ಚಾಲಕನ ತೊಡೆ ಮೇಲೆ ಕೂತು ಅಪಘಾತ ಮಾಡಿದ್ದಲ್ಲದೆ ರಸ್ತೆಯಲ್ಲೇ ಯುವತಿಯ ಹೈಡ್ರಾಮ: ಪೊಲೀಸರೇ ಶಾಕ್​! Russian Girl

Russian Girl
Published on

Russian Girl : ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ರಷ್ಯಾದ ಯುವತಿಯೊಬ್ಬಳು ಹೈಡ್ರಾಮ ಪ್ರದರ್ಶಿಸಿದ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ರಾಯ್‌ಪುರದ ವಿಐಪಿ ರಸ್ತೆಯಲ್ಲಿ ನಿನ್ನೆ (ಫೆ.06) ಮಧ್ಯರಾತ್ರಿ ಈ ಘಟನೆ ನಡೆದಿದೆ. ಪೊಲೀಸರ ಹೇಳಿಕ ಪ್ರಕಾರ, ವೇಗವಾಗಿ ಬಂದ ಇಂಡಿಗೋ ಕಾರು, ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಕೂಟರ್‌ನಲ್ಲಿ ಮೂವರು ಯುವಕರು ಪ್ರಯಾಣಿಸುತ್ತಿದ್ದರು. ಕಾರಿನ ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ ಗುದ್ದಿದ ರಭಸಕ್ಕೆ ಸ್ಕೂಟರ್ ಸವಾರ ಕೆಲವು ಮೀಟರ್ ದೂರದಲ್ಲಿ ಬಿದ್ದನು. ಇತರೆ ಇಬ್ಬರು ಗಂಭೀರವಾಗಿ ಗಾಯಗೊಂಡರು. ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಕಾರಿನಲ್ಲಿ ಓರ್ವ ಯುವಕ ಮತ್ತು ರಷ್ಯಾದ ಯುವತಿ ಇದ್ದರು. ಇಬ್ಬರೂ ವಿಪರೀತ ಕುಡಿದಿದ್ದರು. ಅಪಘಾತದ ನಂತರ, ಕಾರಿನಿಂದ ಕೆಳಗಡೆ ಇಳಿದ ರಷ್ಯಾದ ಯುವತಿ, ತನ್ನ ಸುತ್ತಮುತ್ತ ಇದ್ದ ಜನರನ್ನು ತನ್ನ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದಳು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಪರಿಸ್ಥಿತಿಯನ್ನು ತಣ್ಣಗಾಗಿಸಲು ಪೊಲೀಸರು ಯತ್ನಿಸಿದರು. ಆದರೆ, ಆ ವಿದೇಶಿ ಮಹಿಳೆ ಪೊಲೀಸರನ್ನೂ ಸಹ ತಳ್ಳಿದಳು. ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪೊಲೀಸರಿಗೆ ತಿಳಿಸಿದ ಸ್ಥಳೀಯರ ಮೇಲೆಯೂ ಆಕೆ ಹಲ್ಲೆ ಮಾಡಲು ಪ್ರಯತ್ನಿಸಿದಳು.

ಅಂದಹಾಗೆ ಕಾರನ್ನು ಭವೇಶ್ ಆಚಾರ್ಯ ಎಂಬ ಯುವಕ ಚಲಾಯಿಸುತ್ತಿದ್ದ. ಘಟನೆ ನಡೆದ ಸಮಯದಲ್ಲಿ ಭವೇಶ್ ಆಚಾರ್ಯ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದ. ರಷ್ಯಾದ ಯುವತಿ, ಆತನ ತೊಡೆಯ ಮೇಲೆ ಕುಳಿತಿದ್ದಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂದಿದ್ದಾರೆ. ಈ ಘಟನೆಯ ನಂತರ, ರಷ್ಯಾದ ಯುವತಿ ಕಾರಿನಿಂದ ಇಳಿದು ಅಲ್ಲಿದ್ದ ಜನರ ಮೇಲೆ ಹಲ್ಲೆ ನಡೆಸಿದಳು ಎಂದು ಸ್ಥಳೀಯರು ದೂರು ನೀಡಿದ್ದಾರೆ.

ಸದ್ಯ ಯುವತಿಯ ಹೈಡ್ರಾಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಸ್ಥಳೀಯರ ದೂರಿನ ಆಧಾರದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಮೂವರು ಯುವಕರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net