ಪತ್ನಿ, ಲವರ್‌ ಮಧ್ಯೆ ಸಿಲುಕಿ ಹೈರಾಣಾಗಿದ್ದೇನೆ, ಇಬ್ಬರೂ ಬೇಕು... ಏನು ಮಾಡಲಿ?

nandondukathe
Published on
ನನಗೆ 30 ವರ್ಷ. ಸ್ವಂತ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದೇನೆ. ಮದುವೆಯಾಗಿ ಮಗಳಿದ್ದಾಳೆ. ಪಿಯುಸಿ ಓದಿದ ನಂತರ ಒಬ್ಬ ಹುಡುಗಿ ಆಕಸ್ಮಿಕವಾಗಿ ಪರಿಚಯವಾದಳು. ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದೆವು. ಆದರೆ ಅವಳ ತಂದೆ ತಾಯಿ ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಿಬಿಟ್ಟರು. ಆದರೂ ಅವಳು ನನ್ನೊಂದಿಗೆ ದಿನವೂ ಫೋನಿನಲ್ಲಿ ಮಾತಾಡುತ್ತಿದ್ದಳು. ನನಗೂ ಅವಳನ್ನು ಬಿಟ್ಟಿರಲಾರದಷ್ಟು ಮೋಹ.

ನಮ್ಮ ಮನೆಯಲ್ಲೂ ನನಗೆ ಮದುವೆ ಮಾಡಿದರು. ಆದರೂ ನಮ್ಮಿಬ್ಬರ ಫೋನಿನ ಪ್ರೇಮ ಸಂಭಾಷಣೆ ನಿಲ್ಲಲಿಲ್ಲ. ಈ ಮಧ್ಯೆ, ನನ್ನ ಹುಡುಗಿಯ ಗಂಡ ಕುಡಿದೂ ಕುಡಿದೂ ಸತ್ತು ಹೋದ. ಅವಳಿಗೆ ಮೂರುಜನ ಗಂಡು ಮಕ್ಕಳು. ಅವನು ಕುಡಿತಕ್ಕಾಗಿ ಸ್ವಂತ ಮನೆಯನ್ನೂ ಬ್ಯಾಂಕಿನಲ್ಲಿ ಅಡವಿಟ್ಟಿದ್ದಲ್ಲದೆ ಕೈ ಸಾಲವನ್ನೂ ತುಂಬ ಮಾಡಿಕೊಂಡಿದ್ದ. ಅವಳಿಗಾಗಿ ಸಾಲ ಮಾಡಿ ಮನೆ ಬಿಡಿಸಿಕೊಟ್ಟೆ. ಅವನ ಸಾಲವನ್ನೆಲ್ಲ ತೀರಿಸಿದೆ. ಅವಳ ಮಕ್ಕಳನ್ನು ಒಳ್ಳೆಯ ಸ್ಕೂಲಿಗೆ ಸೇರಿಸಿ ಓದಿಸುತ್ತಿದ್ದೇನೆ. ಒಂದು ದಿನ ಯಾವುದೋ ದೇವಸ್ಥಾನದಲ್ಲಿ ನನ್ನಿಂದ ತಾಳಿ ಕಟ್ಟಿಸಿಕೊಂಡು ‘ನೀನೇ ನನ್ನ ಗಂಡ’ ಎಂದು ಅವಳು ಹೇಳಿದ್ದಾಳೆ. ನಾವಿಬ್ಬರೂ ಗಂಡಹೆಂಡತಿಯರ ಹಾಗೇ ಜೀವಿಸುತ್ತಿದ್ದೇವೆ. ಆದರೆ ಹೆಂಡತಿಗೆ ನಾನು ಏನೂ ಕಡಿಮೆ ಮಾಡಿಲ್ಲ. ಇತ್ತೀಚೆಗೆ ಹೆಂಡತಿಗೆ ನಮ್ಮ ವಿಷಯ ತಿಳಿದು, ಜಗಳ ಮಾಡಿದಳು. ಈಗ ಇಬ್ಬರು ಹೆಂಗಸರ ನಡುವೆ ಜೀವನ ನರಕವಾಗಿದೆ. ನನಗಂತೂ ಆತ್ಮಹತ್ಯೆ ಮಾಡಿಕೊಂಡು ಬಿಡೋಣ ಎನಿಸುತ್ತದೆ. ಗೆಳತಿ ‘ನಾನು ಕೆಲಸಕ್ಕೆ ಸೇರಿ ಮಕ್ಕಳನ್ನು ಸಾಕುತ್ತೇನೆ’ ಅಂತ ಹಠ ಮಾಡುತ್ತಿದ್ದಾಳೆ.

