

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯು ಅಂತಿಮ ಹಂತಕ್ಕೆ ಬಂದಿದೆ. ಟೂರ್ನಿ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಸದ್ಯ ಎಲ್ಲರ ಗಮನ ಆ ಒಂದು ಪಂದ್ಯದ ಮೇಲಿದೆ. ಹೀಗಾಗಿ ಆ ಪಂದ್ಯದ ಕುರಿತು ಜೋರು ಚರ್ಚೆಗಳು ನಡೆಯುತ್ತಿವೆ. ರಾಜಸ್ಥಾನ ರಾಯಲ್ಸ್ (ಆರ್ಆರ್) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಈಗಾಗಲೇ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನುಳಿದ ಎರಡು ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ.
ಸದ್ಯ ಎಲ್ಲರೂ ಮೇ 18ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಏಕೆಂದರೆ, ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದೊಂದು ರೀತಿಯಲ್ಲಿ ನಾಕೌಟ್ ಪಂದ್ಯದಂತಿದೆ. ಇದರಲ್ಲಿ ಗೆದ್ದವರು ಪ್ಲೇಆಫ್‌ನಲ್ಲಿ ಮತ್ತೊಂದು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಸದ್ಯ ಸಿಎಸ್‌ಕೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಎಸ್ಆರ್ಎಚ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 14 ಅಂಕಗಳೊಂದಿಗೆ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದೆ. ಎಸ್ಆರ್ಎಚ್ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೀಗ್ ಪಂದ್ಯಗಳು ಮುಗಿದಿವೆ. ಆರ್‌ಸಿಬಿ ಮತ್ತು ಲಖನೌ 12 ಅಂಕಗಳೊಂದಿಗೆ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿವೆ. ಆದರೆ, ಆರ್‌ಸಿಬಿ, ಡೆಲ್ಲಿ ಮತ್ತು ಲಖನೌಗಿಂತ ಉತ್ತಮ ರನ್ ರೇಟ್ ಹೊಂದಿದೆ.
ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಉತ್ತಮ ಅಂತರದಿಂದ ಗೆದ್ದರೆ ಪ್ಲೇ ಆಫ್‌ಗೆ ಹೋಗಲಿದೆ. ಸಿಎಸ್‌ಕೆಗೆ ಯಾವುದೇ ರನ್ ರೇಟ್ ಅವಶ್ಯಕತೆ ಇಲ್ಲ, ಕೇವಲ ಗೆದ್ದರೆ ಸಾಕು ಪ್ಲೇಆಫ್ಗೆ ಹೋಗುತ್ತದೆ. ಆದರೆ, ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದರೆ 18 ರನ್ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್ ಮಾಡಿದರೆ 18.1 ಓವರ್ಗಳಲ್ಲೇ ಗುರಿ ಮುಟ್ಟಬೇಕು. ಹೀಗಾಗಿ ಇದೇ 18ರ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿದೆ. ಪ್ರಸಕ್ತ ಐಪಿಎಲ್ ಋತುವಿನಲ್ಲಿ ನಾಕೌಟ್ ಪಂದ್ಯವಾಗಿ ಮಾರ್ಪಟ್ಟಿದೆ. ಇಂತಹ ನಿರ್ಣಾಯಕ ಪಂದ್ಯದಲ್ಲಿ 18ನೇ ನಂಬರ್ ಆರ್ಸಿಬಿಗೆ ಮ್ಯಾಜಿಕ್ ಮಾಡಲಿದೆಯಂತೆ.
