇಷ್ಟಪಟ್ಟವರು ನನ್ನ ಮದ್ವೆಯಾದ್ರು- ಆದ್ರೆ ಈಗ... ಈ ಸಂದೇಹ ಹೇಗೆ ಪರಿಹರಿಸಿಕೊಳ್ಳಲಿ?

nandondukathe
Published on
ನಾನು ಇಬ್ಬರು ಮಕ್ಕಳ ತಾಯಿ. ನನಗೆ ಬಹಳ ಬೇಗ ಕೋಪ ಬರುತ್ತದೆ. ಕೋಪ ಬಂದಾಗ ಬಹಳ ಕಿರಿಚಾಡುತ್ತೇನೆ. ಮಕ್ಕಳಿಗೆ ಹೊಡೆಯುತ್ತೇನೆ. ನಂತರ ಅಳುತ್ತೇನೆ. ಮದುವೆಯಾದ ದಿನದಿಂದ ನನಗೆ ಗಂಡನ ಬಗ್ಗೆ ಅನುಮಾನವಿದೆ. ಏಕೆಂದರೆ ಅವರು ತಮ್ಮ ನೆಂಟರ ಹುಡುಗಿಯನ್ನು ಮದುವೆಯಾಗಬೇಕೆಂದು ಬಯಸಿದ್ದರಂತೆ. ಕಾರಣಾಂತರಗಳಿಂದ ಅದು ನಡೆಯಲಿಲ್ಲ. ನಂತರ ನನ್ನನ್ನು ಮದುವೆಯಾದರು. ಆದರೆ ಆ ನೆಂಟರ ಮಹಿಳೆ ಮದುವೆ ಮುಂತಾದ ಸಮಾರಂಭಗಳಲ್ಲಿ ಸಿಗುತ್ತಾಳೆ. ಅವಳು ಮತ್ತು ಇವರೂ ನಗುನಗುತ್ತ ಮಾತಾಡುತ್ತಾರೆ. ನನಗೆ ಕೋಪ ಉಕ್ಕುತ್ತದೆ. ಮನೆಗೆ ಬಂದು ಕಿರುಚಾಡುತ್ತೇನೆ. ಅದಕ್ಕೇ ನನ್ನ ಗಂಡ ಈಗೀಗ ಮದುವೆ ಮನೆಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ.

ಅವಳೀಗ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿ ತನ್ನ ಗಂಡನ ಜೊತೆ ಸುಖವಾಗಿ ದೂರದ ಊರಿನಲ್ಲಿದ್ದಾಳೆ. ಆದರೂ ಅವಳು ಮತ್ತೆಲ್ಲಾದರೂ ಇವರಿಗೆ ಸಿಕ್ಕು ಮಾತಾಡುತ್ತಾಳೇನೋ ಎನ್ನುವ ಅನುಮಾನ ನನಗೆ. ನಾನು ಅವಳ ಹೆಸರನ್ನೇ ಬಳಸಿ ಸದಾ ಇವರಿಗೆ ಹಂಗಿಸುತ್ತೇನೆ. ಇವರು ಬೇಜಾರು ಮಾಡಿಕೊಂಡು ಮನೆಬಿಟ್ಟು ಹೋಗುತ್ತಾರೆ, ಸಂಜೆಯವರೆಗೆ ಬರುವುದಿಲ್ಲ. ಅವಳನ್ನು ಬಯ್ದರೆ ಇವರಿಗೆ ಬೇಜಾರಾಗುತ್ತದಲ್ಲ? ಅದಕ್ಕೇ ನನಗೆ ಅನುಮಾನ ಜಾಸ್ತಿಯಾಗುತ್ತದೆ. ಇವರದ್ದು ಮನೆಯಲ್ಲೇ ಕುಳಿತು ಮಾಡುವ ಬಿಜಿನೆಸ್. ಆದರೂ ಗಂಟೆಗಟ್ಟಲೆ ಮನೆಬಿಟ್ಟು ದೂರ ಹೋಗುತ್ತಾರಲ್ಲ? ಅಲ್ಲಿ ಎಲ್ಲೋ ಕುಳಿತು ಅವಳೊಂದಿಗೆ ಫೋನಿನಲ್ಲಿ ಮಾತಾಡುತ್ತಾರೇನೋ ಎನ್ನುವ ಅನುಮಾನ. ಹಾಗೆಂದುಕೊಂಡು ಇವರ ಸೆಲ್ ಪೋನಿಗೆ ಪೋನ್ ಮಾಡಿದರೆ ಅದು ಮನೆಯಲ್ಲೇ ಇರುತ್ತದೆ. ನನ್ನ ಅನುಮಾನ ಇನ್ನೂ ಜಾಸ್ತಿಯಾಗುತ್ತದೆ.

