More

    ಮಗನ ಡೆತ್​ನೋಟ್​ ನೋಡಿ ಪಾಪಪ್ರಜ್ಞೆಯಿಂದ ಬಳಲುತ್ತಿರುವೆ- ನಾನು ತಪ್ಪು ಮಾಡಿಬಿಟ್ನಾ?

    ಮಗನ ಡೆತ್​ನೋಟ್​ ನೋಡಿ ಪಾಪಪ್ರಜ್ಞೆಯಿಂದ ಬಳಲುತ್ತಿರುವೆ- ನಾನು ತಪ್ಪು ಮಾಡಿಬಿಟ್ನಾ?ನಾನು 50 ವರ್ಷದ ಗೃಹಿಣಿ. ಪತಿ ಕೃಷಿಕರು. ಇಬ್ಬರು ಗಂಡು ಮಕ್ಕಳು. ನಾವು ಹಳ್ಳಿಯಲ್ಲೇ ಇದ್ದರೂ ಮಕ್ಕಳು ಇಬ್ಬರೂ ಇಂಜಿನಿಯರಿಂಗ್ ಮುಗಿಸಿದ್ದಾರೆ. ಮಕ್ಕಳು ವಿವೇಕವಂತರೂ ವಿನಯವಂತರೂ ಆಗಿ ನಮ್ಮೂರಿನವರೆಲ್ಲಾ ‘ಮಕ್ಕಳು ಇದ್ದರೆ ಹೀಗಿರಬೇಕು’ ಎಂದು ಹೊಗಳುತ್ತಿದ್ದರು. ಹೀಗಿದ್ದ ನಮ್ಮ ಆದರ್ಶ ಸಂಸಾರದಲ್ಲಿ ಬಿರುಗಾಳಿ ಬೀಸಿತು. ಅದರಿಂದ ಇನ್ನೂ ಹೊರಬರಲಾಗದೇ ತತ್ತರಿಸುತ್ತಿದ್ದೇನೆ. ದೊಡ್ಡ ಮಗ ಓದುತ್ತಿರುವಾಗಲೇ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಬಿದ್ದುಬಿಟ್ಟ. ಮೊದಮೊದಲು ನಮಗೆ ಗೊತ್ತಾಗಲೇ ಇಲ್ಲ. ಲಕ್ಷಾಂತರ ಸಾಲ ಮಾಡಿ ಮನೆಗೆ ಬಂದಾಗ ವಿಷಯ ಗೊತ್ತಾಯಿತು. ಆದರೂ ಎದೆಗುಂದದ ನಾನು, ಅವನನ್ನು ಮನೋವೈದ್ಯರ ಹತ್ತಿರ ತೋರಿಸಿ ಚಿಕಿತ್ಸೆ ಕೊಡಿಸಿ ಕಷ್ಟಪಟ್ಟು ಸಾಲವನ್ನೆಲ್ಲ ತೀರಿಸಿ, ಅವನಿಂದ ‘ನಾನಿನ್ನು ಒಳ್ಳೆಯ ಬಾಳನ್ನು ಬಾಳುತ್ತೇನೆ’ ಎಂದು ಭಾಷೆ ತೆಗೆದುಕೊಂಡು, ಮತ್ತೆ ಓದಲು ಕಳಿಸಿದೆ.

