ಬೆಂಗಳೂರಿನಲ್ಲಿ ಭಯಾನಕ ಘಟನೆ: ಚಾಕು ಹಿಡಿದು ಕಂಡಕಂಡವರ ಮೇಲೆ ಹಲ್ಲೆ- ಒಬ್ಬನ ಸಾವು

knife
Published on

ಬೆಂಗಳೂರು: ಕೂಲಿ ಕಾರ್ಮಿಕನೊಬ್ಬ ಚಾಕುವನ್ನು ಹಿಡಿದು ಕಂಡಕಂಡವರನ್ನೆಲ್ಲಾ ಇರಿದು ಭಯಾನಕ ವಾತಾವರಣ ಸೃಷ್ಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತನ ಇರಿತಕ್ಕೆ ಹಲವರು ಒಳಗಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಮಟನ್ ಸ್ಟಾಲ್‍ನಿಂದ ಹೋಗಿದ್ದ ಎಂ.ಗಣೇಶ್ ಎಂಬಾತ ಅಲ್ಲಿಂದ ಚಾಕು ತೆಗೆದುಕೊಂಡು ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾರೆನ ಈ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸದ್ಯ ಆರೋಪಿಯನ್ನು ಬಂಧಿಸಿ ಚಾಕು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಮಾರಿ (30) ಎಂದು ಗುರುತಿಸಲಾಗಿದೆ. ವೇಲಾಯುಧನ್, ಮುನಿಸ್ವಾಮಿ ಎಂಬುವವರು ಆಸ್ಪತ್ರೆಯ ತುರ್ತು ನಿಘಾಗಟಕದಲ್ಲಿದ್ದರೆ, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಟನ್‍ಪೇಟೆ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಗಣೇಶ್​ ಹೀಗೆಕೆ ಹಲ್ಲೆ ಮಾಡಿದ್ದಾನೆ ಎಂದು ಸದ್ಯ ತಿಳಿದಿಲ್ಲ. ಆಂಜನಪ್ಪಗಾರ್ಡನ್, ಛಲವಾದಿಪಾಳ್ಯ, ಭಕ್ಷುಗಾರ್ಡನ್ ಸೇರಿದಂತೆ ಸುಮಾರು ಎರಡು ಕಿ.ಮೀ. ದೂರದವರೆಗೂ ಓಡಾಡಿರುವ ಈತ ಅನೇಕ ಮಂದಿಯನ್ನು ಇರಿದಿದ್ದಾನೆ.

ಗಾಯಾಳುಗಳಿಗೂ ಆರೋಪಿಗೂ ಯಾವುದೇ ಸಂಬಂಧವಿಲ್ಲ. ವೈಯಕ್ತಿಕ ದ್ವೇಷ ಕೂಡ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಬೆಳಗ್ಗೆ ಗಸ್ತು ತಿರುಗುತ್ತಿದ್ದ ಪಿಎಸ್‍ಐ ಮೂರ್ತಿ, ಕಾನ್​ಸ್ಟೆಬಲ್ ಶಿವಮೂರ್ತಿ ನಾಯಕ್ ಮತ್ತು ಸಿಬ್ಬಂದಿ ಈತನನ್ನು ಬಂಧಿಸಿದ್ದಾರೆ.

ಗಣೇಶ್‍ನನ್ನು ಎರಡು ವರ್ಷಗಳ ಹಿಂದೆ ಪತ್ನಿ ಬಿಟ್ಟು ಹೋಗಿದ್ದಾಳೆ. ತಾಯಿ ಜತೆ ವಾಸವಾಗಿದ್ದ ಗಣೇಶ್ ಆಕೆಯ ಜತೆಯೂ ಪದೇ ಪದೇ ಜಗಳವಾಡಿ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ.

ಈತ ಮಾನಸಿಕ ಅಸ್ವಸ್ಥನೆ, ಮದ್ಯ ಅಥವಾ ಗಾಂಜಾ ಸೇವಿಸಿದ್ದನೇ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net