ಮಕ್ಕಳನ್ನು ಸೊಂಟಕ್ಕೆ ಕಟ್ಟಿ ಕಾಲುವೆಗೆ ಹಾರಿ ದಾವಣಗೆರೆ ಶಿಕ್ಷಕಿ ಆತ್ಮಹತ್ಯೆ!

davanagere suicide
Published on

ದಾವಣಗೆರೆ: ಇಬ್ಬರು ಮಕ್ಕಳೊಂದಿಗೆ ಇಲ್ಲಿಯ ತುಂಗಾಭದ್ರಾ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಹೆಚ್. ಕಲ್ಪನಹಳ್ಳಿ ಸಮೀಪ ನಡೆದಿದೆ.

ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಶ್ರೀದೇವಿ (38) ಎಂಬ ಶಿಕ್ಷಕಿ ತಮ್ಮ 12 ವರ್ಷದ ಹನ್ಸಿಕಾ, 9 ವರ್ಷದ ನೂತನ್ ಎಂಬ ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಕೂಟಿಯಲ್ಲಿ ಮಕ್ಕಳನ್ನು ಕಾಲುವೆ ಬಳಿ ಕರೆತಂದ ಅವರು ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ.

ಪ್ರೌಢಶಾಲೆಯೊಂದರ ಶಿಕ್ಷಕಿಯಾಗಿರುವ ಇವರು ಮನೆ ಕಟ್ಟುವ ವಿಚಾರದಲ್ಲಿ ಪತಿಯೊಂದಿಗೆ ಜಗಳ ಮಾಡಿಕೊಂಡಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ದಾವಣಗೆರೆ ಜಯನಗರದಲ್ಲಿ ವಾಸವಾಗಿದ್ದ ಶ್ರೀದೇವಿ ದಾವಣಗೆರೆ ಖಾಸಗಿ ಪ್ರೌಡಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅವರ ಪತಿ ಪಿಯುಸಿ ಕಾಲೇಜ್ ಪ್ರಾಂಶುಪಾಲರಾಗಿದ್ದಾರೆ. ಮನೆ ನಿರ್ಮಾಣ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಇದರಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ ಪೊಲೀಸರು.

ಮೂವರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮುಂದಿನ ಪ್ರಕ್ರಿಯೆಗೆ ಕಳುಹಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net