ಇವರು ಎಲ್ಲಿಯಾದರೂ ಅಂಗಡಿ ಅಥವಾ ಪಬ್ಲಿಕ್ ಬೂತಿನಿಂದ ಫೋನ್ ಮಾಡುತ್ತಿರಬಹುದಲ್ಲವೇ? ಈ ಜಂಜಾಟದಲ್ಲಿ ಮಕ್ಕಳು ನಲುಗುತ್ತಿದ್ದಾರೆ. ಮೊದಲ ಮಗ ಅಷ್ಟೇನೂ ಚೆನ್ನಾಗಿ ಓದುತ್ತಿಲ್ಲ. ಎರಡನೆಯವನು ಜಾಣ ಎಂದು ನಮ್ಮವರು ಅವನನ್ನು ವಸತಿ ಶಾಲೆಗೆ ಸೇರಿಸಿ ನನ್ನಿಂದ ದೂರ ಮಾಡಿದ್ದಾರೆ. ಉಳಿದಂತೆ ಇವರು ಒಳ್ಳೆಯವರೇ. ಮನೆಯಲ್ಲಿ ಎಲ್ಲ ಅನುಕೂಲಗಳನ್ನೂ ಮಾಡಿದ್ದಾರೆ. ಮನೆಯ ಅರ್ಧಕ್ಕರ್ಧ ಕೆಲಸಗಳನ್ನು ಅವರೇ ಮಾಡಿ ಮುಗಿಸುತ್ತಾರೆ. ನನಗೇನು ಬೇಕೆಂದು ಊಹಿಸಿ ನಾನು ಕೇಳುವ ಮೊದಲೇ ತಂದುಕೊಡುತ್ತಾರೆ. ನಾನು ಮಾಡುವ ಅಡುಗೆ ತಿಂಡಿಗಳನ್ನು ಹೊಗಳಿಕೊಂಡು ತಿನ್ನುತ್ತಾರೆ. ಹಾಗೆ ಅವರು ಹೊಗಳಿದರೆ ನನಗೆ ಅನುಮಾನ ಇನ್ನೂ ಜಾಸ್ತಿಯಾಗುತ್ತದೆ. ಹೊಗಳಿ ಹೊಗಳಿ ನನ್ನನ್ನು ಗುಗ್ಗು ಮಾಡಿ ತಮ್ಮದೇ ದಾರಿಯಲ್ಲಿ ನಡೆಯುತ್ತಾರೇನೋ ಅಂತ. ಅಂತೂ ಸದಾ ಯೋಚನೆಯೇ. ಹೀಗೇ ಯೋಚಿಸಿ ಯೋಚಿಸಿ ತಲೆಗೂದಲೆಲ್ಲ ಉದುರಿಯೇ ಹೋಗುತ್ತಿದೆ. ಏನು ಮಾಡಲಿ ತಿಳಿಯುತ್ತಿಲ್ಲ.

ಉತ್ತರ: ನಿಮ್ಮ ನಾಲ್ಕು ಪುಟಗಳ ಪತ್ರ ಓದಿ ನಿಮ್ಮ ತಲೆಯಲ್ಲಿ ಈ ಅನುಮಾನವೆನ್ನುವ ಭೂತ ಯಾವ ಪರಿಯಲ್ಲಿ ಬೀಡುಬಿಟ್ಟಿದೆಯೆಂದು ಆಶ್ಚರ್ಯವಾಯಿತು. ನಿಜಕ್ಕೂ ನೀವು ಪುಣ್ಯವಂತರು. 23 ವರ್ಷಗಳಿಂದ ನೀವು ಕೊಡುತ್ತಿರುವ ಈ ಅನುಮಾನವೆನ್ನುವ ಕಾಟವನ್ನು ಸಹಿಸಿಕೊಂಡು ನಿಮ್ಮನ್ನು ಪ್ರೀತಿಸುತ್ತ ನಿಮ್ಮ ಗಂಡ ನಿಮ್ಮ ಜೊತೆಯಲ್ಲೇ ಇದ್ದಾರಲ್ಲ? ಅವರಿಗೊಂದು ಮೆಚ್ಚುಗೆಯನ್ನು ಸಲ್ಲಿಸಲೇಬೇಕು. ನಿಮ್ಮ ಜಾಣತನವನ್ನೂ ನಾನು ಮೆಚ್ಚುತ್ತೇನೆ. ನೀವು ‘ನನಗೆ ಅನುಮಾನ’ ವೆನ್ನುವ ಸ್ವಭಾವವಿದೆ ಎನ್ನುವುದನ್ನು ಗುರುತಿಸಿಕೊಂಡಿದ್ದೀರಿ. ಮತ್ತು ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತ ಪತ್ರವನ್ನೂ ಬರೆದಿದ್ದೀರಿ. ಇದೇ ಜಾಣತನವನ್ನು ಉಪಯೋಗಿಸಿ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೂ ಪ್ರಯತ್ನಿಸಿದರೆ ಮುಂದಿನ ನಿಮ್ಮ ಬದುಕು ಸ್ವಲ್ಪ ಮಟ್ಟಿಗಾದರೂ ಹಸನಾಗಬಹುದು. ಸ್ವಲ್ಪ ಸಾವಧಾನವಾಗಿ ಕುಳಿತು ಆಳವಾಗಿ ಯೋಚನೆ ಮಾಡಿ. ನಿಮ್ಮ ಈ ಅನುಮಾನ ಮತ್ತು ಕೂಗಾಡುವ ನಡವಳಿಕೆಗಳಿಂದಾಗಿ ನಿಮ್ಮ ಸಂಸಾರ ಏನೆಲ್ಲ ಸಂಕಷ್ಟವನ್ನು ಅನುಭವಿಸುತ್ತಿದೆ ಎನ್ನುವುದರ ಪರಿವೆ ನಿಮಗಿಲ್ಲ.

ಮೊದಲನೆಯದಾಗಿ ನಿಮ್ಮ ದೊಡ್ಡ ಮಗನ ವಿದ್ಯಾಭ್ಯಾಸ ಕುಂಠಿತವಾಗಿದೆ. ಅಪ್ಪ ಅಮ್ಮ ಇಬ್ಬರೂ ಸದಾ ಜಗಳವಾಡುತ್ತಿದ್ದರೆ ಮಕ್ಕಳಿಗೆ ನೆಮ್ಮದಿಯಾಗಿ ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆಯೇ? ಯೋಚಿಸಿ. ಎರಡನೆಯದಾಗಿ ನಿಮ್ಮ ಕಾರಣಕ್ಕೇ ನಿಮ್ಮ ಚಿಕ್ಕಮಗನನ್ನು ವಸತಿ ಶಾಲೆಗೆ ಸೇರಿಸಬೇಕಾಯಿತು. ಅವನಾದರೂ ಒಳ್ಳೆಯ ವಾತಾವರಣದಲ್ಲಿ ಓದಿ ತನ್ನ ಬದುಕನ್ನು ಚೆನ್ನಾಗಿ ಕಟ್ಟಿಕೊಳ್ಳಲಿ ಎನ್ನುವುದು ನಿಮ್ಮ ಗಂಡನ ಅಭಿಪ್ರಾಯವಾದರೂ, ಆ ಮಗು ತನ್ನದಲ್ಲದ ತಪ್ಪಿಗೆ ಮನೆ ಬಿಟ್ಟು ದೂರ ಉಳಿಯಬೇಕಾಯಿತು. ಮುಂದೊಂದು ದಿನ ಅವನು ಒಳ್ಳೆಯ ಬದುಕನ್ನೇ ಕಟ್ಟಿಕೊಂಡರೂ ‘ಈ ಅಮ್ಮನ ಜಗಳಗಂಟಿತನದ ಕಾರಣವಾಗಿ ನಾನು ಚಿಕ್ಕ ವಯಸ್ಸಿನಲ್ಲೇ ಮನೆಬಿಟ್ಟು ದೂರ ಇರಬೇಕಾಯಿತು’ ಎನ್ನುವ ನೋವು ಉಳಿದುಬಿಡಬಹುದಲ್ಲವೇ? ದೊಡ್ಡ ಮಗನಿಗೂ ‘ಅಮ್ಮನ ಜಗಳಗಂಟಿತನದಿಂದಲೇ ನಾನು ಚೆನ್ನಾಗಿ ಓದಲಿಲ್ಲ, ಒಳ್ಳೆಯ ಕೆಲಸ ಸಿಗಲಿಲ್ಲ’ ಎನ್ನುವ ನೋವು ಕಾಡಬಹುದಲ್ಲವೇ?

ಹೋಗಲಿ, ನಿಮ್ಮ ಈ ಜಗಳಗಂಟಿತನದಿಂದ ನೀವಾದರೂ ನೆಮ್ಮದಿಯಾಗಿದ್ದೀರಾ? ಅದೂ ಇಲ್ಲವಲ್ಲ? ಯೋಚಿಸಿ ತಲೆಗೂದಲು ಉದುರುತ್ತಿದೆ ಎನ್ನುತ್ತೀರಿ. ತಲೆಗೂದಲು ಒಂದೇ ಅಲ್ಲ, ತಲೆಯೊಳಗಿನ ನರಮಂಡಲಗಳೂ ನೀವು ಕೂಗಾಡಿದಷ್ಟೂ ಚಿಂದಿಚಿತ್ರಾನ್ನವಾಗುತ್ತವೆ! ಯಾರ ಮೇಲಾದರೂ ಕೋಪದಿಂದ ಕೂಗಾಡಿದರೆ, ಕೂಗಾಡಿಸಿಕೊಂಡವರು ಒಂದು ಕ್ಷಣ ವಿಚಲಿತರಾಗಿ ನಂತರ ಮರೆತೇ ಬಿಡಬಹುದು. ಆದರೆ ಕೂಗಾಡಿದವರಿಗೆ ಶಾಶ್ವತವಾಗಿ ನರಮಂಡಲಗಳು ಡ್ಯಾಮೇಜ್ ಆಗುತ್ತವೆ.

ನಂತರ ಒಂದಲ್ಲ ಒಂದು ರೋಗದಿಂದ ನರಳಬೇಕಾಗುತ್ತದೆ. ಈಗ ನೀವೇ ಯೋಚಿಸಿ. ದೇಹ ಮತ್ತು ಮಿದುಳಿಗೆ ಇಷ್ಟೆಲ್ಲ ಹಾನಿ ಮಾಡಿಕೊಳ್ಳುವುದು ಒಳ್ಳೆಯದೋ ಅಥವಾ ಈಗಲೇ ಮನೋವೈದ್ಯರ ಹತ್ತಿರ ಹೋಗಿ ತಪಾಸಣೆ ಮಾಡಿಸಿಕೊಂಡು ಔಷಧಿಯನ್ನೂ ಥೆರಪಿಗಳನ್ನೂ ತೆಗೆದುಕೊಂಡು ಮುಂದೆ ಮಕ್ಕಳಿಗೆ ಬೇಕಾದ ತಾಯಿಯಾಗಿ, ಗಂಡನಿಗೆ ಹಿತವೆನಿಸುವ ಹೆಂಡತಿಯಾಗಿ ಬಾಳುವುದು ಒಳ್ಳೆಯದೋ? ನಿಮಗಿನ್ನೂ 42 ವಯಸ್ಸು. ಮುಂದೆ ಇನ್ನೂ 50-60 ವರ್ಷಗಳ ಬದುಕಿದೆ. ಅದನ್ನು ಖಂಡಿತ ನೇರಗೊಳಿಸಿಕೊಳ್ಳಬೇಕೆಂದು ನಿಮಗನ್ನಿಸಬೇಕಲ್ಲವೇ?

ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net