More

    ಅಮ್ಮ ವಿವಾಹಿತನ ಬಲೆಗೆ ಬಿದ್ದಿದ್ದಾಳೆ- ನನ್ನ ಮದುವೆಗಿದು ಅಡ್ಡಗಾಲಾಗುತ್ತಿದೆ… ಏನು ಮಾಡಲಿ?

    ಅಮ್ಮ ವಿವಾಹಿತನ ಬಲೆಗೆ ಬಿದ್ದಿದ್ದಾಳೆ- ನನ್ನ ಮದುವೆಗಿದು ಅಡ್ಡಗಾಲಾಗುತ್ತಿದೆ... ಏನು ಮಾಡಲಿ?ನನ್ನ ತಂದೆ ತೀರಿಕೊಂಡು 10 ವರ್ಷಗಳಾದವು. ಒಬ್ಬಳೇ ಮಗಳಾದ ನನ್ನನ್ನು ನನ್ನ ತಾಯಿ ನನ್ನನ್ನು ಸುಖವಾಗಿಯೇ ಸಾಕಿದರು. ನಾನೀಗ ಉತ್ತರಭಾರತ ಯುವಕನನ್ನು ಇಷ್ಟ ಪಟ್ಟು,  ಮದುವೆಯಾಗುವ ಹಂತಕ್ಕೂ ಬಂದಿದೆ. ಅವನ ಮನೆಯಲ್ಲಿ ಎಲ್ಲರೂ ನನ್ನನ್ನು ಒಪ್ಪಿದ್ದಾರೆ. ನನ್ನ ತಾಯಿ ಸಹ ಒಪ್ಪಿದ್ದಾರೆ. ಆದರೆ ಈಗ ದೊಡ್ಡದೊಂದು ತೊಂದರೆ ಬಂದಿದೆ ಮೇಡಂ . ನನ್ನ ತಾಯಿ ನಾಲ್ಕೈದು ವರ್ಷಗಳಿಂದ ನಮ್ಮ ದೂರದ ಸಂಬಂಧಿಕರೊಬ್ಬರ ಜೊತೆ ಸಾಂಗತ್ಯವನ್ನು ಮಾಡಿಬಿಟ್ಟಿದ್ದಾರೆ. ಆತನಿಗೆ ಹೆಂಡತಿ, ಮಕ್ಕಳು ಎಲ್ಲಾರೂ ಇದ್ದಾರೆ. ಆದರೂ ನಮ್ಮ ತಾಯಿಯ ಜೊತೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ನನಗೆ ಈ ವಿಷಯ ತೀರಾ ಮುಜುಗರವಾಗುತ್ತದೆ. ನನ್ನ ತಾಯಿ ಈ ವಿಷಯವನ್ನು ಕೇಳಿದರೆ ಸಾಕು ಸುಮ್ಮನೇ ಅಳುತ್ತಾರೆಯೇ ವಿನಃ ಏನೂ ಹೇಳುವುದಿಲ್ಲ. ಅವರಿಗೀಗ ೪೫ ವರ್ಷ ವಯಸ್ಸು. ಮಿಕ್ಕೆಲ್ಲಾ ವಿಷಯಗಳಲ್ಲಿ ಅವರು ನನ್ನ ಗೆಳತಿಯಂತೆಯೇ ಇದ್ದಾರೆ.

    ಈ ವಿಚಾರ ಬಂದಾಗ ಮಾತ್ರ ಅವರ ಮಾತು ಹುದುಗಿಯೇ ಹೋಗುತ್ತದೆ. ಮೌನಕ್ಕೆ ಶರಣಾಗಿಬಿಡುತ್ತಾರೆ. ಜಗಳವಾದರೂ ಆದರೆ ನನ್ನ ಕೋಪಕ್ಕೆ, ವಾದಕ್ಕೆ ಹೆದರಿ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳುತ್ತಾರೇನೋ ಎಂದರೆ ಜಗಳವನ್ನೇ ಆಡುವುದಿಲ್ಲ. ಇವರನ್ನು ಯಾವ ಮಾತಿನಿಂದ ಸರಿದಾರಿಗೆ ತರಲಿ ತಿಳಿಯುತ್ತಿಲ್ಲ.  ನನ್ನ ಗೆಳೆಯನಿಗೆ ಮತ್ತು ಅವನ ಮನೆಯವರಿಗೆ ಈ ವಿಷಯ ಗೊತ್ತಿಲ್ಲ. ಗೊತ್ತಾದರೆ ಖಂಡಿತಾ ನನ್ನ ಮದುವೆ ನಿಂತುಹೋಗುತ್ತದೆ. ನಾನೊಮ್ಮೆ ನನ್ನ ಗೆಳೆಯನ ಹತ್ತಿರ “ ನನ್ನ ಕುಟುಂಬದಲ್ಲಿ ಯಾರಾದರೂ ನಡತೆಗೆಟ್ಟವರಿದ್ದಾರೆಂದು ತಿಳಿದರೆ ನೀನು ನನ್ನನ್ನು ಮದುವೆಯಾಗಲು ನಿರಾಕರಿಸುವೆಯಾ?” ಎಂದು ಕೇಳಿದೆ. ಅದಕ್ಕವನೆಂದ “ ನಿನ್ನನ್ನು ನಾನು ಕಾಲೇಜುದಿನಗಳಿಂದಲೂ ನೋಡುತ್ತಿದ್ದೇನೆ. ನೀನು ಯಾವ ರೀತಿಯ ಹುಡುಗಿ ಎನ್ನುವುದು ನನಗೆ ತಿಳಿದಿದೆ, ಬೇರೆಯವರು ಏನಾದರೆ ನನಗೇನು? ನಾನು ಮದುವೆಯಾಗುತ್ತಿರುವುದು ನಿನ್ನನ್ನು “ ಎಂದ. ಆಗ ಸ್ವಲ್ಪ ಸಮಾಧಾನವೇನೋ ಆಯಿತು.

