

ಆಕಸ್ಮಿಕವಾಗಿ ಒಂದು ದಿನ ಆ ಹುಡುಗ ನಾನು ಶಾಪಿಂಗ್‍ಗೆ ಹೋದಾಗ ಸಿಕ್ಕಿ ಮಾತನಾಡಿಸಿದ. ಹೀಗೆ ಎರಡು ಮೂರು ಬಾರಿ ಆಕಸ್ಮಿಕವಾಗಿಯೇ ಭೇಟಿಯಾಗಿ ಮಾತಾಡಿದೆವು. ಅಷ್ಟು ಹೊತ್ತಿಗೆ ಇಬ್ಬರಲ್ಲೂ ಒಬ್ಬರ ಬಗ್ಗೆ ಒಬ್ಬರಿಗೆ ಆಸಕ್ತಿ ಹುಟ್ಟಿತು. ಇದನ್ನು ನಾನು ಮನೆಯವರಿಗೆ ಹೇಳಿರಲಿಲ್ಲ. ನಾವು ಪರಸ್ಪರ ಫೋನ್ನಲ್ಲಿ ಮಾತನಾಡುತ್ತ ಮತ್ತಷ್ಟು ಹತ್ತಿರವಾದೆವು. ಹೀಗೆ ಎರಡು ವರ್ಷಗಳು ಕಳೆದವು.
ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದೆವು. ಆಗ ಇಬ್ಬರ ಮನೆಯಲ್ಲೂ ಮತ್ತೆ ನಮ್ಮ ಮದುವೆಯ ಬಗ್ಗೆ ಮಾತುಕತೆಯನ್ನು ಮುಂದುವರಿಸಲು ಜಾತಕ ತೋರಿಸಿದರು. ಅದು ಕೂಡುವುದಿಲ್ಲವೆಂದು ತಿಳಿಯಿತು. ನಾನು ತೀರಾ ಹತಾಶಳಾದೆ. ಆಗ ನನ್ನ ಹುಡುಗ ನೀನೇನು ಯೋಚಿಸಬೇಡ, ನಾನು ದೇವಸ್ಥಾನದಲ್ಲಿ ದೇವರ ಮುಂದೆ ಚೀಟಿ ಹಾಕಿ ಶಾಸ್ತ್ರ ಕೇಳಿ ಒಪ್ಪಿಸುತ್ತೇನೆ ಎಂದು ನನ್ನನ್ನು ನಂಬಿಸಿದ. ಕೆಲವು ದಿನಗಳು ಕಾದೆ. ನಂತರ ಫೋನ್ ಮಾಡಿದರೆ ಅವನಿಂದ ಸರಿಯಾದ ಉತ್ತರ ಬರಲಿಲ್ಲ. ಆಮೇಲೆ ತಿಳಿಯಿತು, ಅವನು ಮತ್ತೊಬ್ಬ ಹುಡುಗಿಯನ್ನು ನೋಡಿ ಒಪ್ಪಿ, ಮದುವೆಯೂ ಆಗಿದ್ದಾನೆ ಅಂತ. ನನಗೀಗ ತೀರಾ ನಿರಾಸೆಯಾಗಿದೆ ಮೇಡಂ. ಏನು ಮಾಡಿದರೂ ಅವನನ್ನು ಮರೆಯಲಾಗುತ್ತಿಲ್ಲ. ಹೇಗೆ ಇದರಿಂದ ಹೊರಬರಲಿ?
ಉತ್ತರ: ನಿಮಗೀಗ ಆಗುತ್ತಿರುವ ಬೇಸರವನ್ನು ಕಳೆದುಕೊಳ್ಳಲು ನಿಮ್ಮ ಸಮಸ್ಯೆಯನ್ನು ಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡಲು ಪ್ರಯತ್ನಿಸಿ. ನಿಮ್ಮಿಬ್ಬರ ಮನೆಯ ಹಿರಿಯರು ನಿಮ್ಮನ್ನು ಭೇಟಿಮಾಡಿಸುವ ಮೊದಲು ಜಾತಕಗಳನ್ನು ತೋರಿಸಿ ಅದು ಕೂಡಿದರೆ ಮಾತ್ರ ನಿಮ್ಮನ್ನು ಆತನಿಗೆ ಪರಿಚಯಿಸಬೇಕಾಗಿತ್ತಲ್ಲವೇ? ಇದು ಅವರು ಮಾಡಿದ ಮೊದಲ ತಪ್ಪು. ಎರಡನೆಯದಾಗಿ ನೀವಿಬ್ಬರು ಪರಸ್ಪರ ಭೇಟಿಯಾಗಿ ಫೋನಿನಲ್ಲಿಯೇ ಪ್ರೇಮ ಸಲ್ಲಾಪಗಳನ್ನು ವಿನಿಮಯ ಮಾಡುವ ಮೊದಲು ಇಬ್ಬರೂ ನಿಮ್ಮನಿಮ್ಮ ಹಿರಿಯರಿಗೆ ಒಂದು ಮಾತು ತಿಳಿಸಬೇಕಾಗಿತ್ತಲ್ಲವೇ? ಈ ವಿಚಾರವೆಲ್ಲ ಇರಲಿ.