    ನಮಗೆ ಮಾತು ಕೊಟ್ಟಂತೆ ಅವನು ಪದವಿ ಮುಗಿಸಿದ. ನಗರದ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಬೆಟ್ಟದಂತೆ ಬಂದ ಕಷ್ಟ ಪರಿಹಾರವಾಯಿತು ಎಂದು ನಿಟ್ಟುಸಿರು ಬಿಟ್ಟು, ಅವನಿನ್ನು ದಡ ಹತ್ತಿದ್ದಾನೆ, ಒಳ್ಳೆಯ ಹುಡುಗಿಯನ್ನು ತಂದು ಮದುವೆ ಮಾಡೋಣ ಎನ್ನುವ ಸಂಭ್ರಮ ಪಡುತ್ತಿದ್ದಾಗಲೇ ಅವನು ಆತ್ಮಹತ್ಯೆ ಮಾಡಿಕೊಂಡು ಬಿಟ್ಟ! ನಮ್ಮನ್ನು ನಡುನೀರಿನಲ್ಲಿ ಮುಳುಗಿಸಿಬಿಟ್ಟ. ಹಲವು ತಿಂಗಳಾಗಿವೆ, ಆದರೂ ನನಗೆ ಈ ನೋವಿನಿಂದ ಹೊರಬರಲಾಗುತ್ತಿಲ್ಲ. ಜೀವನದಲ್ಲಿ ಉತ್ಸಾಹವೇ ಕಳೆದುಹೋಗಿದೆ. ಹತ್ತು ಹಲವು ಪ್ರಶ್ನೆಗಳು ಮುತ್ತಿ ಕಾಡುತ್ತವೆ. ಉತ್ತರ ಸಿಗದೆ ತೊಳಲಾಡುವ ಹಾಗಾಗುತ್ತದೆ. ನಾವು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಲಿಲ್ಲವೇ? ನಮ್ಮ ಸಾಕುವಿಕೆಯಲ್ಲೇ ದೋಷವಿತ್ತೇ? ಅವನ ತಪ್ಪನ್ನು ತಿದ್ದಿ ಮತ್ತೆ ಸರಿದಾರಿಗೆ ತಂದರೂ ಹೀಗೇಕೆ ಮಾಡಿದ? ಈ ತಾಯಿಯ ಸಂಕಟಗಳು ಅವನಿಗೆ ಅರ್ಥವೇ ಆಗಲಿಲ್ಲವೇ? ಅವನ ಡೆತ್ ನೋಟ್​ನಲ್ಲಿ ‘ನಾನು ನಿಮಗೆ ತಕ್ಕ ಮಗನಾಗಲಿಲ್ಲ’ ಎಂದು ಬರೆದಿದ್ದ. ಇಂಥ ಪಾಪಪ್ರಜ್ಞೆ ಅವನಿಗೆ ಏಕೆ ಹುಟ್ಟಿತು? ನಾನು ಅವನನ್ನು ಕ್ಷಮಿಸಿದ್ದು ಸಾಕಾಗಲಿಲ್ಲವೇ? ಒಬ್ಬ ಮಗ ಸೋತರೆ ತಾಯಿಯೂ ಸೋತಂತೆ ಅಲ್ಲವೇ? ಅವನು ಇಂಥ ಕಠೋರ ನಿರ್ಧಾರಕ್ಕೆ ಬರುವಂಥ ಪರಿಸ್ಥಿತಿ ಏನಿರಬಹುದು? ಹೀಗೇ ಕೊನೆ ಮೊದಲಿಲ್ಲದ ಪ್ರಶ್ನೆಗಳು. ನೆಮ್ಮದಿಗಾಗಿ ನೊಂದು ನೊಂದು ಈ ಪತ್ರ ಬರೆದಿದ್ದೇನೆ.

    ಉತ್ತರ: ತಾಯಿ, ನಿಮ್ಮ ನೋವು ನಿವಾರಿಸುವ ಶಕ್ತಿ ಈ ಭಾಷೆ ಎನ್ನುವುದಕ್ಕೆ ಖಂಡಿತಾ ಇಲ್ಲ. ಆದರೂ ಕೆಲವು ಮಾತುಗಳನ್ನು ಬರೆಯುತ್ತೇನೆ. ಇವು ಸ್ವಲ್ಪ ಭಿನ್ನವಾಗಿ ಯೋಚಿಸಲು ನಿಮ್ಮನ್ನು ಪ್ರೇರೇಪಿಸಬಹುದು ಎನ್ನುವ ಕಾರಣಕ್ಕಾಗಿ. ನೀವು ನಿಮ್ಮ ಇಡೀ ನಾಲ್ಕು ಪುಟಗಳ, ಒಳ್ಳೆಯ ಕನ್ನಡವನ್ನು ಬಳಸಿ ಬರೆದಿರುವ ಪತ್ರದಲ್ಲಿ ‘ತಂದೆ ತಾಯಿಯರೇ ಮಕ್ಕಳನ್ನು ಬೆಳೆಸಿ, ಒಳ್ಳೆಯ ಬುದ್ಧಿ ಕಲಿಸಿ, ಅವರು ಉತ್ತಮ ಬದುಕನ್ನು ಬಾಳಲು ಕಾರಣರಾಗಬೇಕು, ನಾನೂ ಅದನ್ನೇ ಮಾಡಿದೆ’ ಎನ್ನುವ ಭಾವವಿದೆ. ನಿಮ್ಮ ಮಾತು ಅಕ್ಷರಶಃ ನಿಜವಾದರೂ ಈ ಬೆಳಸುವಿಕೆಗೆ ಮತ್ತೊಂದು ಮುಖವೂ ಇದೆ ಎನ್ನುವುದನ್ನು ವಿಜ್ಞಾನ ಹೇಳುತ್ತದೆ. ‘ಮಕ್ಕಳು ಸೋತರೆ ತಾಯಿಯೂ ಸೋತಂತೆ’ ಎನ್ನುವ ನಿಮ್ಮ ಮಾತುಗಳು ಅರ್ಧಸತ್ಯ ಮಾತ್ರ. ಏಕೆಂದರೆ ಮಕ್ಕಳಿಗೆ ಎಲ್ಲ ಗುಣಗಳನ್ನೂ ಕೇವಲ ತಂದೆತಾಯಿಯರೇ ಕೊಡುವುದಕ್ಕಾಗುವುದಿಲ್ಲ.

    ಕೆಲವು ವಂಶವಾಹಿಯಲ್ಲಿ ಬರುತ್ತವೆ. ಕೆಲವು ಸುತ್ತಲಿನ ಸಮಾಜದಿಂದ ಮಕ್ಕಳು ತಾವೇ ಬೆಳೆಸಿಕೊಳ್ಳುತ್ತಾರೆ. ಒಂದು ಮಗುವಿನ ವ್ಯಕ್ತಿತ್ವ ಪರಿಪೂರ್ಣವಾಗಿ ಬೆಳೆಯಬೇಕಾದರೆ ವಂಶವಾಹಿ, ಹೆತ್ತವರು ಮತ್ತು ಅವನ ಸುತ್ತಲಿನ ಸಮಾಜ ಈ ಮೂರರ ಕೊಡುಗೆಯೂ ಇರುತ್ತದೆ. ‘ಪುತ್ರಶೋಕಂ ನಿರಂತರಂ’ ಎನ್ನುವಂತೆ ಹೆತ್ತವರ ಮುಂದೆ ಮಕ್ಕಳು ನಿರ್ಗಮಿಸಿದರೆ ಆ ನೋವಿನ ತೂಕ ತುಂಬಾ ಗುರುತರವಾದದ್ದು. ಅದರ ಜೊತೆಯಲ್ಲಿ ‘ತಾಯಿಯಾದವಳೇ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕಾರಣ’ ಎನ್ನುವ ನಿಮ್ಮ ನಂಬಿಕೆಯೂ ಸೇರಿ ನಿಮಗೆ ಮತ್ತಷ್ಟು ನೋವಿನ ಮೂಟೆಯನ್ನು ಹೊರಿಸುತ್ತಿದೆ. ಅದರಿಂದ ನಿಮ್ಮ ನೋವಿನ ತೂಕ ಇನ್ನೂ ಹೆಚ್ಚಾಗುತ್ತಿದೆ. ಈ ಬಗ್ಗೆ ಸ್ವಲ್ಪ ವೈಜ್ಞಾನಿಕವಾಗಿ ಯೋಚಿಸಿ ಆ ಮೂಟೆಯನ್ನು ಇಳಿಸಿಕೊಳ್ಳುವ ಪ್ರಯತ್ನ ಮಾಡಿ. ಮಕ್ಕಳ ಎಲ್ಲ ಕೈಂಕರ್ಯಗಳಿಗೂ ತಾಯಿ ಮಾತ್ರವೇ ಕಾರಣಳಲ್ಲ. ಸಮಸ್ಯೆಯನ್ನು ಎದುರಿಸಲು ಬೇಕಾದ ಎದೆಗಾರಿಕೆ ಮತ್ತು ಗಟ್ಟಿತನಗಳ ಜಾಗದಲ್ಲಿ ಪುಕ್ಕಲುತನ ಮತ್ತು ಕುಸಿಯುವ ಪ್ರವೃತ್ತಿಗಳು ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿ ಹೀಗೆ ಯಾರಿಂದಲಾದರೂ ವಂಶವಾಹಿಯಾಗಿ ನಿಮ್ಮ ಮಗನಿಗೆ ಬಂದಿರಬಹುದಲ್ಲವೇ? ಆದ್ದರಿಂದ ನೀವೊಬ್ಬರೇ ಈ ಸಾವಿನ ಉತ್ತರದಾಯಿತ್ವವನ್ನು ಹೊರುವುದು ಸೂಕ್ತವಲ್ಲ. ನಿಜ, ಜೀವ ನಷ್ಟವಾಗಿದೆ. ಅದರ ತೀವ್ರತೆ ಹೆಚ್ಚಾಗಿಯೇ ಇದೆ. ಅದಕ್ಕೆ ನೀವೊಬ್ಬರೇ ಕಾರಣವಲ್ಲ ಎನ್ನುವ ಸತ್ಯವನ್ನೂ ನೀವು ಈಗ ಅರಿಯಬೇಕಾಗಿದೆ. ಆಯುಷ್ಯ, ಹಣೆಬರಹ, ಋಣ, ಜಾತಿ, ಮಡಿ ಮುಂತಾದ ಆಚರಣೆಗಳನ್ನು ಮಾಡದ್ದರಿಂದ ಹೀಗಾಯಿತು..ಇಂಥ ಮಾತುಗಳಿಗೆ ಅರ್ಥವೇ ಇಲ್ಲ. ಮನುಷ್ಯ ಹತಾಶನಾದಾಗ, ನಡೆದುಹೋದ ಘಟನೆಗಳಿಗೆ ಕಾರಣವೇ ಗೊತ್ತಾಗದಾಗ ಇಂಥ ಪ್ರಾಚೀನ ರೂಢಿಯ ಮಾತುಗಳು ಜನರ ಬಾಯಲ್ಲಿ ಉರುಳುತ್ತವೆ. ನೀವು ಅದಕ್ಕೆ ಬೆಲೆ ಕೊಡಬೇಕಾಗಿಲ್ಲ. ಹೀಗೆ ಮಾತಾಡುವ ಜನಕ್ಕೆ ನಿಮ್ಮ ನೋವು ಅರ್ಥವಾಗುತ್ತಿಲ್ಲ. ಸಹೃದಯರಲ್ಲದೆ ನಿಮ್ಮ ಪರಿಸ್ಥಿತಿಯನ್ನೇ ಅರ್ಥ ಮಾಡಿಕೊಳ್ಳದ ಮಂದಿ ಆಡುವ ಮಾತುಗಳು ಭ್ರಮಾಧೀನವಾಗಿರುತ್ತವೆ.

    ನಿಮ್ಮ ಮುಂದಿದ್ದ ಒಬ್ಬ ಮಗನ ಬದುಕು ಮುಗಿದಿದೆ. ಆದರೆ ನಿಮ್ಮ ಮುಂದೆ ಮತ್ತೊಬ್ಬ ಮಗನ ಬದುಕು ವಿಸ್ತಾರವಾಗಿ ಹರಡಿದೆಯಲ್ಲವೇ? ಅದನ್ನು ಅವನು ಕಟ್ಟಿಕೊಳ್ಳಬೇಡವೇ? ನೀವು ಹೀಗೆ ಕುಸಿದು ಕುಳಿತರೆ ಅವನು ವಿಚಲಿತನಾಗುತ್ತಾನಲ್ಲವೇ? ದೇವರು ನಿಮ್ಮ ವಿಚಾರದಲ್ಲಿ ಇದ್ದುದರಲ್ಲಿ ಕರುಣಾಮಯಿ. ಒಂದು ಕಣ್ಣನ್ನು ಕಿತ್ತುಕೊಂಡರೂ ಮತ್ತೊಂದು ಕಣ್ಣನ್ನು ನೀಡಿದ್ದಾನೆ. ಕುರುಡುಗಣ್ಣಿಗಿಂತ ಒಂಟಿ ಕಣ್ಣು ಲೇಸಲ್ಲವೇ? ನಿಮಗೆ ನೋವುಗಳನ್ನು ಮರೆಯಲು ಹಲವು ದಾರಿಗಳಿವೆ. ನೀವು ಮೊದಲು ಗಟ್ಟಿ ಮನಸ್ಸು ಮಾಡಬೇಕಷ್ಟೆ. ಸ್ವಲ್ಪ ಅಧ್ಯಾತ್ಮ, ಸ್ವಲ್ಪ ಸಮಾಜಸೇವೆ ಇವು ಇಂಥ ನೋವುಗಳಿಗೆ ಮುಲಾಮಿನಂತೆ ಕೆಲಸ ಮಾಡುತ್ತವೆ ಎಂದು ಮನೋವಿಜ್ಞಾನ ಹೇಳುತ್ತದೆ. ಎಷ್ಟು ಅಧ್ಯಾತ್ಮ ಬೇಕು? ಎಂಥ ಸಮಾಜಸೇವೆ ಮಾಡಬಹುದು? ಈ ಪ್ರಶ್ನೆಗಳಿಗೆ ಬೇರೆಯವರು ಉತ್ತರಿಸಲಾಗುವುದಿಲ್ಲ. ನೀವೇ ಸಮಸ್ಥಿತಿಯಲ್ಲಿ ಕುಳಿತು, ನಿಮ್ಮ ಮುಂದಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಏನು ಮಾಡಬಹುದು ಎನ್ನುವುದರ ಬಗ್ಗೆ ಯೋಚಿಸಬೇಕಾಗಿದೆ.

