

ಆರೋಗ್ಯಕರ ಜೀವನಕ್ಕೆ ಆಹಾರ ಸೇವನೆಯಷ್ಟೇ ನಿದ್ದೆಯೂ ಬಹಳ ಮುಖ್ಯ. ಹೊಟ್ಟೆ ತುಂಬ ತಿಂದು ಗಡತ್ತಾಗಿ ನಿದ್ದೆ ಹೊಡೆಯಿರಿ ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೀರಿ. ನಿದ್ದೆ ಮತ್ತು ಆಹಾರದಲ್ಲಿ ಸಮತೋಲನ ಕಾಪಾಡಿಕೊಂಡರೆ ನಿಮ್ಮ ಬಳಿ ಯಾವ ಆರೋಗ್ಯ ಸಮಸ್ಯೆಯು ಸುಳಿಯುವುದಿಲ್ಲ. ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆಗಳು ಬಾದಿಸುತ್ತವೆ.
ಆದರೆ, ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡ, ಆತಂಕ, ಹೆಚ್ಚು ಸ್ಕ್ರೀನ್ ಟೈಮ್ ಮತ್ತು ಪೋಷಕಾಂಶಗಳ ಕೊರತೆ ನಿದ್ರೆಯ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದೆ. ಬೇಕಾದಷ್ಟು ನಿದ್ದೆ ಮಾಡದೇ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಅನೇಕ ಎದುರಿಸುತ್ತಿದ್ದಾರೆ.
ಉತ್ತಮ ನಿದ್ರೆಗೆ ಮೂರು ಪೋಷಕಾಂಶಗಳು ಅವಶ್ಯಕ
1. ಪೊಟ್ಯಾಶಿಯಂ: ಉತ್ತಮ ನಿದ್ರೆಗೆ ಮೂರು ಪೋಷಕಾಂಶಗಳು ತುಂಬಾ ಅವಶ್ಯಕವಾಗಿದ್ದು, ಈ ಪಟ್ಟಿಯಲ್ಲಿ ಮೊದಲವೇ ಸ್ಥಾನ ಪೊಟ್ಯಾಶಿಯಂ ಸೇರುತ್ತದೆ. ಇದು ನಮ್ಮ ದೇಹದ ನರಗಳು ಮತ್ತು ಸ್ನಾಯುಗಳನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಪೊಟ್ಯಾಶಿಯಂ ಮಟ್ಟ ಕಡಿಮೆಯಾದಾಗ ನಿದ್ರೆಗೆ ತೊಂದರೆಯು ಉಂಟಾಗುತ್ತದೆ. ಆದ್ದರಿಂದ, ನೀವು ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ, ನಿಮ್ಮ ಆಹಾರದಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿರುವ ಬಾಳೆಹಣ್ಣು, ಆವಕಾಡೊ, ಗ್ರೀನ್ಸ್, ಕ್ಯಾರೆಟ್ ಹಾಗೂ ಸಿಹಿ ಗೆಣಸುಗಳನ್ನು ಸೇರಿಸಿ.
2. ಮೆಗ್ನೀಶಿಯಂ: ಈ ಮೆಗ್ನೀಶಿಯಂ ನಿದ್ರೆಯನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರಾಹೀನತೆಯು ಮೆಗ್ನೀಶಿಯಂ ಕೊರತೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ಒಂದಾಗಿದೆ. ಮೆಗ್ನೀಶಿಯಂಗಾಗಿ ನೀವು ಕಾಳುಗಳು, ಬಾದಾಮಿ, ತೆಂಗಿನ ಹಾಲು, ಗೋಡಂಬಿ, ಕುಂಬಳಕಾಯಿ ಬೀಜಗಳು ಮತ್ತು ಚಿಯಾ ಬೀಜಗಳಂತಹ ಆಹಾರವನ್ನು ತೆಗೆದುಕೊಳ್ಳಬಹುದು.
3. ವಿಟಮಿನ್ ಡಿ: ಈ ವಿಟಮಿನ್ ಡಿ ಕೊರತೆಯಿದ್ದರೆ ರಾತ್ರಿ ಮಲಗಲು ಆಗುವುದಿಲ್ಲ. ದೇಹವು ವಿಟಮಿನ್ ಡಿ ಪಡೆಯದಿದ್ದರೆ ಆಲಸ್ಯ ಮತ್ತು ಹಗಲಿನ ನಿದ್ರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ವಿಟಮಿನ್ ಡಿಗಾಗಿ ಸೂರ್ಯೋದಯದ ವೇಳೆ ಬಿಸಿಲಿಗೆ ಮೈ ಒಡ್ಡಿ. ಅಣಬೆಗಳು, ಮೊಟ್ಟೆ, ಮೀನು, ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಿ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.