33 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 33 ನಾಣ್ಯಗಳನ್ನು ಹೊರತೆಗೆದ ವೈದ್ಯರು: ಆತನಿಗಿದೆ ವಿಚಿತ್ರ ಕಾಯಿಲೆ! Coins Removed

Coins Removed
Published on

Coins Removed : ತುರ್ತು ಆಪರೇಷನ್​ ಮಾಡಿ 33 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಸುಮಾರು 300 ರೂಪಾಯಿ ಮೌಲ್ಯದ 33 ನಾಣ್ಯಗಳನ್ನು ಹೊರತೆಗೆದ ಘಟನೆ ಹಿಮಾಚಲ ಪ್ರದೇಶದ ಬಿಲಾಸ್​ಪುರದಲ್ಲಿ ನಡೆದಿದೆ.

ಗುಮರ್ವಿನ್ ಮೂಲದ ವ್ಯಕ್ತಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಆತನ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದರು. ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ಒಳಗೆ ಲೋಹದ ವಸ್ತುಗಳು ಇರುವುದು ಕಂಡುಬಂತು. ಇದಾದ ನಂತರ ಎಂಡೋಸ್ಕೋಪಿ ನಡೆಸಲಾಯಿತು. ಆ ವ್ಯಕ್ತಿಯ ಹೊಟ್ಟೆಯು ನಾಣ್ಯಗಳಿಂದ ತುಂಬಿರುವುದು ಗೊತ್ತಾಯಿತು.

ನಾಣ್ಯಗಳಿರುವುದು ಪತ್ತೆಯಾದ ಬೆನ್ನಲ್ಲೇ ವ್ಯಕ್ತಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ವೈದ್ಯ ಅನುಷ್ಕ್ ಅವರು ಆಪರೇಷನ್​ ಮಾಡಿ 33 ನಾಣ್ಯಗಳನ್ನು ಹೊರತೆಗೆದರು. ಆ ನಾಣ್ಯಗಳು ಒಟ್ಟು 247 ಗ್ರಾಂ ತೂಕವಿತ್ತು ಎಂದು ವೈದ್ಯರು ಹೇಳಿದ್ದಾರೆ. ಆ ವ್ಯಕ್ತಿಯ ಹೊಟ್ಟೆಯಿಂದ ಒಂದು, ಎರಡು, ಹತ್ತು ಮತ್ತು 20 ರೂಪಾಯಿ ನಾಣ್ಯಗಳನ್ನು ಹೊರತೆಗೆಯಲಾಗಿದೆ.

ಈ ಬಗ್ಗೆ ಮಾತನಾಡಿರುವ ವೈದ್ಯ ಅನುಷ್ಕ್​, ಈ ಶಸ್ತ್ರಚಿಕಿತ್ಸೆ ಸವಾಲಿನದ್ದಾಗಿತ್ತು. ಆ ವ್ಯಕ್ತಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ ಎಂದು ನಾವು ಭಾವಿಸಿದ್ದೆವು. ಅವನ ಹೊಟ್ಟೆ ಬಲೂನಿನಂತೆ ಊದಿತ್ತು. ಅವನ ಹೊಟ್ಟೆಯಾದ್ಯಂತ ನಾಣ್ಯಗಳು ಹರಡಿದ್ದವು. ಶಸ್ತ್ರಚಿಕಿತ್ಸೆಗೆ ಸುಮಾರು ಮೂರು ಗಂಟೆಗಳು ಬೇಕಾಯಿತು. ಆ ವ್ಯಕ್ತಿಗೆ ಸ್ಕಿಜೋಫ್ರೇನಿಯಾ ಎಂಬ ಕಾಯಿಲೆ ಇದೆ ಎಂದು ಹೇಳಿದ್ದಾರೆ.

ಸ್ಕಿಜೋಫ್ರೇನಿಯಾ ಎಂದರೇನು?

ಇದೊಂದು ಮಾನಸಿಕ ರೋಗ. ರೋಗಿಯ ಆಲೋಚನೆಗಳು ಮತ್ತು ಮಾತು ವಾಸ್ತವಕ್ಕೆ ಸಂಬಂಧಿಸಿರುವುದಿಲ್ಲ. ಇತರರು ಸತ್ಯವನ್ನು ಅರ್ಥಮಾಡಿಸಲು ಪ್ರಯತ್ನಿಸಿದರೂ, ರೋಗಿಯು ಅದನ್ನು ಸ್ವೀಕರಿಸಲು ಸಿದ್ಧರಿರುವುದಿಲ್ಲ. ಈ ಸ್ಥಿತಿಯಿರುವ ಜನರು ತಮ್ಮ ಸುತ್ತಮುತ್ತಲಿನವರನ್ನು ನಂಬಲು ಸಿದ್ಧರಿರುವುದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net