More

    ಅತ್ತೆ-ಮಾವ ಸುಪರ್ದಿಗೆ ಬಾಲಕ: ತಂದೆ ವಶಕ್ಕೆ ನೀಡಿದ್ದ ಕೌಟುಂಬಿಕ ಕೋರ್ಟ್, ಆದೇಶ ರದ್ದು ಮಾಡಿದ ಹೈಕೋರ್ಟ್

    | ಜಗನ್ ರಮೇಶ್ ಬೆಂಗಳೂರು

    ಹುಟ್ಟಿದ ಮೂರೇ ದಿನಕ್ಕೆ ತಾಯಿಯನ್ನು ಕಳೆದುಕೊಂಡಿದ್ದ ಮಗು ಸೋದರ ಮಾವನ (ತಾಯಿಯ ಅಣ್ಣ) ಆರೈಕೆಯಲ್ಲಿ ಬೆಳೆದಿತ್ತು. 7 ವರ್ಷಗಳ ಬಳಿಕ ಮಗುವಿನ ಸುಪರ್ದಿಗೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ್ದ ಕೌಟುಂಬಿಕ ನ್ಯಾಯಾಲಯ, ಅಪ್ರಾಪ್ತ ಬಾಲಕನನ್ನು ತಂದೆಯ ವಶಕ್ಕೆ ನೀಡಿತ್ತು. ಇದೀಗ, ಈ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಮಗುವಿನ ಶೈಕ್ಷಣಿಕ ಹಾಗೂ ಮಾನಸಿಕ ಬೆಳವಣಿಗೆ ದೃಷ್ಟಿಯಿಂದ ಮತ್ತೆ ಅತ್ತೆ-ಮಾವನ ವಶಕ್ಕೆ ಒಪ್ಪಿಸಿ ಆದೇಶಿಸಿದೆ. ಹುಟ್ಟಿದಾಗಿನಿಂದ ಪೋಷಿಸಿ, ಬೆಳೆಸಿದ್ದ ಮಗುವನ್ನು ತಂದೆಯ ಸುಪರ್ದಿಗೆ ವಹಿಸಿದ್ದ ಕೌಟುಂಬಿಕ ನ್ಯಾಯಾಲಯದ ಕ್ರಮ ಪ್ರಶ್ನಿಸಿ ದಾವಣಗೆರೆಯ ದಂಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಜನನ ಪ್ರಮಾಣಪತ್ರದಲ್ಲಿ ಹೆಸರು ಬದಲು: 1994ರಲ್ಲಿ ವಿವಾಹವಾಗಿದ್ದ ದಂಪತಿಗೆ 2003ರಲ್ಲಿ ಮೊದಲ ಮಗ ಜನಿಸಿದ್ದ. 2008ರಲ್ಲಿ 2ನೇ ಮಗುವಿನ ಹೆರಿಗೆಯ ವೇಳೆ ತಾಯಿ ಮೃತಪಟ್ಟಿದ್ದರು. 3 ದಿನದ ಗಂಡು ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದ ಕಾರಣಕ್ಕೆ ಮೃತಳ ಅಣ್ಣ -ಅತ್ತಿಗೆ ಸುಪರ್ದಿಗೆ ನೀಡಲಾಗಿತ್ತು. ಶಿವಮೊಗ್ಗದ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದ ತಂದೆ ಆಗಾಗ ದಾವಣಗೆರೆಗೆ ಬಂದು ಮಗನನ್ನು ಭೇಟಿಯಾಗಿ ಹೋಗುತ್ತಿದ್ದರು. ಕೆಲ ವರ್ಷಗಳ ಬಳಿಕ ಮಗುವನ್ನು ಶಾಲೆಗೂ ಸೇರಿಸಲಾಗಿತ್ತು. ಶಾಲೆಯಲ್ಲಿ ವಿಚಾರಿಸಿದ್ದ ತಂದೆಗೆ ಮಗನ ಜನನ ಪ್ರಮಾಣಪತ್ರದಲ್ಲಿ ತಂದೆ-ತಾಯಿ ಹೆಸರಿನ ಜಾಗದಲ್ಲಿ ಅತ್ತೆ-ಮಾವನ ಹೆಸರಿರುವುದು ತಿಳಿದಿತ್ತು. ಇದನ್ನು ಆಕ್ಷೇಪಿಸಿದ್ದ ತಂದೆ, ಮಗುವನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಮಾನ್ಯ ಮಾಡಿದ್ದ ನ್ಯಾಯಾಲಯ, ಮಗನನ್ನು ತಂದೆಯ ವಶಕ್ಕೆ ನೀಡಿ 2016ರ ಜು.26ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅತ್ತೆ-ಮಾವ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ: ಸದ್ಯ ಬಾಲಕನಿಗೆ 15 ವರ್ಷವಾಗಿದ್ದು, 9ನೇ ತರಗತಿಯಲ್ಲಿದ್ದಾನೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಬಾಲಕನನ್ನು ತಂದೆ ವಶಕ್ಕೆ ನೀಡುವುದು ಸಮಂಜಸವಲ್ಲ. ಒಂದು ವೇಳೆ ತಂದೆಯ ವಶಕ್ಕೆ ಮಗನನ್ನು ನೀಡಿದರೆ, ಕೂಡು ಕುಟುಂಬದ ವಾತಾವರಣದಲ್ಲಿ ಬೆಳೆದಿರುವ ಆತನ ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ಈ ಅಂಶವನ್ನು ಕೌಟುಂಬಿಕ ನ್ಯಾಯಾಲಯವೂ ತನ್ನ ಆದೇಶದಲ್ಲಿ ದಾಖಲಿಸಿದೆ. ಕೇವಲ ಜನನ ಪ್ರಮಾಣಪತ್ರದ ವಿಚಾರ ಹಾಗೂ ತಂದೆಯೇ ಅದರ ಸ್ವಾಭಾವಿಕ ಪಾಲಕ ಎಂಬ ಅಂಶವನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಮಗುವಿನ ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯ ವಿಚಾರವನ್ನು ಕೌಟುಂಬಿಕ ಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ಜನನ ಪ್ರಮಾಣಪತ್ರದಲ್ಲಿ ತಂದೆ-ತಾಯಿ ಹೆಸರಿನ ಜಾಗದಲ್ಲಿ ಅತ್ತೆ-ಮಾವನ ಹೆಸರು ಸೇರಿಸಲಾಗಿದೆ ಎನ್ನುವುದು ಪ್ರತಿವಾದಿ ತಂದೆಯ ವಾದವಾಗಿದೆ. ಆದರೆ, ಮಗುವನ್ನು ಶಾಲೆಗೆ ಸೇರಿಸುವ ಏಕೈಕ ಕಾರಣಕ್ಕೆ ಈ ರೀತಿ ಮಾಡಲಾಗಿದ್ದು, ಬೇರಾವುದೇ ಉದ್ದೇಶವಿರಲಿಲ್ಲ. ಬರ್ತ್ ಸರ್ಟಿಫಿಕೇಟ್​ನಲ್ಲಿ ಮತ್ತೆ ತಂದೆಯ ಹೆಸರನ್ನು ಸೇರಿಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೇಲ್ಮನವಿದಾರರು ತಿಳಿಸಿದ್ದಾರೆ. 7 ವರ್ಷಗಳ ಬಳಿಕ ಮಗುವಿನ ಸುಪರ್ದಿಗೆ ಕೋರಿ ತಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗ, ಹುಟ್ಟಿದಾಗಿನಿಂದಲೂ ಬೆಳೆದು ಬಂದಿರುವ ಸಾಮಾಜಿಕ ಪರಿಸರದಿಂದ ಮಗುವನ್ನು ಕದಲಿಸುವುದಕ್ಕೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದಿರುವ ಹೈಕೋರ್ಟ್, ಮಗುವನ್ನು ತಂದೆಯ ಸುಪರ್ದಿಗೆ ವಹಿಸಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.

