ಇದು ನೀವೇನಾ? ಟೀಕೆಗಳ ಬೆನ್ನಲ್ಲೇ ಫೋಟೋ ಡಿಲೀಟ್​! ಗುರುತು ಸಿಗದಷ್ಟು ಬದಲಾಗಿದ್ದಾರೆ ಈ ಸ್ಟಾರ್​ ಬ್ಯೂಟಿ

ವಿಜಯವಾಣಿ - 2024-08-23T123038.547
Published on

ಮುಂಬೈ: ‘ತಾರ್ಜನ್​ ದಿ ವಂಡರ್​ ಕಾರು’ ಸಿನಿಮಾ ಮೂಲಕ ಬಾಲಿವುಡ್​ ಮಂದಿ ಹೃದಯಗೆದ್ದ ನಟಿ ಆಯೇಶಾ ಟಾಕಿಯಾ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರ ಉಳಿದು, ತಮ್ಮ ಕುಟುಂಬದತ್ತ ಹೆಚ್ಚು ಗಮನಹರಿಸಿದ್ದಾರೆ. ಯಾವುದೇ ಕಾರ್ಯಕ್ರಮ, ಸಿನಿ ಸಮಾರಂಭಗಳಲ್ಲಿಯೂ ಕಾಣಿಸಿಕೊಳ್ಳದ ಸ್ಟಾರ್​ ನಟಿ ಈ ವರ್ಷದ ಫೆ.16ರಂದು ತಮ್ಮ ಮಗನೊಂದಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ದಿಢೀರ್​ ಎಂಬಂತೆ ಕ್ಯಾಮೆರಾ ಕಣ್ಣಿಗೆ ಬಿದ್ದರು. ಮೊದಲಿಗೆ ಇವರೊಬ್ಬರು ಸೆಲೆಬ್ರಿಟಿ ಎಂದು ಗೊತ್ತಾಗಿದ್ದೇ ಆದರೂ ಯಾರು ಎಂಬುದು ಮಾತ್ರ ಹಲವರಿಗೆ ಸ್ಪಷ್ಟವಾಗಿರಲಿಲ್ಲ. ಸೂಕ್ಷ್ಮವಾಗಿ ನೋಡಿದ ಬಳಿಕವೇ ಅವರು ಆಯೇಶಾ ಎಂದು ಅನೇಕರು ಗುರುತು ಹಿಡಿದಿದ್ದರು. ಅಂದು ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿ ಭಾರೀ ಟೀಕೆಗೆ ಒಳಗಾಗಿತ್ತು. ಸದ್ಯ ಈಗ ಅದೇ ರೀತಿಯಲ್ಲಿ ಮತ್ತೊಮ್ಮೆ ನಟಿ ಟ್ರೋಲ್​ಗಳಿಗೆ ಆಹಾರವಾಗಿದ್ದಾರೆ.

ಮೊದಲ ಬಾರಿಗೆ ನೆಟ್ಟಿಗರು ಆಯೇಶಾ ಹಿಂದಿನ ಮತ್ತು ಪ್ರಸ್ತುತ ಮುಖವನ್ನು ಹೇಗೆ ಹೋಲಿಸಿ ಟ್ರೋಲ್ ಮಾಡಿದ್ದರೋ ಇದೀಗ ಅದೇ ರೀತಿಯಲ್ಲಿ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಇತ್ತೀಚಿನ ಫೋಟೋಗಳನ್ನು ವ್ಯಾಪಕವಾಗಿ ಟೀಕಿಸಿದ್ದಾರೆ. ಸೆಲ್ಫಿ ತೆಗೆದುಕೊಂಡ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದ ಆಯೇಷಾ, ನೆಟ್ಟಿಗರ ತೀವ್ರ ಟೀಕೆ, ಟ್ರೋಲ್​ಗಳ ಹಾವಳಿಗೆ ಬೇಸತ್ತು ಕ್ಷಣಮಾತ್ರದಲ್ಲೇ ಅದನ್ನೆಲ್ಲಾ ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ನಟಿಯ ಮುಖವನ್ನು ಹೋಲಿಕೆ ಮಾಡಿದ ನೆಟ್ಟಿಗರು, ಇದು ನೀವೇನಾ? ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿ ಏನೆಲ್ಲಾ ಮಾಡಿಕೊಂಡಿದ್ದೀರಾ, ಇವೆಲ್ಲಾ ಬೇಕಿತ್ತಾ? ಪ್ಲಾಸ್ಟಿಕ್ ಸರ್ಜರಿಯಿಂದ ಮುಖದ ನೈಜ ಸೌಂದರ್ಯ ಹಾಳು ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ವ್ಯಾಪಕ ಟ್ರೋಲ್​ಗಳನ್ನು ಗಮನಿಸಿದ್ದ ಆಯೇಶಾ, "ನೀವು ಏನು ಬೇಕಾದರೂ ಮಾಡಿ. ಜನರು ನಿಮ್ಮ ಶಕ್ತಿಯನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ನೀವು ತಡೆಯಲು ಆಗುವುದಿಲ್ಲ. ನೀವು ಮಾಡುವ ಅಥವಾ ಹೇಳುವ ಯಾವುದಾದರೂ ವಿಷಯ ಅವರು ನೋಡುವ ದೃಷ್ಟಿಯಲ್ಲಿ ಫಿಲ್ಟರ್ ಆಗಿರುತ್ತದೆ. ಅದು ಸಂಪೂರ್ಣವಾಗಿ ನಿಮ್ಮ ಬಗ್ಗೆ ಅಲ್ಲ. ನಿಮ್ಮ ಕೆಲಸವನ್ನು ಸಾಧ್ಯವಾದಷ್ಟು ಪ್ರಾಮಾಣಿಕತೆ ಮತ್ತು ಪ್ರೀತಿಯಿಂದ ಮಾಡುವುದನ್ನು ಮುಂದುವರಿಸಿ” ಎಂದಿದ್ದರು. ಆದ್ರೆ, ಈ ಬಾರಿ ಒಂದೇ ಒಂದು ಮಾತು ಹೇಳದೆ ಮೌನವಾಗಿ ಫೋಟೋಗಳನ್ನು ಡಿಲೀಟ್​ ಮಾಡಿರುವ ಆಯೇಷಾ, ಸದ್ಯ ಟೀಕೆಗಳಿಂದ ದೂರ ಉಳಿಯಲು ಇಚ್ಛಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net