

ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದ ಪಕ್ಷದಲ್ಲಿ ಅವರನ್ನು ಕೂಡಲೇ ವಾಪಸ್ ಕರೆತರಲು ಸಿಬಿಐ ತಂಡ ಸಿದ್ಧವಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಶಾರದಾ ರೌತ್ ನೇತೃತ್ವದಲ್ಲಿ 6 ಸಿಬಿಐ ಅಧಿಕಾರಿಗಳು ಈಗಾಗಲೇ ಡೊಬಿನಿಕಾದಲ್ಲಿದ್ದಾರೆ.
ಡೊಮಿನಿಕನ್ ಕೋರ್ಟ್ ಹಸ್ತಾಂತರದ ಆದೇಶ ಹೊರಡಿಸಿದರೆ, ಚೋಕ್ಸಿಯನ್ನು ಖಾಸಗಿ ಜೆಟ್ನಲ್ಲಿ, ಈ ಸಿಬಿಐ ತಂಡ ಭಾರತಕ್ಕೆ ಕರೆತರಲಿದೆ. ಭಾರತದಲ್ಲಿ ವಿಮಾನ ಇಳಿದ ಕೂಡಲೇ ಶಾರದಾ ರೌತ್ ಅವರು, ಚೋಕ್ಸಿ ಅವರನ್ನು ಬಂಧನಕ್ಕೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.
ಚೋಕ್ಸಿಯ ಹಸ್ತಾಂತರದ ಬಗ್ಗೆ ಡೊಮಿನಿಕಾದ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಆತ ಭಾರತದ ನಾಗರೀಕನಾಗಿರುವ ಬಗ್ಗೆ, ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಬಗ್ಗೆ ಮತ್ತು 2018 ರ ಜನವರಿಯಿಂದ ಪರಾರಿಯಾಗಿರುವ ಬಗ್ಗೆ ಇಡಿ ಮತ್ತು ಸಿಬಿಐ ಪರವಾಗಿ ಡೊಮಿನಿಕಾದ ಸರ್ಕಾರಿ ವಕೀಲರು ವಾದ ಮಾಡಲಿದ್ದಾರೆ ಎನ್ನಲಾಗಿದೆ. (ಏಜೆನ್ಸಿಸ್)