

ಭುವನೇಶ್ವರ್: ಒಡಿಶಾ ರಾಜಧಾನಿ ಭುವನೇಶ್ವರದ ರಸ್ತೆಯಲ್ಲಿ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ದಾಳಿ ಮಾಡಿದ ವಿಡಿಯೋ ವೈರಲ್ ಆದ ಎರಡು ದಿನಗಳ ಬೆನ್ನಲ್ಲೇ ಆರೋಪಿಯನ್ನು ಪೊಲೀಸ್ ಕಮಿಷನರೇಟ್ ವಿಶೇಷ ತಂಡ ಇಂದು ಬಂಧಿಸಿದೆ.
ಆರೋಪಿಯ ಸುಳಿವು ಪಡೆದ ವಿಶೇಷ ಪೊಲೀಸ್ ತಂಡ ಎರಡು ಪ್ರದೇಶಗಳ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯ ಸಂತ್ರಸ್ತ ಯುವತಿಯ ಬಳಿ ಮೊಬೈಲ್ ಫೋನ್ ಕಸಿಯಲು ಯತ್ನಿಸಿದ್ದಾನೆ. ಆದರೆ, ವಿರೋಧಿಸಿದಾಗ ಆಕೆಯ ಮೇಲೆ ಆರೋಪಿ ದಾಳಿ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 31ರಂದು ಸಿಸಿಟಿವಿ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ಕಾಣಿಸಿಕೊಂಡಿತು. ವಿಡಿಯೋದಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಾಯಗೊಂಡ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್)