ನಿಮ್ಮ ಕೈಯಲ್ಲಿಯೇ ಇದ್ದ ಮತ್ತೊಂದು ಅವಕಾಶವೆಂದರೆ ಆತ `ಪ್ರೀತಿಸೋಣ' ಎಂದಾಗ `ನಿಮ್ಮ ಮನೆಯ ಹಿರಿಯರನ್ನು ಮೊದಲು ಒಪ್ಪಿಸಿ' ಎನ್ನುವ ಸಲಹೆಯನ್ನು ನೀವೇ ಕೊಡಬಹುದಿತ್ತಲ್ಲವೇ? ಇನ್ನು ನಾಲ್ಕನೆಯದಾಗಿ ಈಗ ನೀವು ' ಯಾರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ' ಎಂದು ಕೊರಗುತ್ತಿದ್ದಿರೋ ಆತನ ಯೋಗ್ಯತೆಯನ್ನಾದರೂ ಒಮ್ಮೆ ಬೇರೆ ರೀತಿಯಲ್ಲಿ ಅರಿಯುವ ಪ್ರಯತ್ನ ಮಾಡಿ.
ಎರಡು ವರ್ಷಗಳ ಕಾಲ ನಿಮ್ಮೊಡನೆ ಪ್ರೇಮ, ಪ್ರೀತಿ ಅಂತ ಕಾಲಕಳೆದು, ಈಗ ಜಾತಕದ ಕಾರಣ ನಿಮಗೂ ತಿಳಿಸದೇ ಮತ್ತೊಂದು ಮದುವೆಯಾದವನು ನೀವು ಕೊರಗುವಷ್ಟು ಯೋಗ್ಯನೆ? ಅಕಸ್ಮಾತ್ ನಿಮ್ಮನ್ನೇ ಅವನು ಮದುವೆಯಾಗಿ, ಮನೆಯಲ್ಲಿ ಏನಾದರೂ ತೊಂದರೆಯಾದರೆ ನಿನ್ನ ಜಾತಕ ಸರಿಯಿಲ್ಲ ಅದಕ್ಕೆ ತೊಂದರೆ ಎಂದು ನಿಮ್ಮನ್ನು ಹೀಯಾಳಿಸುತ್ತಲೇ ಇದ್ದರೆ, ಅಂಥವನ ಜತೆ ಬದುಕು ಸುಗಮವಾಗಿತ್ತದೆಯೇ? ಜಾತಕ ಅಂತೆಲ್ಲ ನಂಬುವ, ನಿಮ್ಮಂಥ ಕೋಮಲ ಮನಸ್ಸಿನ ಹುಡುಗಿಯರ ಹೃದಯವನ್ನು ತನ್ನ ಆಟದ ವಸ್ತುವನ್ನಾಗಿಕೊಳ್ಳುವ ಕ್ರೂರ ಮನಸ್ಸಿನ ಮನುಷ್ಯ, ದೇವರ ದಯೆಯಿಂದ ನಿಮ್ಮ ಬದುಕಿನಿಂದ ದೂರಾದ ಅಂತ ನೀವು ಸಮಾಧಾನ ನಿಟ್ಟುಸಿರುಬಿಡುವುದನ್ನು ಬಿಟ್ಟು ಕೊರಗುತ್ತೀರಲ್ಲ?
ನಿಮ್ಮ ಬುದ್ಧಿವಂತಿಕೆಗೆ ಏನೆನ್ನಲಿ? ನೀವು ಹುಡುಗಿಯರು ಎಲ್ಲಿಯವರೆಗೆ ನಿಮ್ಮ ಹೃದಯಗಳನ್ನು ಆಟದ ಚೆಂಡನ್ನಾಗಿಸಿ, ಬೇಕಾದಾಗ ಪುಟವಿಟ್ಟು ಆಟವಾಡಲು, ಬೇಡವಾದಾಗ ಎಸೆಯಲು ಅನುವುಮಾಡಿಕೊಡುತ್ತಿರೋ, ಅಲ್ಲಿಯವರೆಗೆ ಈ ಗಂಡುಗಳು ಹೀಗೆ ಆಟವಾಡುತ್ತಿರುತ್ತಾರೆ. ಸಾಕಿನ್ನು, ಹಳೆಯ ನೆನಪುಗಳನ್ನೆಲ್ಲ ಕೊಳೆಯನ್ನು ಝಾಡಿಸಿದಂತೆ ಗಾಳಿಗೆ ತೂರಿಬಿಡಿ. ಅವನಿಗಿಂತ ನೂರರಷ್ಟು ಒಳ್ಳೆಯ ಹುಡುಗ ನಿಮಗಾಗಿ ಕಾಯುತ್ತಿರಬಹುದು!
ಡಾ.ಶಾಂತಾ ನಾಗರಾಜ್ ಅವರ ಇನ್ನಷ್ಟು ಸಲಹೆಗಳಿಗೆ ಕ್ಲಿಕ್ಕಿಸಿ: