ಕೊಪ್ಪಳ: ಕನಕಗಿರಿ ಉತ್ಸವ ಅದ್ದೂರಿ ಆಚರಣೆಗೆ ವಿವಿಧ ಸಮಿತಿ ರಚಿಸಲಾಗಿದೆ. ಅಧಿಕಾರಿಗಳು ನಿಮ್ಮ ಜವಾಬ್ದಾರಿ ಅರಿತು ಅಚ್ಚುಕಟ್ಟಾಗಿ ನಿಭಾಯಿಸಿ ಉತ್ಸವ ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ಉತ್ಸವ ಆಚರಣೆ ಅಂಗವಾಗಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಉತ್ಸವ ಆಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿವಹಿಸಿದ್ದಾರೆ. ಸಮಿತಿಗಳು ತಮಗೆ ಹಂಚಿಕೆ ಮಾಡಿದ ಕಾರ್ಯಗಳ ಕುರಿತು ರ್ನಿದಿಷ್ಟ ಯೋಜನೆ ರಚಿಸಿ ಸಚಿವರ ಗಮನಕ್ಕೆ ತರಬೇಕು. ಉತ್ಸವ ಕುರಿತ ಎಲ್ಲ ಕಾರ್ಯಗಳ ಬಗ್ಗೆ ಸಚಿವರಿಗೆ ಮಾಹಿತಿ ಇರಬೇಕು. ಕೊನೆ ಹಂತದಲ್ಲಿ ಯಾವುದೇ ಬದಲಾವಣೆ ಅಥವಾ ಗೊಂದಲಕ್ಕೆ ಅವಕಾಶವಿರಬಾರದು. ಸಮಿತಿಯಲ್ಲಿನ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದರು.
ಮೆರವಣಿಗೆ, ಸೈಕಲ್ ಜಾಥಾ, ಮ್ಯಾರಾಥಾನ್ ಆಯೋಜಿಸಿ. ವ್ಯಾಪಕ ಪ್ರಚಾರ ಕೈಗೊಳ್ಳಿ. ಎರಡು ದಿನ ನಡೆವ ಉತ್ಸವದಲ್ಲಿ ದೇಸಿ ಕ್ರೀಡೆಗಳು, ಸ್ಥಳಿಯ ಸಾಂಪ್ರದಾಯಿಕ ಕ್ರೀಡೆಗಳಿಗೆ ಅವಕಾಶ ನೀಡಿ. ಕಲಾತಂಡಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸಿ. ಸಂಭಾವನೆ, ಕಲಾತಂಡಗಳ ಸಂಖ್ಯೆ, ಕಲಾವಿದರ ವಸತಿ, ಊಟದ ವ್ಯವಸ್ಥೆಗೆ ಕ್ರಮವಹಿಸಿ. ಮೆರವಣಿಗೆಯಲ್ಲಿ ಕಲಾತಂಡಗಳು, ಸಾರ್ವಜನಿಕರು ಭಾಗವಹಿಸುವುದರಿಂದ ಹೆಚ್ಚಿನ ಸ್ಥಳಾವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚಿಸಿದರು.
ಎರಡು ಲಕ್ಷ ಜನ ಭಾಗವಹಿಸುವ ನಿರೀೆ ಇದ್ದ, ಅತಿಥಿಗಳು, ಗಣ್ಯರು, ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿ. ವಾಹನಗಳ ಪಾರ್ಕಿಂಗ್, ಕನಕಗಿರಿ ಸಂಪರ್ಕಿಸುವ ರಸ್ತೆ ದುರಸ್ಥಿ ಮಾಡಿ. ಕುಡಿವ ನೀರು, ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಠಾಚಾರ ಪಾಲಿಸಿ. ಜಿಲ್ಲೆಯ ಯುನೆಸ್ಕೋ ಪಾರಂಪರಿಕ ತಾಣಗಳು, ಕರಡಿ ಧಾಮ, ಕೊಪ್ಪಳ ಕೋಟೆ, ಇಟಗಿಯ ಮಹದೇವ ದೇವಾಲಯ ಸೇರಿದಂತೆ ಪ್ರಮುಖ ಸ್ಮಾರಕಗಳು, ಶಿಷ್ಠಾಚಾರದಂತೆ ಲೋಗೋಗಳನ್ನು ಅಳವಡಿಸುವಂತೆ ನಿರ್ದೇಶಿಸಿದರು.
ಎರಡು ದಿನಗಳಲ್ಲಿ ಎಲ್ಲ ಸಮಿತಿಗಳು ನಿಮ್ಮ ಯೋಜನಾ ವರದಿ ಸಲ್ಲಿಸಿ. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ. ಸಮಿತಿಯಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ಅಧಿಕಾರಿಗಳನ್ನು ಸೇರಿಸಿಕೊಳ್ಳಿ. ಉತ್ಸವದಲ್ಲಿ ಯಾವುದೇ ಕೊರತೆ, ಗೊಂದಲ, ಅನನುಕೂಲವಾಗದಂತೆ ಎಚ್ಚರ ವಹಿಸಲು ತಾಕೀತು ಮಾಡಿದರು.
ಜಿಪಂ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಸಹಾಯಕ ಆಯುಕ್ತ ಕ್ಯಾ.ಮಹೇಶ್ ಮಾಲಗಿತ್ತಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಇತರರಿದ್ದರು.
ಕಲಾ ತಂಡಗಳಿಂದ ಅರ್ಜಿ ಆಹ್ವಾನ: ಕನಕಗಿರಿ ಉತ್ಸವ ಸಾಂಸತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಆಸಕ್ತ ಕಲಾವಿದರು/ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕಲಾವಿದರು, ಕಲಾತಂಡಗಳು ತಮ್ಮ ಸ್ವ ವಿವರಗಳು, ಕಲಾವಿದರು/ಕಲಾತಂಡದ ಕಲಾಪ್ರದರ್ಶನದ ವಿವರಗಳನ್ನೊಳಗೊಂಡ ದಾಖಲೆಗಳು ಹಾಗೂ ಆಧಾರ ಕಾರ್ಡನೊಂದಿಗೆ ಫೆ.19 ರ ಸಂಜೆ 6 ಗಂಟೆಯೊಳಗೆ ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು ಎಂದು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.