ಅಂದಹಾಗೆ ಆರ್‌ಸಿಬಿ ಜಾತಕ 18ರ ಸುತ್ತ ಸುತ್ತುತ್ತಿದೆ. ಮೇಲಾಗಿ ಆರ್‌ಸಿಬಿ ಪ್ರಮುಖ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಜೆರ್ಸಿ ಸಂಖ್ಯೆಯೂ 18. ಪಂದ್ಯ ನಡೆಯುವ ದಿನಾಂಕವೂ 18 ಮತ್ತು ಗೆಲುವಿನ ಅಂತರವೂ 18 ರನ್ ಮತ್ತು 18 ಓವರ್ನಲ್ಲಿ ಗೆಲ್ಲಬೇಕಾಗಿರುವುದರಿಂದ 18ನೇ ನಂಬರ್ ಆರ್‌ಸಿಬಿ ಪಾಲಿಗೆ ತುಂಬಾ ನಿರ್ಣಾಯಕವಾಗಿದೆ. ಅದರಲ್ಲೂ ಕೊಹ್ಲಿ 18ರ ಮೇಲೆ ವಿಶೇಷ ಒಲವಿದೆ. 18ನೇ ತಾರೀಖಿನಂದು ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ ಮತ್ತು ಆರ್‌ಸಿಬಿ ಆ ಪಂದ್ಯಗಳನ್ನು ಗೆದ್ದಿದೆ.
2013ರ ಮೇ 18ರಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 29 ಎಸೆತಗಳಲ್ಲಿ 56 ರನ್ ಕಲೆಹಾಕಿದ್ದರು. 20216ರಲ್ಲಿ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 50 ಎಸೆತಕ್ಕೆ 113 ರನ್ ಬಾರಿಸಿದ್ದರು. 2023ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 63 ಎಸೆತದಲ್ಲಿ ಕೊಹ್ಲಿ 100 ರನ್ ಗಳಿಸಿದ್ದರು. ಈ ಮೂರೂ ಪಂದ್ಯಗಳಲ್ಲೂ ಆರ್‌ಸಿಬಿ ಗೆಲುವು ಸಾಧಿಸಿದೆ. ಹೀಗಾಗಿ ಮೇ 18ರಂದು ತಮ್ಮ ಬ್ಯಾಟ್ನಿಂದ ಕೊಹ್ಲಿ ರನ್ ಮಳೆ ಹರಿಸಲಿದ್ದು, ಈ ಬಾರಿ ಸಿಎಸ್‌ಕೆ ವಿರುದ್ಧವೂ ಇದು ಮರುಕಳಿಸಲಿದೆ ಎಂದು ಅಭಿಮಾನಿಗಳು ಬಲವಾಗಿ ನಂಬಿದ್ದಾರೆ.
ಒಂದು ರನ್ ಸೋಲೇ ಗೆಲುವಿನ ಮೆಟ್ಟಿಲು?
ಐಪಿಎಲ್ಗೆ ಮುನ್ನ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್) ಆರ್‌ಸಿಬಿ ಮಹಿಳಾ ತಂಡ ತನ್ನ 7ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 1 ರನ್ನಿಂದ ಸೋತಿತು. ಬಳಿಕ ಪುಟಿದೆದ್ದು ಫೈನಲ್ ಸಹಿತ ಸತತ 3 ಪಂದ್ಯ ಜಯಿಸುವ ಮೂಲಕ ಸ್ಮೃತಿ ಮಂದನಾ ಬಳಗ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತು. ಇದೀಗ ಐಪಿಎಲ್ನಲ್ಲೂ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ 1 ರನ್ನಿಂದ ಸೋತ ಬಳಿಕ ಪುಟಿದೆದ್ದು ಸತತ 5 ಪಂದ್ಯ ಗೆದ್ದುಕೊಂಡಿದೆ. ಅಂದರೆ ಅದೇ ರೀತಿಯಲ್ಲಿ ಪ್ಲೇಆಫ್ ಪ್ರವೇಶಿಸುವುದು ಮಾತ್ರವಲ್ಲದೆ ಚೊಚ್ಚಲ ಕಪ್ ಕನಸನ್ನೂ ನನಸಾಗಿಸಲಿದೆ ಎಂಬುದು ಆರ್‌ಸಿಬಿ ಅಭಿಮಾನಿಗಳ ಸಿಹಿ ಲೆಕ್ಕಾಚಾರವಾಗಿದೆ. (ಏಜೆನ್ಸೀಸ್)