

ನವದೆಹಲಿ : ಕರೊನಾ ಲಸಿಕೆಯ ಕೊರತೆ ತಲೆದೋರಿರುವಾಗ ಹೊಸದಾಗಿ ನೂರಾರು ಲಸಿಕಾ ಕೇಂದ್ರಗಳಿಗೆ ಚಾಲನೆ ನೀಡಿರುವ ದೆಹಲಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ದೆಹಲಿ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಜನರಿಗೆ ಎರಡೂ ಡೋಸ್ಗಳನ್ನು ನೀಡಬಹುದು ಎಂಬ ಖಾತ್ರಿ ಇಲ್ಲದೆ ಎಷ್ಟೊಂದು ಲಸಿಕಾ ಕೇಂದ್ರಗಳನ್ನು ಸಂಭ್ರಮಾಡಂಬರಗಳಿಂದ ತೆರೆಯುವ ಅಗತ್ಯವೇನಿತ್ತು ಎಂದು ಕಟುವಾಗಿ ಪ್ರಶ್ನಿಸಿದೆ.
ಕೋವಾಕ್ಸಿನ್ನ ಮೊದಲನೇ ಡೋಸ್ ಪಡೆದಿರುವ ಲಕ್ಷಾಂತರ ಜನರಿಗೆ 6 ವಾರಗಳು ಇನ್ಕ್ಯುಬೇಷನ್ ಪಿರಿಯಡ್ ಮುಗಿಯುವುದರೊಳಗೆ ಎರಡನೇ ಡೋಸ್ ನೀಡಬೇಕಾಗಿದೆ. ಆದರೆ ದೆಹಲಿಯಲ್ಲಿ ಕೋವಾಕ್ಸಿನ್ ಕೊರತೆಯಿದ್ದು, ಎರಡನೇ ಡೋಸ್ ಸಕಾಲಿಕವಾಗಿ ಸಿಗುವುದೇ ಎಂಬ ಅನುಮಾನವಿದೆ ಎಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮತ್ತೊಂದು ಅರ್ಜಿಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ಗೂ ಕೊರತೆ ಇದೆ ಎಂದು ದೂರಲಾಗಿದೆ.
ಇಂದು ಈ ಅರ್ಜಿಗಳ ವಿಚಾರಣೆಯ ವೇಳೆ, "ಎರಡನೇ ಡೋಸ್ಅನ್ನೂ ಒದಗಿಸಬಲ್ಲೆವೆಂಬ ಭರವಸೆ ಇಲ್ಲದ ಮೇಲೆ ನೀವು ಲಸಿಕಾ ಕೇಂದ್ರಗಳನ್ನು ಯಾಕೆ ಆರಂಭಿಸಿದಿರಿ ? ಆ ಕೆಲಸವನ್ನು ನಿಲ್ಲಿಸಬೇಕಿತ್ತು. ಎರಡನೇ ಡೋಸ್ ಸಿಗುವುದಿಲ್ಲ ಎಂದಾಗ ಮಹಾರಾಷ್ಟ್ರ (ಲಸಿಕಾ ಕೇಂದ್ರಗಳನ್ನು ತೆರೆಯುವುದನ್ನು) ನಿಲ್ಲಿಸಿತ್ತು" ಎಂದು ಕೋರ್ಟ್ ಹೇಳಿತು. "ಎಲ್ಲೆಡೆ ಸಂಭ್ರಮ ಮತ್ತು ಆಡಂಬರದಿಂದ ಎಷ್ಟೊಂದು ಲಸಿಕಾ ಕೇಂದ್ರಗಳನ್ನು ನೀವು ತೆರೆದುಬಿಟ್ಟಿದ್ದೀರಿ. ಈಗ ಎರಡನೇ ಡೋಸ್ಗೆ ಸ್ಟಾಕ್ ಯಾವಾಗ ಲಭ್ಯವಾಗುತ್ತದೆ ಎಂದು ಗೊತ್ತಿಲ್ಲ ಎಂದು ಹೇಳುತ್ತಿದ್ದೀರಿ" ಎಂದು ಅಸಮಾಧಾನ ವ್ಯಕ್ತಪಡಿಸಿತು.
ದೆಹಲಿಯಲ್ಲಿ ಈವರೆಗೆ 54 ಲಕ್ಷ ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಇವರಲ್ಲಿ 12.24 ಜನರಿಗೆ ಮಾತ್ರ ಎರಡೂ ಡೋಸ್ಗಳನ್ನು ನೀಡಲಾಗಿದೆ. ಒಂಭತ್ತು ದಿನಗಳಿಂದ ದೆಹಲಿಯಲ್ಲಿ 18-44 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಹಾಲಿ ದೆಹಲಿಯಲ್ಲಿ 4,43,750 ಡೋಸ್ ಲಸಿಕೆಗಳು ಲಭ್ಯವಿದ್ದು, ಇದರಲ್ಲಿ 3,96,000 ಕೋವಿಶೀಲ್ಡ್ ಡೋಸ್ಗಳಾಗಿದ್ದು, 47,310 ಕೋವಾಕ್ಸಿನ್ ಡೋಸ್ಗಳಾಗಿವೆ. ದೆಹಲಿಯ ಲಸಿಕಾಕರಣದ ವೇಗದಲ್ಲಿ ಇನ್ನು 19 ದಿನಗಳಲ್ಲಿ ಈ ಡೋಸ್ಗಳು ಮುಗಿಯಲಿವೆ ಎನ್ನಲಾಗಿದೆ. (ಏಜೆನ್ಸೀಸ್)