More

  ನಾವ್ ಆವರಗೊಳ್ಳ ಹೋಗೋದಿಲ್ಲ.. ನಮ್ ಕಷ್ಟ ಕೇಳೋರಿಲ್ಲ.. ಹೆಗಡೆ ನಗರ ನಿವಾಸಿಗಳಿಂದ ರಸ್ತೆ ತಡೆ ಪ್ರತಿಭಟನೆ

  ದಾವಣಗೆರೆ: ನಾವೂ ಮನುಷ್ಯರು ಸಾರ್, ಹಂದಿಗಳಲ್ಲ. ಅಲ್ಲಿ ಕುಡಿಯಾಕೆ ನೀರಿಲ್ಲ. ಒಂದ್ ಬೋರ್ ನೀರು ಅಷ್ಟು ಜನರಿಗೆ ಸಾಲುತ್ತಾ.. ಮಕ್ಕಳಿಗೆ ಸ್ಕೂಲ್‌ಗೆ ಹೋಗಾಕೆ ಸೌಲಭ್ಯನೂ ಇಲ್ಲ. ಅಲ್ಲಿಂದ ಮಂಡಕ್ಕಿ ಭಟ್ಟಿಗೆ ದಿನಾ ಬಂದು ದುಡಿಮೆ ಮಾಡಬೇಕು. ದಿನಾ ಆಟೋ ಬಾಡಿಗೆ ಕೊಟ್ರೆ ನಾವ್ ಬದುಕಾದಾದ್ರೂ ಹೆಂಗೆ..?
  ಆಸ್ಪತ್ರೆಗೆ ಬರಬೇಕಂದ್ರೆ ಸಿಟಿಗೇ ಬರಬೇಕು. ತರಕಾರಿ ತರಬೇಕೂಂದ್ರೆ ಸಿಟಿಗೇ ಬರಬೇಕು. ಎಲ್ರಿಗೂ ತೊಂದರೆ. ಸ್ನಾನ ಮಾಡೋಕೂ ಜಾಗ ಇಲ್ಲ. ಒಬ್ರು ಹಾವು ಕಡಿದು ಒಬ್ರು ಸತ್ಹೋದ್ರು, ದೊಡ್ಡ ದೊಡ್ಡ ಚೇಳುಗಳು ಅದಾವೆ. ಮಕ್ಳು ಮರಿ ಹೆಂಗೆ ಸಾಕಬೇಕು. ನಾವ್ ಅಲ್ಲಿಗೆ ಹೋಗಲ್ಲ, ಸತ್ರೂ ಇಲ್ಲೇ ಸಾಯ್ತೀವಿ..
  ಇಲ್ಲಿನ ರಾಮಕೃಷ್ಣ ಹೆಗಡೆ ನಗರದ ಸಾಹಿರಾ, ಸತ್ಯಕ್ಕ, ಎಸ್.ಕೆ.ಸಲಾಂ, ಕಲೀಂ ಉಲ್ಲಾ, ಹಜರತ್ ಅಲಿ, ಸದ್ದಾಂ ಸೇರಿ ನಿವಾಸಿಗಳ ಆರ್ತನಾದವಿದು.
  ವರ್ತುಲ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿನ ಕೆಲವರಿಗೆ ಹಿಂದೆಯೇ ಹಕ್ಕುಪತ್ರ ನೀಡಲಾಗಿತ್ತು. ಡಿಸೆಂಬರ್‌ನಲ್ಲಿ ಜೆಸಿಬಿಗಳ ಕಾರ್ಯಾಚರಣೆಯೊಂದಿಗೆ ಇಲ್ಲಿನ ಗುಡಿಸಲುವಾಸಿ ಜನರನ್ನು ಒಕ್ಕಲೆಬ್ಬಿಸಲಾಗಿತ್ತು. ಸ್ಥಳಾಂತರವಾಗಿದ್ದ ಆವರಗೊಳ್ಳ ಗ್ರಾಮದ ಜಾಗದಲ್ಲಿ ತಗಡು ಶೀಟುಗಳಲ್ಲೇ ತಾತ್ಕಾಲಿಕ ಸೂರು ನಿರ್ಮಿಸಲಾಗಿತ್ತು.
  ಆದರೆ ಮೂಲ ಸೌಕರ್ಯಗಳನ್ನು ಕಲ್ಪಿಸದಿರುವುದು ಹಾಗೂ ಮೂರು ತಿಂಗಳಲ್ಲಿ ಶಾಶ್ವತ ಸೂರು ಕಲ್ಪಿಸಿಕೊಡುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ನಿವಾಸಿಗಳು ಶುಕ್ರವಾರ ಸ್ವಸ್ಥಾನಕ್ಕೆ ಮರಳಿದ್ದಾರೆ. ಬೊಂಬು, ಬಾಗಿಲು, ಮರದ ಸಾಮಗ್ರಿಗಳೊಂದಿಗೆ ಆಗಮಿಸಿದ ನಿವಾಸಿಗಳು ಇಲ್ಲಿಯೇ ಮೊದಲಿನಂತೆಯೇ ವಾಸ ಮಾಡುತ್ತೇವೆ ಎಂದು ಪಾಲಿಕೆಗೆ ಸಂದೇಶ ರವಾನಿಸಿದ್ದಾರೆ.
  ಮೂಲ ಸೌಕರ್ಯಗಳನ್ನು ಕಲ್ಪಿಸಿದ ನಂತರವೇ ಆವರಗೊಳ್ಳಕ್ಕೆ ನಮ್ಮನ್ನು ಸ್ಥಳಾಂತರಿಸಬೇಕಿತ್ತು. ಆದರೆ ಐದಾರು ತಿಂಗಳಾದರೂ ಅಲ್ಲಿ ಯಾವುದೇ ಸೌಲಭ್ಯ ಒದಗಿಸಿಲ್ಲ. ಮಕ್ಕಳಿಗೆ ಶಾಲೆ ವ್ಯವಸ್ಥೆ ಇಲ್ಲ. ನೆಲ ಮಟ್ಟದಲ್ಲೇ ಕಟ್ಟಿದ ತಗಡು ಶೀಟುಗಳು ನಿನ್ನೆಯ ಮಳೆಗೆ ಬಿದ್ದಿವೆ. ಪುಣ್ಯಕ್ಕೆ ಯಾರಿಗೂ ಅನಾಹುತವಾಗಿಲ್ಲ ಎಂದು ಸ್ಥಳೀಯರು ಹೇಳಿಕೊಂಡರು.
