ಲೈವ್​ನಲ್ಲಿ ಬೆತ್ತಲಾದ 14ರ ಬಾಲಕಿ: ಪ್ರಕರಣ ಬೆನ್ನತ್ತಿದ ಪೊಲೀಸರು, ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!

Girl
Published on

ಮುಂಬೈ: ಕರೊನಾ ಲಾಕ್​ಡೌನ್​ನಿಂದ ಶಾಲಾ-ಕಾಲೇಜುಗಳು ಅನಿವಾರ್ಯವಾಗಿ ಆನ್​ಲೈನ್​ ಕ್ಲಾಸ್​ ಮೊರೆ ಹೋಗಬೇಕಾಯಿತು. ಆದರೆ, ಆನ್​ಲೈನ್​ ಕ್ಲಾಸ್​ ಭಾಗವಾಗಿ ಮಕ್ಕಳ ಕೈಯಲ್ಲಿ ಇಂದು ಸ್ಮಾರ್ಟ್​ಫೋನ್​ ಇರುವುದು ಸೆರಗಿಗೆ ಕೆಂಡ ಕಟ್ಟಿಕೊಂಡಂತಾಗಿದೆ. ಆನ್​ಲೈನ್​ ಕ್ಲಾಸ್​ ಶುರುವಾದಗಿನಿಂದ ಒಂದಲ್ಲ ಒಂದು ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಥದ್ದೇ ಮತ್ತೊಂದು ಘಟನೆ ಮುಂಬೈನಲ್ಲಿ ನಡೆದಿದೆ.

ಪಾಲಕರು ಮಕ್ಕಳ ಮೇಲೆ ಗಮನ ಇಡದಿದ್ದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉತ್ತಮ ಉದಾಹರಣೆಯಾಗಿದೆ. ಸ್ಮಾರ್ಟ್​ಫೋನ್​ ಎಷ್ಟು ಉಪಯುಕ್ತವೂ ಅಷ್ಟೇ ಅಪಾಯಕಾರಿಯು ಹೌದು. ಅದರಲ್ಲೂ ಇಂಟರ್ನೆಟ್​ ಇದ್ದರೆ ಅದರ ಪ್ರಭಾವ ಮತ್ತಷ್ಟು ಹೆಚ್ಚಾಗುತ್ತದೆ. ನಾವು ಹೇಳ ಹೊರಟಿರುವ ವಿಚಾರವೇನೆಂದರೆ, 13 ವರ್ಷದ ಬಾಲಕನೊಬ್ಬ 14 ವರ್ಷದ ಬಾಲಕಿಯನ್ನು ಬೆತ್ತಲೆಯಾಗಿಸಿ, ಅದನ್ನು ರೆಕಾರ್ಡ್​ ಮಾಡಿ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿವಿರಣೆಗೆ ಬರುವುದಾದರೆ ಮುಂಬೈನ ಪಶ್ಚಿಮ ಉಪನಗರದಲ್ಲಿ ವಾಸವಿರುವ 14 ವರ್ಷದ ಬಾಲಕಿ ಇನ್​​ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದಾಳೆ. ಲಾಕ್​ಡೌನ್​ ಸಮಯದಲ್ಲಿ ಅತಿಹೆಚ್ಚು ಸಮಯ ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿದ್ದಳು. ಅದೇ ಸಮಯದಲ್ಲಿ ಅಪರಿಚಿತ ಬಾಲಕನಿಂದ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸಿದಳು. ಹಿಂದು-ಮುಂದು ನೋಡದೇ ರಿಕ್ವೆಸ್ಟ್​ಗೆ ಓಕೆ ಎಂದಳು. ಇದಾದ ಬಳಿಕ ಇಬ್ಬರ ನಡುವೆ ಚಾಟಿಂಗ್​ ಶುರುವಾಯಿತು. ಕೊನೆಗೆ ಇಬ್ಬರು "ಟ್ರೂಥ್​ ಆರ್​ ಡೇರ್​" ಎಂಬ ಆನ್​ಲೈನ್​ ಗೇಮ್​ ಶುರು ಮಾಡಿದರು.

