ಮರುಕಳಿಸಿದೆ ನಿರ್ಭಯಾ ಕೇಸ್​: ಕಬ್ಬಿಣದ ರಾಡ್​ ನೂಕಿಸಿ ಅತ್ಯಾಚಾರ ಎಸಗಿ ಕೊಲೆ!

Rape
Published on

ಬದೌನ್ (ಉತ್ತರ ಪ್ರದೇಶ): ಕಾಮುಕರ ಅಟ್ಟಹಾಸಕ್ಕೆ, ಕ್ರೌರ್ಯಕ್ಕೆ ಕೊನೆಯೇ ಇಲ್ಲವೇನೋ ಎನ್ನುವಂಥ ಭಯಾನಕ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ. ಅಂಥದ್ದೇ ಒಂದು ಭಯಾನಕ ಘಟನೆ ಉತ್ತರ ಪ್ರದೇಶ ಬದೌನ್​ನಲ್ಲಿ ನಡೆದಿದೆ.

ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಗಲ್ಲುಶಿಕ್ಷೆಯಾಗಿದೆ. ಆದರೆ ಅದರ ಬೆನ್ನಲ್ಲೇ ಥೇಟ್​ ಇದೇ ಘಟನೆ ನೆನಪಿಸುವ ಅತ್ಯಂತ ಕ್ರೌರ್ಯವಾದ ಅತ್ಯಾಚಾರ ಘಟನೆ ಬದೌನ್​ನಲ್ಲಿ ನಡೆದಿದೆ.

50 ವರ್ಷದ ಮಹಿಳೆಯೊಬ್ಬರ ಗುಪ್ತಾಂಗಕ್ಕೆ ರಾಡ್​ ಹಾಕಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅತ್ಯಂತ ಕ್ರೂರ ಘಟನೆ ಇಲ್ಲಿ ನಡೆದಿದೆ. ಮಹಿಳೆಯ ಶವವೊಂದು ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ತೆಯ ಶವವನ್ನು ಮೂವರು ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆ ಮಾಡಿದಾಗ ಅವರೇ ಬೆದರಿ ಹೋಗಿದ್ದಾರೆ. ಕಾರಣ, ಮರಣೋತ್ತರ ವರದಿಯ ಪ್ರಕಾರ, ಕಾಮುಕರು ಸಂತ್ರಸ್ತೆಯ ಶ್ವಾಸಕೋಶವನ್ನು ಹಾನಿಗೊಳಿಸಿದ್ದಾರೆ. ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದದ್ದಲ್ಲದೆ ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಹಾನಿಗೊಳಿಸಿದ್ದಾರೆ.

ಮಹಿಳೆ ತೀವ್ರ ರಕ್ತಸ್ರಾವ ಹಾಗೂ ತನ್ನ ಖಾಸಗಿ ಅಂಗಗಳಲ್ಲಿ ತೀವ್ರವಾದ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಮಹಿಳೆಯ ಮೇಲೆ ಭಾರವಾದ ವಸ್ತುವಿನಿಂದ ಹೊಡೆಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಪ್ರಕರಣದಲ್ಲಿ ಪೊಲೀಸರು ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪಿ ಮಹಂತ್ ಬಾಬಾ ಸತ್ಯನಾರಾಯಣನಿಗಾಗಿ ಶೋಧ ನಡೆಸಿದ್ದಾರೆ. ಇನ್ನು ಇದಾಗಲೇ ಮಹಂತ್ ಬಾಬಾನ ಶಿಷ್ಯ ವೇದಾರಾಮ್ ಮತ್ತು ಚಾಲಕ ಜಸ್ಪಾಲ್​ರನ್ನು ಬಂಧಿಸಲಾಗಿದೆ.

ದೇವಾಲಯಕ್ಕೆ ಹೋಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಆರೋಪಿಗಳು ಶವವನ್ನು ರಾತ್ರಿ 12 ಗಂಟೆ ಸುಮಾರಿಗೆ ಎಸೆದು ಹೋಗಿರುವುದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net