ನಿಮ್ಮಂತಹವರಿಗೆ ಹೆಣ್ಣು ಅಂದ್ರೆ ಮಜಾ​ ಮಾಡೋ ವಸ್ತು! ಗಂಗೂಲಿ ವಿರುದ್ಧ ಶಮಿ ಮಾಜಿ ಪತ್ನಿ ಆಕ್ರೋಶ

Sourav Ganguly
Published on

ಕೋಲ್ಕತ್ತ: ಇಲ್ಲಿನ ಆರ್​ಜಿ ಕರ್​ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ಇದು ಇಡೀ ವ್ಯವಸ್ಥೆಯ ವೈಫಲ್ಯ ಎಂದು ಸ್ವತಃ ಸುಪ್ರೀಂಕೋರ್ಟ್​ ವಿಷಾದ ವ್ಯಕ್ತಪಡಿಸಿದೆ. ಇದೇ ಪ್ರಕರಣದ ಬಗ್ಗೆ ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ನೀಡಿರುವ ಹೇಳಿಕೆಯ ವಿರುದ್ಧ ಟೀಮ್​​ ಇಂಡಿಯಾದ ವೇಗಿ ಮೊಹಮ್ಮದ್​ ಶಮಿ ಅವರ ಮಾಜಿ ಪತ್ನಿ ಹಸೀನಾ ಜಹಾನ್​ ಕಿಡಿಕಾರಿದ್ದಾರೆ.

ಗಂಗೂಲಿ ಏನು ಹೇಳಿದ್ದರು ಎಂದು ನೋಡುವುದಾದರೆ, ಏನು ನಡೆದೆಯೋ ಅದು ತಪ್ಪು. ಆದರೆ, ಇಂತಹ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತದೆ. ಇದನ್ನೇ ಮುಂದಿಟ್ಟುಕೊಂಡು ಇಡೀ ಪಶ್ಚಿಮ ಬಂಗಾಳದ ಸುರಕ್ಷತೆಯನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಭಾರತ ಒಂದು ಅಧ್ಬುತ ದೇಶ. ಪಶ್ಚಿಮ ಬಂಗಾಳ ಕೂಡ ಒಂದು ಶ್ರೇಷ್ಠ ರಾಜ್ಯ. ಇದೊಂದು ಪ್ರಕರಣದಿಂದ ಇಡೀ ರಾಜ್ಯವನ್ನು ದೂಷಿಸುವುದು ಸರಿಯಲ್ಲ ಮತ್ತು ಈ ಪ್ರಕರಣದಲ್ಲಿ ಆರೋಪಿ ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗಂಗೂಲಿ ಮಾಧ್ಯಮಗಳ ಮುಂದೆ ಹೇಳಿದ್ದರು.

ಮಾಧ್ಯಮಗಳ ಮುಂದೆ ಗಂಗೂಲಿ ನೀಡಿದ ಹೇಳಿಕೆಯ ವಿಡಿಯೋ ತುಣಕನ್ನು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡಿರುವ ಹಸೀನಾ ಜಹಾನ್​, ಸೌರವ್ ಗಂಗೂಲಿಯಂತಹವರಿಗೆ ಮಹಿಳೆಯರು ಬಹುಶಃ ಮನರಂಜನೆ ಮತ್ತು ಮೋಜಿನ ವಸ್ತುವಾಗಿದೆ. ಆದ್ದರಿಂದಲೇ ವಿಶ್ವದೆಲ್ಲೆಡೆ ಇಂತಹ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿದ್ದು, ಭದ್ರತಾ ವ್ಯವಸ್ಥೆಯ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಎತ್ತಬಾರದು ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಭಾರತ ಮಹಿಳೆಯರಿಗೆ ಸುರಕ್ಷಿತವಾಗಿದೆ. ನಿಜವಾಗಿ ಸೌರವ್, ನಿಮ್ಮ ಸ್ವಂತ ಮಗಳು ಸುರಕ್ಷಿತವಾಗಿದ್ದಾರೆ ಮತ್ತು ಅದಕ್ಕಾಗಿಯೇ ನೀವು ಇತರರ ಸುರಕ್ಷತೆಯ ಬಗ್ಗೆ ಚಿಂತಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೀವು ಏನು ಎಂಬುದನ್ನು ನಾನು 2018ರಲ್ಲೇ ಅರ್ಥಮಾಡಿಕೊಂಡಿದ್ದೇನೆ. ಈಗ ಬಂಗಾಳಿಗಳು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ನೀವು ಉತ್ತಮ ಕ್ರಿಕೆಟಿಗನಾಗಿದ್ದರೆ, ಉತ್ತಮ ವ್ಯಕ್ತಿಯೂ ಆಗಿರಬೇಕೆಂದು ಅಗತ್ಯವಿಲ್ಲ ಎಂದು ಗಂಗೂಲಿ ವಿರುದ್ಧ ಹಸೀನಾ ಜಹಾನ್​ ಕಿಡಿಕಾರಿದ್ದಾರೆ.

ಅಂದಹಾಗೆ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಹಾಗೂ ಹಸಿನಾ ಜಹಾನ್, ಕೌಟುಂಬಿಕ ಕಲಹಗಳಿಂದಾಗಿ ಬೇರೆ ಬೇರೆ ವಾಸಿಸುತ್ತಿದ್ದಾರೆ. ಜಹಾನ್​ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.

ಶಮಿ ವಿರುದ್ಧ ಜಹಾನ್​, ಜಾಧವಪುರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್​ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್​, ಮಾಜಿ ಪತಿಯ ಕಾಲ್​ ರೆಕಾರ್ಡಿಂಗ್ಸ್​ ಸಹ ಶೇರ್​ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್​ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್​ ಬೌಲರ್​ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net