

ನವದೆಹಲಿ: ಕಳೆದ ಆಗಸ್ಟ್ನಲ್ಲಿ ನಿಧನರಾಗಿರುವ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ನ ಹಿರಿಯ ಮುಖಂಡ ಪ್ರಣಬ್ ಮುಖರ್ಜಿಯವರ ಕೊನೆಯ ಪುಸ್ತಕ ಪ್ರೆಸಿಡೆನ್ಶಿಯಲ್ ಇಯರ್ಸ್' ಪ್ರಕಟವಾಗಿದ್ದು, ಅದರಲ್ಲಿ ರಾಜಕೀಯದ ಹಲವಾರು ಮುಖಗಳನ್ನು, ಮಜಲುಗಳನ್ನು ತೆರೆದಿಟ್ಟಿದ್ದಾರೆ.
ಅದೇ ರೀತಿ ನೇಪಾಳ- ಭಾರತದ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಕುರಿತು ತಿಳಿಸಿರುವ ಅವರು, .ಅಂದು ಪ್ರಧಾನಿಯಾಗಿದ್ದ ಜವಾಹರ್ಲಾಲ್ ನೆಹರೂ ದೊಡ್ಡ ತಪ್ಪು ಮಾಡಿಬಿಟ್ಟರು. ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ನೇಪಾಳ ಭಾರತದ ಭಾಗವಾಗಿರುತ್ತಿತ್ತು. ನೇಪಾಳದ ರಾಜ ತ್ರಿಭುವನ್ ಬಿರ್ ಬಿಕ್ರಮ್ ಷಾ ಅವರು ಹಿಮಾಲಯ ಪ್ರಾಂತ್ಯವನ್ನು ಭಾರತಕ್ಕೆ ಸೇರಿಸುವ ಪ್ರಸ್ತಾಪವನ್ನು ನೆಹರೂ ತಿರಸ್ಕರಿಸಿಬಿಟ್ಟರು. ಇದು ದೊಡ್ಡ ಪ್ರಮಾದವಾಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಆಗ ನೆಹರೂ ಬದಲು ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದರೆ ಪರಿಸ್ಥಿತಿ ಬೇರೆಯದ್ದೇ ಆಗಿರುತ್ತಿತ್ತು. ನೇಪಾಳವು ಭಾರತದ ಭಾಗವಾಗಿರುತ್ತಿತ್ತು ಎಂದು ಪುಸ್ತಕದಲ್ಲಿ ತಿಳಿಸಿದ್ದಾರೆ.
‘ನನ್ನ ಪ್ರಧಾನ ಮಂತ್ರಿಗಳು: ವಿಭಿನ್ನ ಶೈಲಿಗಳು, ವಿಭಿನ್ನ ಮನೋಧರ್ಮಗಳು’ ಎಂಬ ಅಧ್ಯಾಯದಲ್ಲಿ ಈ ವಿಷಯವನ್ನು ಪ್ರಣಬ್ ಮುಖರ್ಜಿಯವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ನೇಪಾಳದ ರಾಜ, ತ್ರಿಭುವನ್ ಬಿರ್ ಬಿಕ್ರಮ್ ಷಾ, ನೇಪಾಳವನ್ನು ಭಾರತದ ಪ್ರಾಂತ್ಯವನ್ನಾಗಿ ಮಾಡಬೇಕೆಂದು ನೆಹರೂಗೆ ಸೂಚಿಸಿದ್ದರು. ಆದರೆ ನೇಪಾಳ ಸ್ವತಂತ್ರ ರಾಷ್ಟ್ರವಾಗಿದ್ದು, ಹಾಗೇ ಇರಬೇಕು ಎಂಬ ಕಾರಣಕ್ಕೆ ನೆಹರೂ ಈ ಪ್ರಸ್ತಾಪವನ್ನು ತಿರಸ್ಕರಿಸಿದರು ಎಂದಿದ್ದಾರೆ.
ಸಿಕ್ಕಿಂಗೂ ಇದೇ ರೀತಿಯಾಗಿತ್ತು. ಆದರೆ ಅದನ್ನು ಭಾರತದ ಭಾಗವನ್ನಾಗಿಸುವಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಯಶಸ್ವಿಯಾಗಿದ್ದರು. ಸಿಕ್ಕಿಂ 1975ರಲ್ಲಿ ಭಾರತದ ಭಾಗವಾದ ಸಾಮ್ರಾಜ್ಯವಾಗಿತ್ತು. ಅದೇ ಸಾಲಿನ ಏಪ್ರಿಲ್ 9ರಂದು ಸಿಕ್ಕಿಂ ಸಂಸತ್ತು ರಾಜನನ್ನು ಪದಚ್ಯುತಗೊಳಿಸುವುದಾಗಿ ಘೋಷಿಸಿತು. ಜನಾಭಿಪ್ರಾಯ ಸಂಗ್ರಹದ ಮೂಲಕ ಸಿಕ್ಕಿಂ ಭಾರತದ ಭಾಗವಾಯಿತು. ಈ ಕುರಿತು ಮೇ 16ರಂದು ಭಾರತೀಯ ಸಂಸತ್ತು ಘೋಷಿಸಿತು. ಆದರೆ ನೇಪಾಳದ ವಿಷಯದಲ್ಲಿ ನೆಹರೂ ಮಾಡಿದ ತಪ್ಪಿನಿಂದ ಪ್ರಮಾದವಾಯಿತು ಎಂದಿದ್ದಾರೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ ಅಧಿಕಾರಾವಧಿಯಲ್ಲಿ, ಪಾಕಿಸ್ತಾನ ಮತ್ತು ಚೀನಾಗಳಿಗೆ ಭೂಪ್ರದೇಶಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಪ್ರಮಾದಗಳನ್ನು ಮಾಡಿದರು ಎಂದೂ ಉಲ್ಲೇಖಿಸಿದ್ದಾರೆ.