

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹೆಸರೇಳಿದರೆ ಸಾಕು ಅವರ ಸ್ಟೈಲ್ ಕಣ್ಣ ಮುಂದೆ ಬರುತ್ತದೆ. ತಮ್ಮ ನಟನೆ ಹಾಗೂ ಸ್ಟೈಲ್ನಿಂದಲೇ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಅವರ ಅಭಿಮಾನಿ. ಇಂತಹ ದಿಗ್ಗಜ ನಟನು ಕೂಡ ಒಂದೊಮ್ಮೆ ನಟನೆಯಲ್ಲಿ ಎಡವಿದ್ದರು. ಇದನ್ನು ಸ್ವತಃ ರಜಿನಿಕಾಂತ್ ಅವರೇ ಒಪ್ಪಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಭಾಗ-1ರ ಬಿಡುಗಡೆ ಸಂದರ್ಭದಲ್ಲಿ ಟ್ರೈಲರ್ ರಿಲೀಸ್ ಈವೆಂಟ್ಗೆ ರಜಿನಿ ಮತ್ತು ಕಮಲ್ ಹಾಸನ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಮಾತನಾಡಿದ್ದ ರಜಿನಿ, ಒಂದು ದೃಶ್ಯದಲ್ಲಿ ನಟಿಸಲು ಬರದಿದ್ದಾಗ ಕಮಲ್ ಹಾಸನ್ ಸಹಾಯ ಮಾಡಿದ್ದರು ಎಂದು ಬಹಿರಂಗಪಡಿಸಿದರು. ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಣಿರತ್ನಂ ಅವರು ಭಾರತೀಯ ಚಲನಚಿತ್ರೋದ್ಯಮದಲ್ಲಿ ಲೆಜೆಂಡರಿ ನಿರ್ದೇಶಕ ಎಂದು ಕರೆಯುತ್ತಾರೆ. ಈ ಲೆಜೆಂಡ್ ನಿರ್ದೇಶನದಲ್ಲಿ 1991ರಲ್ಲಿ ತೆರೆಕಂಡ ದಳಪತಿ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ಆದರೆ, ಈ ಚಿತ್ರದ ಶೂಟಿಂಗ್ ವೇಳೆ ರಜಿನಿ ನಟನೆ ನಿರ್ದೇಶಕರ ಅಸಮಧಾನಕ್ಕೆ ಕಾರಣವಾಗಿತ್ತು. ಬಳಿಕ ಮಣಿರತ್ನಂ ಅವರನ್ನು ಸಮಾಧಾನ ಮಾಡಲು ರಜಿನಿಕಾಂತ್ ಅವರು ಕಮಲ್ ಹಾಸನ್ ಸಹಾಯ ತೆಗೆದುಕೊಂಡರು.
ದಳಪತಿ ಸಿನಿಮಾದಲ್ಲಿ ರಾಜಕಾರಣಿಯೊಬ್ಬರಿಗೆ ಸವಾಲೆಸೆಯುವ ದೃಶ್ಯವಿದೆ. ಆ ದೃಶ್ಯ ಅದ್ಭುತವಾಗಿರಬೇಕು ಎಂದು ಮಣಿರತ್ನಂ ಒತ್ತಾಯಿಸಿದರು. ನಾನು ಲೆಕ್ಕವಿಲ್ಲದಷ್ಟು ಟೇಕ್ಗಳನ್ನು ತೆಗೆದುಕೊಂಡೆ. ಆದರೆ ಆ ದೃಶ್ಯ ಸರಿಯಾಗಿ ಬರಲಿಲ್ಲ ಎಂದು ಮಣಿರತ್ನಂ ಅಸಮಾಧಾನ ವ್ಯಕ್ತಪಡಿಸಿದರು. ನಾನು ತುಂಬಾ ನಿರಾಶೆಗೊಂಡೆ. ನಂತರ ನಾನು ನನ್ನ ಸ್ನೇಹಿತ ಕಮಲ್ ಹಾಸನ್ ಅವರನ್ನು ಕರೆದು ಸಲಹೆಯನ್ನು ಕೇಳಿದೆ. ಬಳಿಕ ಆ ದೃಶ್ಯ ಸೊಗಸಾಗಿ ಮೂಡಿಬಂತು. ಮಣಿರತ್ನಂ ಅವರು ಕೂಡ ಖುಷಿಯಾದರು. ಅದಕ್ಕಾಗಿ ನಾನು ಕಮಲ್ ಅವರಿಗೆ ಋಣಿಯಾಗಿರುತ್ತೇನೆ ಎಂದು ರಜಿನಿಕಾಂತ್ ಆ ದಿನಗಳನ್ನು ಪೊನ್ನಿಯನ್ ಸೆಲ್ವನ್ ಟ್ರೈಲರ್ ರಿಲೀಸ್ ಈವೆಂಟ್ ವೇಳೆ ನೆನಪಿಸಿಕೊಂಡರು. ಸದ್ಯ ಈ ವಿಡಿಯೋ ಮತ್ತೆ ವೈರಲ್ ಆಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ರಜನಿ ವೆಟ್ಟಯನ್ ಮತ್ತು ಕೂಲಿ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. (ಏಜೆನ್ಸೀಸ್)