

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾತ್ರವಲ್ಲ, ಇವರೊಂದಿಗೆ 8 ಶಾಸಕರೂ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆ ಪೈಕಿ ಒಬ್ಬರಾಗಿರುವ ಜಮೀರ್ ಅಹಮದ್ ಖಾನ್ ಇಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನೂತನ ಸರ್ಕಾರದ ಸಂಪುಟದಲ್ಲಿ ಸೇರಿಕೊಳ್ಳುವ ಮೂಲಕ ಜಮೀರ್ ಅಹಮದ್ ಖಾನ್ ಮತ್ತೊಮ್ಮೆ ಸಚಿವರಾಗುವ ಅವಕಾಶ ಪಡೆದುಕೊಂಡಿದ್ದಾರೆ. ಅದಾಗ್ಯೂ ಹಳೇ ತಪ್ಪನ್ನು ಮತ್ತೊಮ್ಮೆ ಮಾಡಿ ಕನ್ನಡಿಗರ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಇಂದು ಅವರು ಪ್ರಮಾಣವಚನವನ್ನು ಇಂಗ್ಲಿಷ್ನಲ್ಲಿ ಸ್ವೀಕರಿಸಿದ್ದೇ ಇಷ್ಟಕ್ಕೆಲ್ಲ ಕಾರಣ.
ಹಾಗಂತ ಅವರು ಈ ತಪ್ಪು ಮಾಡಿದ್ದು ಇದೇ ಮೊದಲಲ್ಲ. ಅವರು ಮೊದಲ ಸಲ ಶಾಸಕರಾಗಿ, ಸಚಿವರಾಗಿದ್ದಲೂ ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಆಗ ವಾಟಾಳ್ ನಾಗರಾಜ್, ಶ್ರೀರಾಮರೆಡ್ಡಿ ಸೇರಿದಂತೆ ಕನ್ನಡಪರ ಸಂಘಟನೆಗಳವರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೊನೆಗೆ ಸದನದಲ್ಲೇ ಕ್ಷಮೆ ಯಾಚಿಸಿದ್ದರು. ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದೆ ತಪ್ಪು ಮಾಡಿದೆ, ಕ್ಷಮಿಸಿ ಎಂದು ಕೈಮುಗಿದು ಕೇಳಿಕೊಂಡಿದ್ದರು.
2005ರ ಈ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣ ಗೌಡ ಇಂದು ಸ್ಮರಿಸಿಕೊಂಡು, ಜಮೀರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಜಮೀರ್ ಅಹಮದ್ ಖಾನ್ ಮೊದಲ ಸಲ ಶಾಸಕರಾಗಿ ಸಚಿವರಾಗಿದ್ದಾಗಲೂ ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಅಂದು ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ಜಮೀರ್ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?" ಎಂದು ನಾರಾಯಣ ಗೌಡ ಪ್ರಶ್ನೆ ಮಾಡಿದ್ದಾರೆ.