ನಟಿ ಕಂಗನಾ ವಿರುದ್ಧ ತುಮಕೂರಲ್ಲಿ ದಾಖಲಾಯ್ತು ಎಫ್‌ಐಆರ್

Kangana Ranaut - Final 1
Published on

ತುಮಕೂರು: ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಟ್ವಿಟರ್​​ನಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿರುವ ಆರೋಪ ಹೊತ್ತ ಬಾಲಿವುಡ್​​ ನಟಿ ಕಂಗನಾ ರಣಾವತ್ ವಿರುದ್ಧ ನಗರದ ಕ್ಯಾತಸಂದ್ರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.

ಹೈಕೋರ್ಟ್ ವಕೀಲ ರಮೇಶ್ ನಾಯ್ಕ್ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಜೆಎಂಎಫ್​ಸಿ ನ್ಯಾಯಾಲಯವು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ಕೋರ್ಟ್​ ಆದೇಶಿಸಿತ್ತು.

ಸೆಪ್ಟೆಂಬರ್​​ 21ರಂದು ಕಂಗನಾ ತಮ್ಮ ಟ್ವಿಟರ್​​ ಖಾತೆಯಲ್ಲಿ ಕೃಷಿ ಮಸೂದೆ ಪ್ರತಿಭಟನೆ ವಿರೋಧವಾಗಿ ಟ್ವೀಟ್​ ಮಾಡಿದ್ದರು.

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನ ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗೆ ಕರ್ನಾಟಕ, ಪಂಜಾಬ್​, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಕಂಗನಾ ಟ್ವೀಟ್ ಮಾಡಿದ್ದರು.

ಈ ಸಂಬಂಧ ವಕೀಲ ರಮೇಶ್ ನಾಯ್ಕ್ ಅವರು ಕಂಗನಾ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದ ರಮೇಶ್​ ಅವರು ನೇರವಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಇದೀಗ ಎಫ್​ಐಆರ್​ ದಾಖಲು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net