

ತಮಿಳುನಾಡು: ಕಳೆದ ವರ್ಷ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಗೊಂಡ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಸಿನಿಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ ಸ್ಯಾಂಡಲ್ವುಡ್ ಬ್ಯೂಟಿ, ನಟಿ ರುಕ್ಮಿಣಿ ವಸಂತ್, ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜತೆಗೆ ಅಭಿನಯಿಸುವ ಮೂಲಕ ತೆರೆಮೇಲೆ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ನಟಿಯ ಮುಗ್ಧ ನಟನೆಗೆ ಮನಸೋತ ಸಿನಿಪ್ರಿಯರು, ಇನ್ನೂ ಹೆಚ್ಚಿನ ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದರು. ಇದೀಗ ಅಭಿಮಾನಿಗಳ ಆಸೆಯಂತೆ ಕಾಲಿವುಡ್ ಚಿತ್ರರಂಗಕ್ಕೆ ರುಕ್ಮಿಣಿ ಎಂಟ್ರಿ ಕೊಟ್ಟಿದ್ದಾರೆ.
ಯುವಕರ ಹೃದಯ ಗೆದ್ದ ಚೆಲುವೆ ರುಕ್ಮಿಣಿ ತಮಿಳು ನಟ ಶಿವಕಾರ್ತಿಕೆಯನ್ ಅವರ ಮುಂಬರುವ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದ್ರೆ, ಇದ್ಯಾವ ಸುದ್ದಿಗಳು ಕೂಡ ಅಧಿಕೃತಗೊಂಡಿರಲಿಲ್ಲ. ಇದೀಗ ಈ ಕುರಿತಂತೆ ಚಿತ್ರತಂಡ ಇಂದು ಅಧಿಕೃತವಾಗಿ ಘೋಷಿಸಿದೆ.
ನಟ ಶಿವಕಾರ್ತಿಕೇಯನ್ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮುಖೇನ ರುಕ್ಮಿಣಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕರಾದ ಎ.ಆರ್ ಮುರುಗದಾಸ್ ಟ್ವೀಟ್ ಮಾಡಿದ್ದು, "ಇಂತಹ ಪ್ರತಿಭಾವಂತ ವ್ಯಕ್ತಿಗಳು ನಮ್ಮೊಂದಿಗೆ ಇರುವುದು ಬಹಳ ಖುಷಿ ತಂದಿದೆ. ವಿಶೇಷ ವಿಷಯಗಳು ಶೀಘ್ರವೇ ನಿಮ್ಮ ಮುಂದೆ" ಎಂದು ಬರೆದುಕೊಂಡಿದ್ದಾರೆ.
ಸದ್ಯ ಚಿತ್ರಕ್ಕೆ ತಾತ್ಕಾಲಿಕವಾಗಿ 'SK23' ಎಂದು ಟೈಟಲ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಅಧಿಕೃತ ಶೀರ್ಷಿಕೆಯನ್ನು ಅನೌನ್ಸ್ ಮಾಡಲಾಗುವುದು. ಇದೊಂದು ಆ್ಯಕ್ಷನ್, ಎಂಟರ್ಟೈನರ್ ಚಿತ್ರ ಎಂದು ಹೇಳಲಾಗಿದ್ದು, ಸಿನಿಮಾದ ಬಿಡುಗಡೆ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಸಿನಿಮಾಗೆ ಖ್ಯಾತ ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ,(ಏಜೆನ್ಸೀಸ್).