  ನಿನ್ನೆ ಮಳೆಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ತಕ್ಷಣಕ್ಕೆ ಕರೆಂಟ್ ಹೋಗಿದೆ. ಕರೆಂಟ್ ಇದ್ದಿದ್ದರೆ ಅನೇಕರು ಜೀವ ಕಳೆದುಕೊಳ್ಳುವ ಆತಂಕವಿತ್ತು. ನಾವು ತೊಂದರೆಯಲ್ಲಿದ್ದರೂ ಪಾಲಿಕೆ ಅಧಿಕಾರಿಗಳು ಗಂಜಿಕೇಂದ್ರವನ್ನು ತೆರೆದು ಮಾನವೀಯತೆ ಮೆರೆಯಲಿಲ್ಲ ಎಂದೂ ದುಃಖ ತೋಡಿಕೊಂಡರು.
  35-40 ವರ್ಷದಿಂದ ರಾಜಕಾರಣಿಗಳು ನಮ್ಮನ್ನು ಬಳಸಿಕೊಂಡಿದ್ದಾರೆ. ಆದರೆ ಸೌಲಭ್ಯ ಕಲ್ಪಿಸುತ್ತಿಲ್ಲ. ಇನ್ನು ನಾವು ಅಲ್ಲಿಗೆ ಹೋಗೋದಿಲ್ಲ. ಇಲ್ಲಿಯೇ ಗುಡಿಸಲು ಕಟ್ಟಿಕೊಳ್ಳುತ್ತೇವೆ. ನಮಗೆ ಶಾಶ್ವತ ವ್ಯವಸ್ಥೆಯನ್ನು ಇಲ್ಲಿಯೇ ಕಲ್ಪಿಸಲಿ. ಜಿ ಪ್ಲಸ್ 2 ಅಥವಾ 3 ಮಾದರಿಯಲ್ಲಿ ಸಣ್ಣ ಅಳತೆಯದಾದರೂ ಮನೆ ನಿರ್ಮಿಸಿಕೊಡಲಿ. ಅಲ್ಲಿಯವರೆಗೆ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹೇಳಿದರು.
  ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತರೆದುರು ಕೆಲ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು. ಚುನಾವಣೆ ಫಲಿತಾಂಶದ ಬಳಿಕ ವ್ಯವಸ್ಥೆ ಮಾಡಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ನೀಡಿದ ಭರವಸೆಗೆ ಜನರು ಕಿಡಿ ಕಾರಿದರು. ನಗರಪಾಲಿಕೆ ವಿರುದ್ಧ ಧಿಕ್ಕಾರ ಕೂಗಿದರು.
  ನಂತರ ಜೋರು ಮಳೆಯಲ್ಲೂ ಮಾಗಾನಹಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಮ್ಮ ಸಮಸ್ಯೆಗೆ ಸಮಾಜದ ಮುಖಂಡರು ಸ್ಪಂದಿಸದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ ತಡೆಯಿಂದಾಗಿ ಬಸ್, ಇತರೆ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

  ಹೆಗಡೆ ನಗರ ನಿವಾಸಿಗಳ ಶಾಶ್ವತ ಸೂರಿಗಾಗಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚುನಾವಣಾನೀತಿ ಸಂಹಿತೆ ಮುಗಿದ ನಂತರದಲ್ಲಿ ಕ್ರಮವಾಗಲಿದೆ. ಮಳೆಯಿಂದಾಗಿ ಬಿದ್ದಿರುವ ತಾತ್ಕಾಲಿಕ ಮನೆಗಳ ಶೆಡ್‌ಗಳ ದುರಸ್ತಿ, ವಿದ್ಯುತ್ ಕಂಬ ಅಳವಡಿಕೆ, ವಾಟರ್‌ಪ್ರೂಫ್ ಶೆಡ್ ಬಗ್ಗೆಯೂ ಆದ್ಯತೆ ನೀಡಲಾಗುವುದು.
  ರೇಣುಕಾ
  ನಗರಪಾಲಿಕೆ ಆಯುಕ್ತೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts