ಮನೆಗೆ ಹೋದ್ರೂ ಬಾಸ್​ ಕಾಟ ತಪ್ತಿಲ್ವಾ? ಇಲ್ಲಿನ ಉದ್ಯೋಗಿಗಳಿಗೆ ಸೂಪರ್​​ ಪವರ್​ ಕೊಟ್ಟಿದೆ ಈ ದೇಶ!

ವಿಜಯವಾಣಿ - 2024-08-23T140206.566
Published on

ನವದೆಹಲಿ: ಪ್ರತಿನಿತ್ಯ 8 ಅಥವಾ 9 ತಾಸು ಉದ್ಯೋಗ ಮಾಡುವ ಉದ್ಯೋಗಿಗಳಿಗೆ ಕೆಲಸ ಮುಗಿಸಿ, ಮನೆಗೆ ವಾಪಾಸ್ ಬರುವುದರೊಳಗೆ ಜೀವನವೇ ಸಾಕು ಸಾಕಾಗಿ ಹೋಗಿರುತ್ತದೆ. ಬೆಳಗ್ಗೆ ಎದ್ದ ಕೂಡಲೇ ಇಡೀ ಜಗತ್ತಿನಲ್ಲಿ ಏನೇನಾಗಿದೆ ಎಂದು ಕಿರುಬೆರಳಿಗೆ ತಕ್ಷಣವೇ ಸಿಗುವ ಆನ್​ಲೈನ್​ ಸುದ್ದಿಗಳತ್ತ ಕಣ್ಣಾಯಿಸುತ, ಜಳಕ ಮಾಡಿ, ಮಾಡಿಟ್ಟ ತಿಂಡಿ ತಿಂದು, ಬಸ್​, ಕ್ಯಾಬ್ ಅಥವಾ ಖಾಸಗಿ ವಾಹನದಲ್ಲಿ ಆಫೀಸ್​ಗೆ ಬರುವಷ್ಟರಲ್ಲಿ ಮೈಯೆಲ್ಲಾ ಬೆವರು! ಇರಪ್ಪಾ ಸ್ವಲ್ಪ ಬೆವರೊರಿಸಿಕೊಂಡು ಕೆಲಸ ಶುರು ಮಾಡೋಣ ಎಂದು ಕಂಪ್ಯೂಟರ್​ ಮುಂದೆ ಕೂತದ್ದೇ ತಡ ಆಫೀಸ್​ನ ಕ್ಯಾಬಿನ್​ನಿಂದ ಬಾಸ್​ ಕೂಗು ಜೋರು. ಇವತ್ತು ಇಷ್ಟು ಕೆಲಸ ಮುಗಿಯಬೇಕು, ಎಲ್ಲವೂ ಆಗಬೇಕು. ಮನೆಗೆ ಹೋಗುವುದರೊಳಗೆ ಪೂರ್ಣಗೊಳಿಸಿ ನನಗೆ ಅಪ್ಡೇಟ್ ಮಾಡಬೇಕು ಎಂಬ ಗಡುವು ಮರೆಯಲು ಸಾಧ್ಯವೇ ಇಲ್ಲ.

ಬಾಸ್​ ಎಂದಾಕ್ಷಣ ಉದ್ಯೋಗಿಗಳಲ್ಲಿ ಭಯ, ಆತಂಕ ಮೂಡುವುದು ತೀರ ಸಹಜ. ಯಾಕಂದ್ರೆ, ನಿರ್ದಿಷ್ಟ 8-9 ಗಂಟೆಗಳ ಅವಧಿಯೊಳಗೆ ಕೊಟ್ಟ ಟಾರ್ಗೆಟ್​ ಮುಗಿಸಿಯೇ ಮನೆಯ ದಾರಿ ನೋಡಬೇಕು. ಇಲ್ಲವಾದರೆ, ಮನೆಗೆ ಹೋದರೂ ಬಾಸ್​ನ ಒತ್ತಡಗಳು ತಪ್ಪೋದಿಲ್ಲ. ಹೀಗಿದ್ದಾಗ ಅವರು ಗದರುವುದು ಸಾಮಾನ್ಯ. ಒಂದಷ್ಟು ಸಂಸ್ಥೆಗಳ ಬಾಸ್​ ಮಾತ್ರ ಬಹಳ ಸೌಜನ್ಯದಿಂದ, ಗದರದೆ, ಕೂಗದೆ ಮೃದು ಸ್ವಭಾವದಿಂದ ಉದ್ಯೋಗಿಗಳನ್ನು ಮಾತನಾಡಿಸಿ, ಕೆಲಸ ಮಾಡಿಸಿಕೊಳ್ಳುತ್ತಾರೆ. ಆದ್ರೆ, ಇನ್ನೂ ಕೆಲವರು ತಮ್ಮ ಮೇಲಿರುವವರ ಒತ್ತಡದಿಂದ ಏಕಾಏಕಿ ಕೆಲಸ ಮಾಡುವವರ ಮೇಲೆ ಕೋಪ ವ್ಯಕ್ತಪಡಿಸಿ, ಚೀರಾಡ್ತಾರೆ. ಇದು ಆಯಾ ಸಂಸ್ಥೆಗಳ ಬಾಸ್​ ಮತ್ತು ಉದ್ಯೋಗಿಗಳ ನಡುವಿನ ಬಾಂಧವ್ಯ ಅಥವಾ ಹೊಂದಾಣಿಕೆ ಎಂದು ಕರೆಯಬಹುದು.

ಕೆಲಸದ ಅವಧಿ ಮುಗಿದು ಮನೆಗೆ ಹೋದ ಮೇಲೆ ನಮಗೂ ಉದ್ಯೋಗಕ್ಕೂ ಸಂಬಂಧವಿಲ್ಲ. ಕಾರಣ, ಆಫೀಸ್​ನಲ್ಲಿ ಉದ್ಯೋಗ ನಿಮಿತ್ತ ಕೊಟ್ಟ ಸಮಯ ಮನೆಗೆ ಕೊಂಡೊಯ್ಯಲು ಅನೇಕರು ಬಯಸುವುದಿಲ್ಲ. ಆದ್ರೆ, ವಿಪರ್ಯಾಸ ಕೆಲವರಿಗೆ ಈ ಪದ್ಧತಿ ಇಷ್ಟವಿಲ್ಲ ಅಂದ್ರೂ ಸಹ ಜತೆಯಲ್ಲೇ ಬಂದಿರುತ್ತದೆ. ಆಫೀಸ್​ಗೆ ಬಂದು ಉದ್ಯೋಗ ಮಾಡಿ ಹೋದರೂ ಸಹ ಮನೆಗೆ ಹೋದ ಬಳಿಕವೂ ಬಾಸ್​ ಫೋನ್​ ಕಾಲ್​ನಲ್ಲಿ ಹೇಳಿದ್ದನ್ನು ಮಾಡುತ್ತಿರುತ್ತಾರೆ. ಈ ರೀತಿ ಹಲವೆಡೆ ಇಂದಿಗೂ ಕೂಡ ನಡೆಯುತ್ತಿದೆ. ಕೆಲಸದ ಸಮಯವನ್ನು ಹೊರತುಪಡಿಸಿಯೂ ಕಂಪೆನಿಯ ಬಾಸ್​ಗಳು ತಮ್ಮ ಉದ್ಯೋಗಿಗಳಿಗೆ ಕರೆ ಮಾಡಿ, ಈ ಕೆಲಸವನ್ನು ಇಂದೇ ಮುಗಿಸಿಕೊಡಿ, ಪೂರ್ಣಗೊಳಿಸಿ ಅರ್ಜೆಂಟ್​ ಇದೆ ಎಂದು ಆದೇಶಿಸುತ್ತಾರೆ. ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿರುವ ಆಸ್ಟ್ರೇಲಿಯಾ, ತಮ್ಮ ದೇಶದ ಉದ್ಯೋಗಿಗಳಿಗಾಗಿ ಹೊಸ ಕಾನೂನನ್ನು ಜಾರಿಗೊಳಿಸಿದೆ.

ಕೆಲಸ ಸಂಬಂಧಿತ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತರಲಾದ ಹೊಸ ಕಾನೂನಿನ ಪ್ರಕಾರ, ಆಸ್ಟ್ರೇಲಿಯಾದ ಉದ್ಯೋಗಿಗಳು ಕೆಲಸದ ಸಮಯದ ನಂತರ ತಮ್ಮ ಬಾಸ್​ಗಳ ಕರೆ ಅಥವಾ ಆದೇಶಗಳನ್ನು ಸುತರಾಮ್​ ನಿರ್ಲಕ್ಷಿಸಬಹುದು. 2009ರ ಫೇರ್ ವರ್ಕ್ ಕಾಯ್ದೆ ತಿದ್ದುಪಡಿ ಮಾಡುವ ಫೇರ್ ವರ್ಕ್ ತಿದ್ದುಪಡಿ (ಸಂಪರ್ಕ ಕಡಿತಗೊಳಿಸುವ ಹಕ್ಕು) ಕಾಯಿದೆಯು ಈ ವರ್ಷದ ಆರಂಭದಲ್ಲಿ ಸಂಸತ್ತಿನಲ್ಲಿ ಪಾಸ್​ ಆಗಿತ್ತು. ಅದರ ಅನ್ವಯ ಇದೇ ಆಗಸ್ಟ್ 26ರಿಂದ ಈ ನಿಯಮ ಜಾರಿಗೆ ಬರಲಿದೆ.

'ರೈಟ್​ ಟು ಡಿಸಕನೆಕ್ಟ್'​ ಕಾಯ್ದೆಯ ಅಡಿ ಅಂದ್ರೆ 'ಸಂಪರ್ಕ ಕಡಿತಗೊಳಿಸುವ ಹಕ್ಕು' ಮೂಲಕ ಉದ್ಯೋಗಿಗಳು ಕೆಲಸದ ಸಮಯವಲ್ಲದ ವೇಳೆ ಬಾಸ್​ನ ಕರೆ ಅಥವಾ ಸಂದೇಶವನ್ನು ತಿರಸ್ಕರಿಸಬಹುದಾಗಿದೆ. ಆದಾಗ್ಯೂ, ಇತರ ಅಂಶಗಳ ನಡುವೆ ಅವರ ಪಾತ್ರ, ಸಂಪರ್ಕದ ಕಾರಣ ಮತ್ತು ಅದನ್ನು ಹೇಗೆ ಮಾಡಲಾಗಿದೆ ಎಂಬುದರ ಆಧಾರದ ಮೇಲೆ ಉದ್ಯೋಗಿ ಬಾಸ್​ ಆದೇಶಗಳನ್ನು ನಿರಾಕರಿಸುವ ಹಕ್ಕನ್ನು ಈ ಕಾಯ್ದೆಯಡಿ ಅನುಮತಿಸಲಾಗುತ್ತದೆ.

ಕಾನೂನಿನ ಪ್ರಕಾರ, ನೌಕರನ ನಿರಾಕರಣೆ ಅಸಮಂಜಸವಾಗಿದೆಯೇ ಎಂದು ನಿರ್ಧರಿಸುವಾಗ ಕೆಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಈ ನಿಯಮವನ್ನು ಬಳಸಿಕೊಂಡು ಕೆಲವು ಉದ್ಯೋಗಿಗಳು ತಮ್ಮ ಬಾಸ್​ಗಳ ವಿರುದ್ಧ ಸುಖಾಸುಮ್ಮನೆ ಆರೋಪಗಳನ್ನು ಮಾಡಬಹುದು. ಹೀಗಿರುವಾಗ ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಕೆಲಸದ ಅವಧಿ ಮುಗಿದ ಬಳಿಕ ಉದ್ಯೋಗಿಗಳು ತಮ್ಮ ಮೊಬೈಲ್​ ಫೋನ್​ಗಳನ್ನು ಸ್ವಿಚ್ ಆಫ್ ಮಾಡುವ ಹಕ್ಕನ್ನು ಫ್ರಾನ್ಸ್, ಬೆಲ್ಜಿಯಂ, ಇಟಲಿ, ಅರ್ಜೆಂಟೀನಾ, ಚಿಲಿ, ಲಕ್ಸೆಂಬರ್ಗ್, ಮೆಕ್ಸಿಕೋ, ಫಿಲಿಪೈನ್ಸ್, ರಷ್ಯಾ, ಸ್ಲೋವಾಕಿಯಾ, ಸ್ಪೇನ್, ಒಂಟಾರಿಯೊ ಮತ್ತು ಐರ್ಲೆಂಡ್‌ ದೇಶಗಳು ಈಗಾಗಲೇ ಜಾರಿಗೊಳಿಸಿವೆ. ಈ ಕಾನೂನುಗಳು ಪ್ರಸ್ತುತ ಚಾಲ್ತಿಯಲ್ಲಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net