ನನಗೆ ಈ ಮಾತನ್ನು ಕೇಳಿದರೆ ಕೋಪ ಬರುತ್ತದೆ. ನಾನು ಅವಳನ್ನೂ ಮಕ್ಕಳನ್ನೂ ಎಷ್ಟು ಚೆನ್ನಾಗಿ ನೋಡಿಕೊಂಡರೂ ಹೀಗೆ ಹೇಳುವುದು ಸರಿಯಾ? ಇತ್ತ ಹೆಂಡತಿ ಸಹ ‘ಅವಳನ್ನು ಬಿಟ್ಟುಬಿಡು’ ಅಂತ ಗಲಾಟೆ ಮಾಡುತ್ತಿದ್ದಾಳೆ. ನನಗೆ ಗೆಳತಿಯನ್ನೂ ಬಿಡಲು ಇಷ್ಟವಿಲ್ಲ. ಇತ್ತ ಹೆಂಡತಿ ಮತ್ತು ಮಗಳನ್ನು ದೂರಮಾಡಿಕೊಳ್ಳಲೂ ಇಷ್ಟವಿಲ್ಲ. ನಾನಂತೂ ಏನೂ ತಪ್ಪು ಮಾಡಿಲ್ಲ. ಆದರೂ ಇಂಥ ಚಿಂತೆ ನನ್ನನ್ನು ಕಾಡುತ್ತಿದೆ. ಏನು ಮಾಡಲಿ ತಿಳಿಸಿ.

ಉತ್ತರ: ನಿಮ್ಮಲ್ಲಿ ‘ನಾನು ಗಂಡಸು, ಏನು ಮಾಡಿದರೂ ತಪ್ಪಿಲ್ಲ’ ಎನ್ನುವ ಭಾವ ಇರುವುದರಿಂದ ‘ನಾನಂತೂ ಏನೂ ತಪ್ಪು ಮಾಡಿಲ್ಲ, ಅವಳನ್ನೂ ಚೆನ್ನಾಗಿ ನೋಡಿಕೊಂಡಿದ್ದೇನೆ, ಇವಳನ್ನೂ ಚೆನ್ನಾಗಿಯೇ ನೋಡಿಕೊಂಡಿದ್ದೇನೆ, ಗೆಳತಿ ಕೆಲಸಕ್ಕೆ ಸೇರಿಕೊಂಡು ತನ್ನ ಮಕ್ಕಳನ್ನು ಸಾಕುತ್ತೇನೆ ಎಂದರೆ ನನಗೆ ಕೋಪ ಬರುತ್ತದೆ’ ಇಂಥ ಮಾತುಗಳನ್ನು ಬರೆದಿದ್ದೀರಿ.

ಸ್ವಲ್ಪ ನಿಧಾನವಾಗಿ ಯೋಚನೆ ಮಾಡಿ. ಒಂದು ವೇಳೆ ನಿಮ್ಮ ಮದುವೆಯಾದ ನಂತರ ನಿಮ್ಮ ಹೆಂಡತಿ ‘ನನಗೆ ಬಹಳ ದಿನಗಳಿಂದ ಒಬ್ಬ ಪ್ರಿಯಕರನಿದ್ದ, ಅವನು ಕಾರಣಾಂತರಗಳಿಂದ ಬೇರೆ ಮದುವೆ ಮಾಡಿಕೊಂಡ. ಈಗ ಅವನ ಹೆಂಡತಿ ಮಕ್ಕಳನ್ನು ಬಿಟ್ಟು ಸತ್ತು ಹೋಗಿದ್ದಾಳೆ, ನಾನು ಅವನನ್ನೂ ಮಕ್ಕಳನ್ನೂ ಅವನ ಹೆಂಡತಿಯಂತೆಯೇ ನೋಡಿಕೊಳ್ಳುತ್ತೇನೆ. ಹಾಗೆಯೇ ನಿಮ್ಮನ್ನೂ ನಿಮ್ಮ ಮಗಳನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ, ನಾನು ಅವನನ್ನು ಪ್ರೀತಿಸುತ್ತೇನೆ, ನಿಮ್ಮನ್ನೂ ಬಿಟ್ಟಿರಲಾರೆ’ ಎಂದು ಹೇಳಿದರೆ ನಿಮ್ಮ ಉತ್ತರ ಏನಿರುತ್ತದೆ? ‘ಆಗಲಿ ಹಾಗೇ ಮಾಡೋಣ’ ಎಂದು ಒಪ್ಪಿಕೊಳ್ಳುತ್ತೀರಾ? ಇಲ್ಲ ತಾನೆ? ಹಾಗೇ ಈ ಹುಚ್ಚಾಟಗಳನ್ನೆಲ್ಲ ನಿಮ್ಮ ಹೆಂಡತಿಯೂ ಒಪ್ಪುವುದಿಲ್ಲ, ಒಪ್ಪಲೂಬಾರದು. ‘ನಾನೇನೂ ತಪ್ಪು ಮಾಡಿಲ್ಲ’ ಎನ್ನುವ ತೀರ್ಪನ್ನು ನಿಮಗೇ ನೀವೇ ಕೊಟ್ಟುಕೊಂಡಿದ್ದೀರಲ್ಲ?

ಸಮಾಜದ ಮತ್ತು ಕಾನೂನಿನ ದೃಷ್ಟಿಯಿಂದ ನೀವೇನೇನು ತಪ್ಪು ಮಾಡಿದ್ದೀರಿ ಎಂದು ಪಟ್ಟಿ ಮಾಡುತ್ತೇನೆ ನೋಡಿ. 1) ನಿಮ್ಮ ಗೆಳತಿಯ ಮದುವೆಯಾದ ಮೇಲೂ ಫೋನಿನಲ್ಲಿ ಅವಳ ಜೊತೆ ಪ್ರೇಮ ಸಂಭಾಷಣೆ ಮಾಡಿದ್ದು.(ಇದನ್ನು ಸಮಾಜ ಒಳ್ಳೆಯ ನಡವಳಿಕೆ ಎನ್ನುವುದಿಲ್ಲ.)

2) ಅವಳ ಗಂಡ ಮಾಡಿದ ಸಾಲವನ್ನು ನೀವೇ ಸಾಲ ಮಾಡಿಯಾದರೂ ತೀರಿಸಿದ್ದು. (ಇದು ನೀವು ನಿಮ್ಮ ಹೆಂಡತಿಗೆ ಮಾಡಿದ ಮೋಸ )

3) ನಿಮಗಿರುವ ಒಬ್ಬ ಮಗಳನ್ನು ಚೆನ್ನಾಗಿ ಓದಿಸುವುದು ನಿಮ್ಮ ಕರ್ತವ್ಯ. ಅದುಬಿಟ್ಟು ನಿಮ್ಮ ಹಳೆಯ ಪ್ರೇಮಿಯ ಮೂವರು ಮಕ್ಕಳನ್ನು ಆಡಂಬರವಾಗಿ ಹಣ ಖರ್ಚು ಮಾಡಿ ಆಂಗ್ಲಶಾಲೆಗೆ ಸೇರಿಸಿ ಓದಿಸುತ್ತಿರುವುದು. (ಇದು ನಿಮ್ಮ ಮಗಳಿಗೆ ಮಾಡಿದ ಮೋಸ)

4) ಒಬ್ಬ ಹೆಂಡತಿಯಿದ್ದೂ ಮತ್ತೊಬ್ಬಳಿಗೆ ತಾಳಿ ಕಟ್ಟಿದ್ದು (ಕಾನೂನಿನ ದೃಷ್ಟಿಯಿಂದ ಇದು ಅಪರಾಧ).

5) ಗೆಳತಿಯನ್ನು ಹೆಂಡತಿಯೆಂದೇ ಭಾವಿಸುತ್ತೇನೆ ಎನ್ನುವುದು (ಇದೂ ಹೆಂಡತಿಗೆ ಮಾಡುತ್ತಿರುವ ಮೋಸ).

6) ನಿಮ್ಮ ಗೆಳತಿ ತಾನು ಉದ್ಯೋಗ ಮಾಡಿ ಸ್ವತಂತ್ರವಾಗಿ ಮಕ್ಕಳನ್ನು ಸಾಕುತ್ತೇನೆಂದರೆ ನಿರಾಕರಿಸುವುದು (ಇದು ಗೆಳತಿಗೂ ಮಾಡುತ್ತಿರುವ ಮೋಸ. ಅವಳ ಸ್ವಾತಂತ್ರ್ಯ್ಕೆ ಅಡ್ಡಿಮಾಡುತ್ತಿರುವ ತಪ್ಪು)

7) ಈ ಇಬ್ಬರು ಹೆಂಗಸರಿಂದ ಜೀವನ ನರಕವಾಗುತ್ತಿದೆ ಎಂದು ಕೊರಗುವುದು (ಅವರಿಬ್ಬರೂ ನೀವು ಹೀಗೆ ಮಾಡಿಕೊಳ್ಳಿ ಎಂದೇನೂ ಕೇಳಿಕೊಳ್ಳಲಿಲ್ಲ).

8) ಎಲ್ಲಕ್ಕಿಂತ ದೊಡ್ಡ ತಪ್ಪು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಿಂತಿಸುತ್ತಿರುವುದು (ಇದನ್ನು ದೇವರೂ ಒಪ್ಪಲಾರ) ಈಗ ಹೇಳಿ? ನೀವೇನೂ ತಪ್ಪೇ ಮಾಡಿಲ್ಲವೇ?

ಆದರೂ… ಚಿಂತೆ ಮಾಡಬೇಡಿ. ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈಗಲೂ ಕಾಲಾವಕಾಶವಿದೆ. ಏಕೆಂದರೆ ನಿಮಗಿನ್ನೂ 30 ವರ್ಷ. ನಿಮ್ಮ ಮುಂದೆ ಸುದೀರ್ಘ ಜೀವನ ಹಾಸಿ ಮಲಗಿದೆ. ಅದನ್ನು ನೆಮ್ಮದಿಯಿಂದ ಸಂಭಾಳಿಸುವುದು ನಿಮ್ಮ ಕೈಯಲ್ಲೇ ಇದೆ. ಇದುವರೆಗೂ ನಿಮ್ಮ ಗೆಳತಿಗೆ ಮಾಡಿದ ಹಣಸಹಾಯವನ್ನು ಒಂದು ಪುಣ್ಯಕಾರ್ಯಕ್ಕೆ ಮಾಡಿದೆ ಎಂದು ತಿಳಿದು ಇಲ್ಲಿಗೆ ನಿಲ್ಲಿಸಿ. ನಿಮ್ಮ ಗೆಳತಿ ಉದ್ಯೋಗ ಹಿಡಿದು ತನ್ನ ಬದುಕನ್ನು ನಡೆಸಿಕೊಳ್ಳಲಿ. ಇನ್ನು ಅವಳೊಂದಿಗಿನ ಸಂಬಂಧವನ್ನು ಮುಗಿಸಿ. ಇಲ್ಲದಿದ್ದರೆ ನಾಳೆ ನಿಮ್ಮ ಮಗಳು ದೊಡ್ಡವಳಾದ ಮೇಲೆ ಇಬ್ಬರು ಗಂಡಸರ ಜತೆ ಜೀವನ ಮಾಡುತ್ತೇನೆ ಎಂದರೆ ನಿಮಗೆ ಬೇಡ ಎನ್ನಲೂ ಅಧಿಕಾರವಿರುವುದಿಲ್ಲ. ನಿಮ್ಮ ಗೆಳತಿಯ ಗಂಡು ಮಕ್ಕಳು ಮನಬಂದಂತೆ ವರ್ತಿಸಿದರೂ ನೀವು ಅವರನ್ನು ತಪ್ಪು ಎನ್ನುವಂತಿಲ್ಲ. ಅವರೂ ಕೇಳಬಹುದು ‘ನೀವು ಜೀವನದ ಉದ್ದಕ್ಕೂ ಇಬ್ಬರು ಹೆಂಗಸರ ಜೊತೆ ಬದುಕಿದ್ದೀರಲ್ಲ? ನೀವೇ ಸರಿಯಿಲ್ಲ, ನಮಗೆ ಯಾಕೆ ಹೇಳುತ್ತೀರಿ’? ಅಂತ! ಇದು ಬೇಕಾ ನಿಮಗೆ? ಮಕ್ಕಳ ಮುಂದೆ ನಮ್ಮ ಒಂದೊಂದು ನಡವಳಿಕೆಯೂ ಶುದ್ಧವಾಗಿರಬೇಕು. ಇಲ್ಲದಿದ್ದರೆ ಅವರಿಗೆ ನಾವು ತಿಳಿವಳಿಕೆ ಹೇಳುವ ಯೋಗ್ಯತೆಯನ್ನೇ ಕಳೆದುಕೊಂಡು ಬಿಡುತ್ತೇವೆ.

ಮಾನಸಿಕ ಆರೋಗ್ಯದ ಸಲುವಾಗಿ, ಸಮಾಜದಿಂದ ಸಿಗುವ ಗೌರವದ ಸಲುವಾಗಿ, ನಮ್ಮದೇ ಮಕ್ಕಳ ನೈತಿಕ ನಡವಳಿಕೆಯ ಸಲುವಾಗಿ ‘ಒಬ್ಬ ಗಂಡನಿಗೆ ಒಬ್ಬ ಹೆಂಡತಿ, ಒಬ್ಬ ಹೆಂಡತಿಗೆ ಒಬ್ಬ ಗಂಡ’ ಎನ್ನುವ ನಿಯಮವನ್ನು ನಮ್ಮ ಸಮಾಜ ಅಂಗೀಕರಿಸಿದೆ. ಅದನ್ನು ಮೀರಿದವರೆಲ್ಲ ನಿಮ್ಮ ಹಾಗೆ ನೆಮ್ಮದಿ ಕಳೆದುಕೊಂಡು ಬದುಕನ್ನು ನರಕವಾಗಿಸಿಕೊಳ್ಳುತ್ತಾರೆ. ಈಗಲಾದರೂ ಎಚ್ಚೆತ್ತುಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net