ಒಂದು ದಿನ "ಡೇರ್​ ಚಾಲೆಂಜ್​" ಭಾಗವಾಗಿ ಬಾಲಕ, ಬಾಲಕಿಗೆ ಒಂದು ಮಸೇಜ್​ ಕಳುಹಿಸುತ್ತಾನೆ. ಬಾಲಕನ ಆದೇಶದಂತೆ ಬಾಲಕಿ ತನ್ನ ಬಟ್ಟೆಯನ್ನು ಕಳಚಿ ಬೆತ್ತಲೆಯಾಗಬೇಕು. ಈ ರೀತಿ ಮಾಡಿದರೆ ಮುಂದೆ ಯಾವ ಪರಿಣಾಮ ಬೀರಲಿದೆ ಎಂಬ ಅರಿವಿಲ್ಲದೆ, ಗೇಮ್​ನ ನಿಯಮಾನುಸಾರ ಬಾಲಕಿ ತನ್ನ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿದ್ದಾಳೆ. ಇದೆಲ್ಲವೂ ಸಹ ಲೈವ್​ ರೆಕಾರ್ಡ್​ ಆಗುತ್ತಿರುತ್ತದೆ. ಆದರೆ, ಬಾಲಕಿಗೆ ಇದರ ಅರಿವೇ ಇರುವುದಿಲ್ಲ. ಇದಾದ ಬಳಿಕ ಮತ್ತೊಮ್ಮೆ ಬೆತ್ತಲಾಗುವಂತೆ ಬಾಲಕ ಹೇಳುತ್ತಾನೆ. ಆದರೆ, ಬಾಲಕಿ ನಿರಾಕರಿಸಿದಾಗ ಬ್ಲ್ಯಾಕ್​ಮೇಲ್​ ಮಾಡಲು ಆರಂಭಿಸುತ್ತಾನೆ. ರೆಕಾರ್ಡ್​ ಮಾಡಿರುವ ವಿಡಿಯೋವನ್ನು ವೈರಲ್​ ಮಾಡುವುದಾಗಿ ಬೆದರಿಸುತ್ತಾನೆ ಮತ್ತು ವಿಡಿಯೋವನ್ನು ಬಾಲಕಿಗೆ ಕಳುಹಿಸುತ್ತಾನೆ.

ಇದಾದ ಬಳಿಕ ಬಾಲಕಿ ಬೇಸರದಲ್ಲಿರುವುದನ್ನು ಗಮನಿಸುವ ಪಾಲಕರು ಏನಾಯಿತು ಎಂದು ಕೇಳಿದಾಗ ಎಲ್ಲವನ್ನು ವಿವರಿಸುತ್ತಾಳೆ. ಬಳಿಕ ಪಾಲಕರು ಪೊಲೀಸರಿಗೆ ದೂರು ನೀಡುತ್ತಾರೆ. ಬಳಿ ಐಪಿ ಅಡ್ರೆಸ್​ ಸಹಾಯದಿಂದ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಬಾಲಕನನ್ನು ಪತ್ತೆಹಚ್ಚುತ್ತಾರೆ. ಆದರೆ, ಆಗಲೇ ಅವರಿಗೆಲ್ಲ ಗೊತ್ತಾಗುವುದು ಇಷ್ಟೆಲ್ಲಾ ಮಾಡಿದ್ದು 13 ವರ್ಷದ ಬಾಲಕನೆಂದು. ಗೊತ್ತಾದ ಬಳಿಕ ಆಘಾತಕ್ಕೆ ಒಳಗಾಗುತ್ತಾರೆ. ಇನ್ನು ಬಾಲಕನು ಸಹ ಬಾಲಕಿ ವಾಸವಿರುವ ಏರಿಯಾದವನೆ. ಅಲ್ಲದೆ, ಆತನ ಬಾಲಕಿಯ ಕ್ಲಾಸ್​ಮೇಟ್​ ಸಹ ಹೌದು. ಇದೆವಲ್ಲನೂ ತಿಳಿದ ಬಾಲಕನ ಪಾಲಕರಿಗೆ ಒಮ್ಮೆ ಆಘಾತವಾಗುತ್ತದೆ. ಆನ್​ಲೈನ್​ ಕ್ಲಾಸ್​ ನೆಪದಲ್ಲಿ ಮಕ್ಕಳು ಮಾಡುತ್ತಿರುವ ಕೆಲಸವನ್ನು ನೋಡಿ ಎಲ್ಲರೂ ದಿಗ್ಭ್ರಾಂತಗೊಳ್ಳುತ್ತಾರೆ.

ಕೊನೆಗೆ ಪೊಲೀಸರು ಮಕ್ಕಳಿಬ್ಬರ ಪಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಕ್ಕಳು ಏನು ಮಾಡುತ್ತಿದ್ದಾರೆ? ಮೊಬೈಲ್​ನಲ್ಲಿ ಏನು ನೋಡುತ್ತಿದ್ದಾರೆ ಎಂದು ಆಗಾಗ ನೋಡಿಕೊಳ್ಳಬೇಕು. ಇದು ಪಾಲಕರ ಜವಾಬ್ದಾರಿಯೂ ಹೌದು ಎಂದು ಪೊಲೀಸರು ಪಾಲಕರಿಗೆ ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net