ಕಾಂಗ್ರೆಸ್​ನವರು ಬೈಯೋದು ಬೇಡ, ಬಿಜೆಪಿಯವರು ಬೊಬ್ಬೆ ಹೊಡೆಯೋದು ಬೇಡ: ಸಿಎಂ ಸಿದ್ದುಗೆ ಪ್ರತಾಪ್ ಸಿಂಹ ಸಲಹೆ​

Siddaramaiah and Prathap Simha
Published on

ಮೈಸೂರು: ಬಿಜೆಪಿಯವರು ಸಾಲಮಾಡಿ ಹೋದರು ಅಂತ ನೀವು ಬೈಯುವುದು, ಕಾಂಗ್ರೆಸ್ ಲೂಟಿ ಮಾಡಿದರು ಅಂತ ಬಿಜೆಪಿಯವರು ಬೊಬ್ಬೆ ಹೊಡೆಯುವುದು ಬೇಡ ಎನ್ನುವ ಮೂಲಕ ನೂತನ ಕಾಂಗ್ರೆಸ್​ ಸರ್ಕಾರಕ್ಕೆ ಸಂಸದ ಪ್ರತಾಪ್​ ಸಿಂಹ ಸಲಹೆಯೊಂದನ್ನು ನೀಡಿದ್ದಾರೆ.

ನಿನ್ನೆ (ಮೇ 20) ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಸಂಪುಟ ನಡಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರ ಸಾಕಷ್ಟು ಸಾಲ ಮಾಡಿ ಹೋಗಿದೆ ಎಂದು ಹೇಳಿದರು.

ಸಾಲದ ಅಂದಾಜೂ 2028ರಲ್ಲಿ ಸಿಗುತ್ತದೆ

ಈ ಹೇಳಿಕೆಗೆ ಸಂಸದ ಪ್ರತಾಪ್​ ಸಿಂಹ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಒಟ್ಟಾರೆ ಸಾಲದ ಜೊತೆ 3 ವರ್ಷ 10 ತಿಂಗಳ ಬಿಜೆಪಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಸಾಲದ ಹೊರೆಯನ್ನೂ ಈಗಲೇ ಬಹಿರಂಗಪಡಿಸಿ, ಮುಂದೆ ನೀವು ಮಾಡಲಿರುವ ಸಾಲದ ಅಂದಾಜೂ 2028ರಲ್ಲಿ ಸಿಗುತ್ತದೆ ಎಂದಿದ್ದಾರೆ.

ಸರಣಿ ಪ್ರಶ್ನೆಗಳು 

ಇದರೊಂದಿಗೆ ಕಾಂಗ್ರೆಸ್​ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿರುವ ಕಾಂಗ್ರೆಸ್​ಗೆ ಪ್ರತಾಪ್​ ಸಿಂಹ ಸರಣಿ ಪ್ರಶ್ನೆಗಳನ್ನು ಸಹ ಕೇಳಿದ್ದಾರೆ. ರಾಜ್ಯದ ಈ ವರ್ಷದ ಬಜೆಟ್ ಗಾತ್ರವೆಷ್ಟು? ಈ ದಿನದವರೆಗಿನ ನಮ್ಮ ಒಟ್ಟು ಸಾಲ ಎಷ್ಟಿದೆ? ವಾರ್ಷಿಕ ಬಡ್ಡಿ ಮತ್ತು ಅಸಲು ಮರುಪಾವತಿಗೆ ಎಷ್ಟು ಬೇಕು? ಸರ್ಕಾರಿ ಉದ್ಯೋಗಿಗಳ ಸಂಬಳಕ್ಕೆ ಎಷ್ಟು ಸಾವಿರ ಕೋಟಿ ಬೇಕು? ಸರ್ಕಾರಿ ಯೋಜನೆಗಳ ಮುಂದುವರಿಕೆಗೆ ಎಷ್ಟು ಬೇಕು?

2028ರಲ್ಲಿ ಮತ್ತೆ ಚುನಾವಣೆ ಬಂದಾಗ ರಾಜ್ಯದ ಅರ್ಥವ್ಯವಸ್ಥೆಯ ಆರೋಗ್ಯ ಹೇಗಿರುತ್ತೆ ಎಂಬುದರ ಅಂದಾಜು ಸಿಗಲಿ ಎಂಬ ಕಾರಣಕ್ಕೆ ಈ ಪ್ರಶ್ನೆಗಳನ್ನು ಕೇಳಿದ್ದೇನೆ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net