

ಹೈದರಾಬಾದ್: ಜನವರಿ 24ರಂದು ಹೈದರಾಬಾದ್ನ ಬಲ್ಕಂಪೇಟೆಯಲ್ಲಿರುವ ಯಲ್ಲಮ್ಮ ದೇವಸ್ಥಾನದ ಬಳಿ ಬೈಕ್ನಲ್ಲಿ ವೇಗವಾಗಿ ಬಂದ ಮೂವರು ಹುಡುಗರು ಪುಟ್ಟ ಬಾಲಕಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಕಾಲ್ಕಿತ್ತಿದ್ದರು. ಬಾಲಕಿಯ ಕಾಲಿಗೆ ಗಂಭೀರವಾದ ಗಾಯವಾಗಿತ್ತು. ಆದರೆ, ಆರೋಪಿಗಳ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದೀಗ ನೆಟ್ಟಿಗರ ಸಹಾಯದಿಂದ ಘಟನೆ ನಡೆದ 13 ದಿನಗಳ ಬಳಿಕ ಹಿಟ್ ಆ್ಯಂಡ್ ರನ್ ಮಾಡಿದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರಂಭದಲ್ಲಿ ಪೊಲೀಸ್ ತನಿಖೆ ತುಂಬಾ ಕಷ್ಟವಾಯಿತು. ಎಸ್ಆರ್ ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ದುರಾದೃಷ್ಟವಶಾತ್ ವಾಹನದ ನಂಬರ್ ಪ್ಲೇಟ್ ಅನ್ನು ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಸೆರೆಹಿಡಿದಿರಲಿಲ್ಲ. ಹೀಗಾಗಿ ಪ್ರಕರಣ ಭೇದಿಸಲು ಮತ್ತಷ್ಟು ಕಗ್ಗಾಂಟಾಯಿತು.
ಇದಾದ ಬಳಿಕ ಏನಾದರೂ ಸುಳಿವು ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಆರೋಪಿಗಳ ಫೋಟೋವನ್ನು ಎಸ್ಆರ್ ನಗರ ಪೊಲೀಸರು ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ನಂತಹ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಪೋಸ್ಟ್ ಮಾಡಿದರು. ನಿರ್ಲಕ್ಷ್ಯ ಮತ್ತು ವೇಗದ ಚಾಲನೆ ಮಾಡಿ ಬಲ್ಕಂಪೇಟೆಯಲ್ಲಿ ಪುಟ್ಟ ಬಾಲಕಿಗೆ ಡಿಕ್ಕಿ ಹೊಡೆದು ಆಕೆಯ ಕಾಲಿಗೆ ಗಾಯ ಮಾಡಿರುವ ಆರೋಪಿಗಳ ಗುರುತನ್ನು ದಯವಿಟ್ಟು ಪತ್ತೆ ಹಚ್ಚಿ. ಗೊತ್ತಾದಲ್ಲಿ ಎಸ್ಆರ್ ನಗರ ಪೊಲೀಸರಿಗೆ ತಿಳಿಸಿ ಎಂದು ಮನವಿ ಮಾಡಿದ್ದರು.
ಇದನ್ನು ನೋಡಿ ಮಾಹಿತಿದಾರರು ಮತ್ತು ನೆಟ್ಟಿಗರು ಮೂವರು ಆರೋಪಿಗಳನ್ನು ಪತ್ತೆಹಚ್ಚಿ, ಅವರು ಎಲ್ಲಿರುತ್ತಾರೆಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಈ ಬಗ್ಗೆ ಮಾತನಾಡಿರುವ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ರಾವ್, ಫೋಟೋಗಳನ್ನು ನಮ್ಮ ಮಾಹಿತಿದಾರರಿಗೆ ಕಳುಹಿಸಿದೆವು ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆವು. ರೆಹಮತ್ ನಗರದ ನಿವಾಸಿಯೊಬ್ಬರು ಮೂವರು ಆರೋಪಿಗಳನ್ನು ಪತ್ತೆಹಚ್ಚಿದರು. ಮೂವರು ಸಹ ಅಪ್ರಾಪ್ತರು ಎಂದು ತಿಳಿಸಿದ್ದಾರೆ.
ಸಾಕ್ಷ್ಯಾಧಾರ ಮೇಲೆ ಫೆ. 6ರಂದು ಆರೋಪಿಗಳನ್ನು ನಮ್ಮ ವಶಕ್ಕೆ ಪಡೆದುಕೊಂಡಿದ್ದೇವೆ. ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. (ಏಜೆನ್ಸೀಸ್)