    ಆದರೆ ಆ ನಡತೆಗೆಟ್ಟವರು ನನ್ನ ತಾಯಿಯೇ ಎಂದು ಗೊತ್ತಾದರೆ ಏನೆನ್ನುವನೋ ಎನ್ನುವ ಭಯ. ನನ್ನ ಮದುವೆಗೆ ನನ್ನ ತಾಯಿಯ ಆ ಸಖರೂ ಬಂದುಬಿಟ್ಟರೆ ಎನ್ನುವ ಭಯ! ನನ್ನ ಅತ್ತೆಯ ಮನೆಯ ಜನಕ್ಕೆ ಇವೆಲ್ಲಾ ಗೊತ್ತಾದರೇ ಎನ್ನುವ ಭಯ! ಎಷ್ಟು ಭಯಗಳಲ್ಲಿ ಬದುಕಬೇಕು ಮೇಡಂ ನಾನು? ಮಕ್ಕಳು ಹೀಗೆ ದಾರಿತಪ್ಪಿ ತಾಯಿಯರು ಕೊರಗುವುದು ಈಜಗತ್ತಿನಲ್ಲಿ ಎಲ್ಲೆಡೆ ಇದೆ. ಆದರೆ ನನ್ನ ದುರದೃಷ್ಟ ನೋಡಿ ಇಲ್ಲಿ ತಾಯಿಯೇ ದಾರಿ ತಪ್ಪಿ ಮಗಳು ಕೊರಗುವಂತಾಗಿದೆ! ಈಗ ಇನ್ನೊಂದು ಚಿಂತೆಯೂ ಕಾಡುತ್ತಿದೆ. ಮದುವೆಯಾದ ಮೇಲೆ ನನ್ನಮ್ಮನನ್ನೂ ನನ್ನ ಜೊತೆಗೇ ಇಟ್ಟುಕೊಳ್ಳುತ್ತೇನೆ, ಅವಳಿಗೆ ನಾನೊಬ್ಬಳೇ ದಿಕ್ಕು ಎಂದೆಲ್ಲಾ ಹೇಳಿ ನನ್ನ ಗೆಳೆಯನನ್ನು ಒಪ್ಪಿಸಿದ್ದೆ. ಈಗ ಈ ವಿಷಯವನ್ನು ತಿಳಿದ ಮೇಲೆ ಅವನು ಇದಕ್ಕೆ ಒಪ್ಪುತ್ತಾನೆಯೇ? ನಾನೀಗ ಏನು ಮಾಡಬಹುದು ತಿಳಿಸಿ.