    ನಿಮಗೀಗಾಲೇ 50 ವರ್ಷವಾಗಿದೆ. ಜೊತೆಗೆ ಗಾಢವಾದ ಚಿಂತೆ ಜೊತೆಯಾಗಿದೆ. ಇವೆರಡರ ಸಂಯೋಗದಿಂದ ಶರೀರ ಮತ್ತು ಮಿದುಳು ಅನಾರೋಗ್ಯಕ್ಕೆ ಗುರಿಯಾಗಬಾರದಲ್ಲವೇ? ರೋಗಗಳು, ಅದು ಶಾರೀರಿಕವಾಗಿರಲಿ, ಮಾನಸಿಕವಾಗಿರಲಿ, ಒಮ್ಮೆ ತಲೆಹಾಕಿದರೆ ನಮ್ಮ ಬದುಕನ್ನೇ ನಮಗೆ ಹೊರೆಯಾಗಿಸಿಬಿಡುತ್ತವೆ. ಅದನ್ನು ತಪ್ಪಿಸುವ ಸಾಧ್ಯತೆ ನಿಮ್ಮ ಕೈಯಲ್ಲೇ ಇದೆ. ಏನಾದರೂ ಮನಸ್ಸಿಗೆ ಸ್ವಲ್ಪವಾದರೂ ನೆಮ್ಮದಿ ಕೊಡುವಂಥ ಕೆಲಸಗಳನ್ನು ಹಚ್ಚಿಕೊಳ್ಳಿ. ಊರವರ ಮಾತಿಗೆ ಕಿವಿಕೊಡಲೇ ಬೇಡಿ. ‘ಊರು ಸ್ವಚ್ಛವಾಗಲು ಹಂದಿನಾಯಿಗಳಿರುವಂತೆ ಮನಸ್ಸು ಸ್ವಚ್ಛವಾಗಲು ನಿಂದಕರೂ ಇರಬೇಕು’ ಎಂದಿದ್ದಾರೆ ಪುರಂದರದಾಸರು. ಅವರನ್ನು ಅವರಷ್ಟಕ್ಕೆ ಬಿಡಿ. ನಿಮ್ಮ ಆರೋಗ್ಯದ ಕಡೆ ಮತ್ತು ಮಗನ ಬದುಕಿನ ಕಡೆ ಗಮನಹರಿಸಿ. ನಿಮಗೆ ಭಗವಂತ ನೆಮ್ಮದಿ ಕೊಡಲಿ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ದನಿ ಕೇಳಿಯೇ ಲವ್​ ಆಯ್ತು ಎಂದು ರಾತ್ರಿಯಿಡೀ ನಿದ್ದೆಗೆಡಿಸುತ್ತಾನೆ- ಅವನ ಮನಸ್ಸು ತಿಳಿಯುವುದು ಹೇಗೆ?

    ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?

    ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

    ‘ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ… ಏನು ಬೇಕಾದ್ರೂ ಮಾಡ್ಬೋದು…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts