120 ವರ್ಷದ ಬಳಿಕ ಜಗತ್ತಿನ 2ನೇ ಅತಿದೊಡ್ಡ ವಜ್ರ ಪತ್ತೆ! ಇದರ ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ

second largest diamond
Published on

ಕೇಪ್​ಟೌನ್​: ವಿಶ್ವದ ಎರಡನೇ ಅತಿ ದೊಡ್ಡ ವಜ್ರವನ್ನು ದಕ್ಷಿಣ ಆಫ್ರಿಕಾದ ಬೋಟ್ಸ್​ವಾನಾದ ಗಣಿಯಲ್ಲಿ ಪತ್ತೆ ಮಾಡಲಾಗಿದೆ. ಕೆನಡಾದ ವಜ್ರ ಗಣಿಗಾರಿಕೆ ಕಂಪನಿಯಾದ ಲುಕಾರ ಡೈಮಂಡ್ ಕಾರ್ಪೊರೇಷನ್, ಕರೋವೆ ಗಣಿಯಲ್ಲಿ 2,492 ಕ್ಯಾರೆಟ್ ವಜ್ರವನ್ನು ಪತ್ತೆ ಮಾಡಿದೆ ಎಂದು ವರದಿಯಾಗಿದೆ.

ಪತ್ತೆಯಾದ ವಜ್ರದ ಚಿತ್ರಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಚಿತ್ರಗಳು ವಜ್ರವು ಅಂಗೈಯಷ್ಟು ಗಾತ್ರದಲ್ಲಿರುವುದಾಗಿ ತೋರಿಸಿವೆ. ಬರೋಬ್ಬರಿ 120 ವರ್ಷಗಳ ನಂತರ ಇಷ್ಟು ದೊಡ್ಡ ಗಾತ್ರದ ವಜ್ರವನ್ನು ಪತ್ತೆಹಚ್ಚಲಾಗಿದೆ. ಎಕ್ಸ್-ರೇ ಟ್ರಾನ್ಸ್‌ಮಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಈಶಾನ್ಯ ಬೋಟ್ಸ್​ವಾನಾದ ಕರೋವೆ ವಜ್ರದ ಗಣಿಯಲ್ಲಿ ಈ ವಜ್ರವನ್ನು ಕಂಡುಹಿಡಿಯಲು ಸಾಧ್ಯವಾಯಿತು ಎಂದು ಲುಕಾರ ಡೈಮಂಡ್ ಕಂಪನಿ ಹೇಳಿದೆ.

ಈ ಅಸಾಮಾನ್ಯ 2,492 ಕ್ಯಾರೆಟ್ ವಜ್ರದ ಪತ್ತೆಯಿಂದ ನಾವು ಖುಷಿಯಾಗಿದ್ದೇವೆ. ಇಂತಹ ಬೃಹತ್ ಹಾಗೂ ಉತ್ತಮ ಗುಣಮಟ್ಟದ ವಜ್ರವನ್ನು ಪತ್ತೆಹಚ್ಚುವ ಮೂಲಕ ವಜ್ರದ ಪತ್ತೆ ಕಾರ್ಯದಲ್ಲಿ ನಮ್ಮ ವಿಧಾನದ ಪರಿಣಾಮಕಾರಿತ್ವವನ್ನು ಇದು ತೋರಿಸುತ್ತದೆ ಮತ್ತು ನಮ್ಮ ಷೇರುದಾರರು ಹಾಗೂ ಮಧ್ಯಸ್ಥಗಾರರಿಗೆ ಮೌಲ್ಯವನ್ನು ಹೆಚ್ಚಿಸುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ಲುಕಾರಾ ಕಂಪನಿಯ ಅಧ್ಯಕ್ಷ ವಿಲಿಯಂ ಲ್ಯಾಂಬ್, ಅಲ್​ ಜಜೀರಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಅಂದಹಾಗೆ ಪತ್ತೆಯಾದ ವಜ್ರ ಉತ್ತಮ ಗುಣಮಟ್ಟದ ರತ್ನಗಳನ್ನು ಉತ್ಪಾದಿಸುತ್ತದೆಯೇ ಎಂಬುದು ಇನ್ನೂ ಅನುಮಾನವಾಗಿದೆ. ಹೀಗಾಗಿ ವಜ್ರವನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಬೇಕಾಗಿದೆ. ಅಂದಾಜಿನ ಪ್ರಕಾರ ಈ ವಜ್ರದ ಬೆಲೆ ಬರೋಬ್ಬರಿ 40 ಮಿಲಿಯನ್‌ ಡಾಲರ್​ (3,35,49,98,000 ಕೋಟಿ ರೂ.) ಗಿಂತಲೂ ಹೆಚ್ಚಿದೆ.

ಇದಕ್ಕೂ ಮೊದಲು ಅಂದರೆ, 1905 ರಲ್ಲಿ 3,106 ಕ್ಯಾರೆಟ್ ವಜ್ರವನ್ನು ಕಂಡುಹಿಡಿಯಲಾಗಿತ್ತು. ಇದೇ ವಿಶ್ವದ ಅತಿದೊಡ್ಡ ವಜ್ರವಾಗಿದೆ. ಇದರ ಹೆಸರು ಕಲಿನನ್ ಡೈಮಂಡ್. ಇದೀಗ ಆ ವಜ್ರ ಬ್ರಿಟಿಷ್ ರಾಜಮನೆತನದ ಆಭರಣ ಸಂಗ್ರಹದ ಭಾಗವಾಗಿದೆ.

ಅಂದಹಾಗೆ ಬೋಟ್ಸ್​ವಾನಾ ವಿಶ್ವದ ಅತಿ ದೊಡ್ಡ ವಜ್ರ ಉತ್ಪಾದಕ ಪ್ರದೇಶವಾಗಿದೆ. ವಜ್ರಗಳು ದೇಶೀಯ ಉತ್ಪಾದನೆಯಲ್ಲಿ ಶೆ. 30 ರಷ್ಟು ಮತ್ತು ರಫ್ತಿನಲ್ಲಿ ಶೇ. 80 ರಷ್ಟನ್ನು ಹೊಂದಿವೆ. ಬೋಟ್ಸ್​ವಾನಾದಲ್ಲಿ ಇದುವರೆಗೆ ಕಂಡುಬಂದ ಅತಿದೊಡ್ಡ ವಜ್ರವೆಂದರೆ 1,758 ಕ್ಯಾರೆಟ್ ಸೆವೆಲೋ. ಇದನ್ನು 2019ರಲ್ಲಿ ಕರೋವೇ ಗಣಿಯಲ್ಲಿ ಕಂಡುಹಿಡಿಯಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net