    ಉತ್ತರ: ನಿಮ್ಮ ಸಂಕಟ ನನಗೆ ಅರ್ಥವಾಗುತ್ತದೆ. ನೀವು ಜಾಣೆ ಇದನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿದರೆ ಈಗ ನಿಮಗಾಗುತ್ತಿರುವ ತಳಮಳ ಸ್ವಲ್ಪ ಕಡಿಮೆಯಾಗಬಹುದು, ಮತ್ತು ನಿಮ್ಮನ್ನು ಈ ಬಗ್ಗೆ ಪ್ರಶ್ನಿಸಿದವರಿಗೆ ನೀವು ಬೇರೆಯದೇ ರೀತಿಯಲ್ಲಿ ಉತ್ತರವನ್ನು ಕೊಡಬಹುದು. ಸ್ವಲ್ಪ ನಿಮ್ಮ ತಾಯಿಯ ನೆಲೆಯಲ್ಲಿ ನಿಂತು ಯೋಚಿಸಿ. ಅವರಿಗೆ ಈಗ 45 ವರ್ಷ ವಯಸ್ಸು. ಹತ್ತುವರ್ಷಗಳ ಕೆಳಗೆ ಅಂದರೆ ಕೇವಲ  35 ವರ್ಷ. ಆ ವಯಸ್ಸಿನಲ್ಲಿ ತಮ್ಮ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಸಂಸಾರ ಸುಖವೆನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮುನ್ನವೇ ಅದು ಅವರ ಕೈಯಿಂದ ಜಾರಿಯೇ ಹೋಗಿದೆ. ಒಂದುವೇಳೆ ನಿಮ್ಮ ತಾಯಿಯವರೇ ತೀರಿಹೋಗಿ, ನಿಮ್ಮ ತಂದೆಯವರು ಉಳಿದಿದ್ದರೆ ಅವರು ಖಂಡಿತಾ ಮತ್ತೊಂದು ಮದುವೆಯನ್ನು ರಾಜಾರೋಷವಾಗಿ ಮಾಡಿಕೊಳ್ಳುತ್ತಿದ್ದರಲ್ಲವೇ? ಸಮಾಜವೂ ಅದನ್ನು ಒಪ್ಪುತ್ತಿತ್ತಲ್ಲವೇ? ಆ ವಿಷಯ ನಿಮ್ಮ ಮದುವೆಗೆ ಯಾವ ಅಡ್ಡಿಯನ್ನೂ ಮಾಡುತ್ತಿರಲಿಲ್ಲವಲ್ಲವೇ? ಹೆಣ್ಣನ್ನು ಹತ್ತಿಕ್ಕುವ ನ್ಯಾಯ ಮತ್ತು ಗಂಡಿನ ಬಗ್ಗೆ ಉದಾರವಾದ ನ್ಯಾಯವನ್ನು ನಮ್ಮ ಸಮಾಜ ಮಾಡಿಟ್ಟಿದೆ. ನಿಮ್ಮ ತಾಯಿ ಮಾಡಿರುವುದು ಸರಿಯೆಂದು ಹೇಳುತ್ತಿಲ್ಲ.

    ಆದರೆ ಅದನ್ನೇ ಘೋರ ಅಪರಾಧವೆಂದು ಪರಿಗಣಿಸಬೇಕಾಗಿಲ್ಲ. ದೇಹಸುಖವೆನ್ನುವುದು ಗಂಡಿಗೂ ಬೇಕು ಹೆಣ್ಣಿಗೂ ಬೇಕು. ಅಲ್ಲದೇ ಅದು ಅವರವರ ತೀರಾ ವೈಯುಕ್ತಿಕವಾದ ವಿಚಾರ. ಪರದೇಶದಲ್ಲಾದರೆ ಇವೆಲ್ಲವನ್ನೂ ಆ ಸಮಾಜ ತೀರಾ ಸಹಜವಾಗಿಯೇ ಪರಿಗಣಿಸುತ್ತದೆ. ನಮ್ಮಲ್ಲಿ ಅಂಥಾ ಔದಾರ್ಯವಿಲ್ಲ. ನಿಮ್ಮ ತಾಯಿ ಒಂದು ಸಣ್ಣ ತಪ್ಪನ್ನು ಮಾಡಿದ್ದಾರೆ. ೩೫ವರ್ಷಕ್ಕೇ ಗಂಡನನ್ನು ಕಳೆದುಕೊಂಡ ಅವರು 40ರ ಒಳಗೇ ಸರಿಯಾದ ಮನುಷ್ಯನನ್ನು ಆರಿಸಿ ಮದುವೆಯನ್ನೇ ಮಾಡಿಕೊಳ್ಳಬಹುದಿತ್ತು. ಆದರೆ ಅವರಿಗದು ಸಾಧ್ಯವಾಗದೇ ತಮ್ಮ ಕಾಮನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ.

    ಯಾವುದೋ ದುರ್ಬಲ ಘಳಿಗೆಯಲ್ಲಿ ಹೆಂಡತಿ ಮಕ್ಕಳಿರುವ ಮನುಷ್ಯನ ಬಲೆಗೆ ಬಿದ್ದಿದ್ದಾರೆ. ಈ ವಿಷಯ ಬಂದಾಗ ಅವರು ಅಳುವುದರಲ್ಲಿ ಎರಡು ಸಂದೇಶಗಳನ್ನು ಮೌನವಾಗಿಯೇ ಕೊಡುತ್ತಿದ್ದಾರೆ. ತಮ್ಮ ಕಾಮನೆಗಳನ್ನು ಹತ್ತಿಕ್ಕಲಾರದ ಅಸಹಾಯಕತೆ ಮತ್ತು ಹೆಂಡತಿ ಮಕ್ಕಳಿರುವವನ ಸಾಂಗತ್ಯಕ್ಕೆ ಬಿದ್ದ ಪಾಪಪ್ರಜ್ಞೆ. ಈ ಎರಡನ್ನೂ ಅವರು ಯಾವ ಮಾತುಗಳಲ್ಲಿ ನಿಮ್ಮ ಮುಂದೆ ಹೇಳಿಯಾರು? ನೀವೇ ಯೋಚಿಸಿ.