    ತಂದೆಗೆ ಭೇಟಿಯ ಹಕ್ಕು: ಮೇಲ್ಮನವಿ ವಿಚಾರಣೆ ವೇಳೆ, ಬಾಲಕನನ್ನು ಛೇಂಬರ್​ಗೆ ಕರೆಸಿ ವಿಚಾರಿಸಿದಾಗ, ಅತ್ತೆ-ಮಾವನ ಆರೈಕೆಯ ಬಗ್ಗೆ ಯಾವುದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿಲ್ಲ. ಸದ್ಯ ಈಗ ಓದುತ್ತಿರುವ ಶಾಲೆಯಲ್ಲೇ ಓದು ಮುಂದುವರಿಸಲು ಬಯಸಿರುವುದಾಗಿ ತಿಳಿಸಿದ್ದಾನೆ. ಜತೆಗೆ, ರಜಾ ದಿನಗಳಂದು ತಂದೆ ಭೇಟಿಯಾಗಲು ಯಾವುದೇ ಅಡ್ಡಿ ಇಲ್ಲ ಎಂದೂ ಹೇಳಿದ್ದಾನೆ. ಆದ್ದರಿಂದ, ಬಾಲಕನ ಶಾಲಾ ಅವಧಿ ಬಳಿಕ ಆತನನ್ನು ತಂದೆ ಭೇಟಿಯಾಗಬಹುದು. ದಸರಾ, ಚಳಿಗಾಲ ಹಾಗೂ ಬೇಸಿಗೆ ರಜೆ ಸಂದರ್ಭದಲ್ಲಿ 1 ವಾರದ ಅವಧಿಗೆ ಹೊರಗಡೆ ಕರೆದೊಯ್ಯಬಹುದು. ಪ್ರತಿ ಸೋಮವಾರ, ಗುರುವಾರ ಸಂಜೆ 6ರಿಂದ 7 ಗಂಟೆಯ ಒಳಗೆ ವಿಡಿಯೋ ಕರೆ ಮಾಡಿ ಮಗನೊಂದಿಗೆ ಮಾತನಾಡಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

    ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್​ ಅಹಮದ್​!

    ‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts