ಗ್ರೇ ಮಾರ್ಕೆಟ್​ನಲ್ಲಿ 100 ರೂ. ಷೇರಿಗೆ 300 ರೂ.: ಐಪಿಒಗೆ ಮೊದಲ ದಿನವೇ 20 ಪಟ್ಟು ಬೇಡಿಕೆ; ನೀವು ಹೂಡಿಕೆ ಮಾಡಿದರೆ ದೊಡ್ಡ ಲಾಭ

alpex-1
Published on

ಮುಂಬೈ: ಅಲ್ಪೆಕ್ಸ್​ ಸೋಲಾರ್ ಐಪಿಒಗೆ ಮೊದಲ ದಿನವೇ 20 ಬಾರಿ ಚಂದಾದಾರಿಕೆ ಆಗಿದೆ. ಅಂದರೆ, ಈ ಐಪಿಒದಲ್ಲಿ ಹಂಚಲಾಗುತ್ತಿರುವ ಷೇರುಗಳಿಗಿಂತಲು 20 ಪಟ್ಟು ಹೆಚ್ಚು ಷೇರುಗಳ ಖರೀದಿಗೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ, ಗ್ರೇ ಮಾರುಕಟ್ಟೆಯಲ್ಲಿ ಈ ಷೇರಿನ ಬೆಲೆ ಈಗಾಗಲೇ ಗಗನಮುಖಿಯಾಗಿದೆ.

ಸೋಲಾರ್ ಪ್ಯಾನಲ್ ತಯಾರಿಕೆ ಕಂಪನಿಯಾದ ಆಲ್ಪೆಕ್ಸ್ ಸೋಲಾರ್‌ನ ಐಪಿಒ ಗುರುವಾರ, ಫೆಬ್ರವರಿ 8ರಂದು ಹೂಡಿಕೆಗಾಗಿ ತೆರೆಯಲಾಗಿದೆ. ಈ ಐಪಿಒಗೆ ಮೊದಲ ದಿನವೇ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನವೇ 20.37 ಪಟ್ಟು ಚಂದಾದಾರಿಕೆಯಾಗಿದೆ. ಚಿಲ್ಲರೆ ವಿಭಾಗದಲ್ಲಿ 34.52 ಪಟ್ಟು ಚಂದಾದಾರಿಕೆಯಾಗಿದೆ.

ಈ ಐಪಿಒದಲ್ಲಿ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಸೋಮವಾರ ಫೆಬ್ರವರಿ 12ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಐಪಿಗೆ ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ 109 ರಿಂದ 115 ರೂಪಾಯಿಗೆ ನಿಗದಿಪಡಿಸಲಾಗಿದೆ.

ಜಿಎಂಪಿ ಎಷ್ಟು?:

ಮಾರುಕಟ್ಟೆ ತಜ್ಞರ ಪ್ರಕಾರ, ಆಲ್ಪೆಕ್ಸ್ ಸೋಲಾರ್ ಐಪಿಒ ಗ್ರೇ ಮಾರ್ಕೆಟ್‌ನಲ್ಲಿ 190 ರೂಪಾಯಿಯ ಪ್ರೀಮಿಯಂನಲ್ಲಿ ಲಭ್ಯವಿದೆ. ಅಂದರೆ, ಷೇರುಗಳ ಬೆಲೆ ಗ್ರೇ ಮಾರುಕಟ್ಟೆಯಲ್ಲಿ 305 ರೂ. ತಲುಪಿದೆ. ಈ ಬೆಲೆಯೇ ಮುಂದುವರಿದರೂ ಷೇರು ಮಾರುಕಟ್ಟೆಯಲ್ಲಿ ಪಟ್ಟಿ (ಲಿಸ್ಟಿಂಗ್​) ಮಾಡಿದ ಮೊದಲ ದಿನದಂದೇ ಹೂಡಿಕೆದಾರರು ಅಂದಾಜು 165% ಲಾಭ ದೊರೆಯಬಹುದು.

ರೂ. 10 ಮುಖಬೆಲೆಯ 64.80 ಲಕ್ಷ ಈಕ್ವಿಟಿ ಷೇರುಗಳ ಹೊಸ ವಿತರಣೆಯ ಮೂಲಕ ಐಪಿಐದಲ್ಲಿ 74.52 ಕೋಟಿ ರೂ.ಗಳನ್ನು ಸಂಗ್ರಹಿಸಲು ಕಂಪನಿ ಉದ್ದೇಶಿಸಿದೆ.

ಚಿಲ್ಲರೆ ಹೂಡಿಕೆದಾರರು ಈ ಐಪಿಒದಲ್ಲಿ ಕನಿಷ್ಠ 1,200 ಈಕ್ವಿಟಿ ಷೇರುಗಳ ಲಾಟ್​ ಖರೀದಿಸಬೇಕು. ಇದಕ್ಕೆ ಕನಿಷ್ಠ ಹೂಡಿಕೆ ಮೊತ್ತವು 138,000 ರೂಪಾಯಿ ಆಗುತ್ತದೆ.

ಆಲ್ಪೆಕ್ಸ್ ಸೋಲಾರ್ ಐಪಿಒದಲ್ಲಿ ಷೇರು ಹಂಚಿಕೆಯನ್ನು ಫೆಬ್ರವರಿ 13 ರಂದು ಮಾಡಲಾಗುವುದು. ಫೆಬ್ರವರಿ 15ರಂದು ಎನ್‌ಎಸ್‌ಇಯಲ್ಲಿ ಈ ಕಂಪನಿಯ ಷೇರುಗಳನ್ನು ಪಟ್ಟಿ ಮಾಡಲಾಗುವುದು.

ಆಲ್ಪೆಕ್ಸ್ ತನ್ನ ಸೋಲಾರ್ ಮಾಡ್ಯೂಲ್ ಉತ್ಪಾದನಾ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ವಿಸ್ತರಿಸಲು ಈ ಐಪಿಒದಿಂದ ಸಂಗ್ರಹಿಸಿದ ಆದಾಯವನ್ನು ಬಳಸಲು ಉದ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net