    ಈ ಸಂಕಟದಿಂದ ಪಾರಾಗಲು ನೀವೀಗ ಒಂದು ಜಾಣತನದ ನಡೆಯನ್ನು ಚಲಿಸಬೇಕು. ನಿಮ್ಮನ್ನು ಮದುವೆಯಾಗಲಿರುವವನ ಮುಂದೆ ಕುಳಿತು ಯಾವುದನ್ನೂ ಮುಚ್ಚಿಡದೇ ಎಲ್ಲವನ್ನೂ ವಿವರವಾಗಿಯೇ ತಿಳಿಸಿ. ಹಾಗೆ ತಿಳಿಸುವಾಗ ನಿಮ್ಮ ತಾಯಿಯದು ತಪ್ಪು ಎನ್ನುವ ಭಾವ ನಿಮ್ಮದಾಗಿರಬಾರದು. ಅವರ ಅಸಹಾಯಕತೆಯನ್ನು ಮತ್ತು ಅವರ ವಯಸ್ಸಿಗೆ ತಕ್ಕ ಅಗತ್ಯವನ್ನೂ ಮನದಲ್ಲಿಟ್ಟುಕೊಂಡೆ ಮಾತಾಡಿ. ನಿಮ್ಮ ತಾಯಿಯದು ಹೆಚ್ಚೇನೂ ತಪ್ಪಲ್ಲ ಎನ್ನುವ ಭಾವವನ್ನು ನೀವೂ ಮನಗಂಡು, ನಿಮ್ಮ ಗೆಳೆಯನೂ ಮನಗಾಣುವಂತೆ ಮಾಡಿ. ಮತ್ತು ಮದುವೆಯನ್ನು ಆದಷ್ಟೂ ಸರಳವಾಗಿಸಿಕೊಂಡರೆ, ಈ ವಿಷಯ ಹೆಚ್ಚು ಬಹಿರಂಗವಾಗುವ ಪ್ರಮೇಯವೇ ಬರುವುದಿಲ್ಲ. ಹೇಗೂ ಈಗ ಕರೋನ ಕಟ್ಟುಪಾಡಿದೆ.

    ಇದು ನಿಮಗೆ ವರವೆಂದೇ ಬಗೆಯಿರಿ. ಇನ್ನು ಮದುವೆಯಾದ ಮೇಲೆ ನಿಮ್ಮ ತಾಯಿಗೆ ನೀವೇ ದಿಕ್ಕಾಗಬೇಕು ಎನ್ನುವ ಚಿಂತೆಯನ್ನು ಬಿಡಿ. ತಮ್ಮ ಅಗತ್ಯಕ್ಕೆ ಒಬ್ಬರನ್ನು ಜೊತೆ ಮಾಡಿಕೊಂಡಂತೆ, ಒಂಟಿ ಬದುಕಿಗೂ ಅವರೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕಲ್ಲವೇ?. ಇವರ ಜೊತೆ ಸುಖ ಪಡುತ್ತಿರುವ ಆ ಮನುಷ್ಯನಿಗೂ ಇವರ ಕಾಳಜಿ ಇರಬೇಕಲ್ಲವೇ? ಅದನ್ನು ಅವರವರೇ ನಿರ್ಧರಿಸಿಕೊಳ್ಳಲಿ. ಆ ಚಿಂತೆಯನ್ನು ನೀವೇಕೆ ಮಾಡುತ್ತೀರಿ?

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಮಿಸ್ಡ್ ಕಾಲ್​ನಿಂದ ಶುರುವಾದ ಪರಿಚಯ ಈಗ ಏನೇನೋ ಆಗಿದೆ… ಇದು ನಿಜವಾದ ಪ್ರೀತಿಯೆ? ಹೇಗೆ ತಿಳಿಯಲಿ?

    ಕಟ್ಟಿಕೊಂಡಾಕೆ, ಇಟ್ಟುಕೊಂಡಾಕೆ… ಇಬ್ಬರಿಗೂ ಅನ್ಯಾಯ ಮಾಡಲಾಗದೇ ಹೈರಾಣಾಗಿದ್ದೇನೆ… ದಾರಿ ತೋರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts