ಬೆಂಗಳೂರು: ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ ಸೃಜಿಸಬೇಕೆಂಬ ಆಗ್ರಹ ಕೇಳಿ ಬರುತ್ತಿರುವ ನಡುವೆಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಆಗ್ರಹ ಕೇಳಿ ಬಂದಿದೆ. ಅದು ಕೂಡ ಸಿಎಂ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಎಂಬುದು ಗಮನಾರ್ಹ ಸಂಗತಿ.
ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಡಿ.ಕೆ. ಶಿವಕುಮಾರ್ಗೆ ಒಂದು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಇದು ಹಸೊ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ: ಸೆಮಿಫೈನಲ್ನಲ್ಲಿ ಅಫ್ಘನ್ ಸೋಲಲು ಭಾರತವೇ ಕಾರಣ; ಗಂಭೀರ ಆರೋಪ ಮಾಡಿದ ಮಾಜಿ ಕ್ರಿಕೆಟಿಗ
ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಸಿದ್ದರಾಮಯ್ಯ ಅವರಿಂದ ಸಾಧ್ಯವಿದೆ. ಈಗಾಗಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಅನುಭವ ಹೊಂದಿದ್ದಾರೆ. ನಮ್ಮ ಸಮುದಾಯದ ಡಿ.ಕೆ ಶಿವಕುಮಾರ್ ಅವರಿಗೆ ಮುಂದೆ ಅವಕಾಶ ಮಾಡಿಕೊಡಲಿ. ಹೀಗಾಗಿ ಸಿದ್ದರಾಮಯ್ಯನವರು ಮುಂದೆ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.
ಬೆಂಗಳೂರನ್ನ ವಿಭಾಗ ಮಾಡುವುದು ಬೇಡ. ಉತ್ತರ ಕರ್ನಾಟಕ ಬೇರೆ ದಕ್ಷಿಣ ಕರ್ನಾಟಕ ಬೇರೆ ಅಂತ ಡಿವೈಡ್ ಮಾಡಿದರೆ ಅಭಿವೃದ್ಧಿ ಆಗಲ್ಲ ಹಾಗೆಯೆ ಬೆಂಗಳೂರು ವಿಭಾಗ ಮಾಡುವುದು ಬೇಡ ಎಂದು ಚಂದ್ರಶೇಖರನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ. ಇದಕ್ಕೆ ವೇದಿಕೆಯಲ್ಲೇ ಉತ್ತರಿಸಿದ ಸಿದ್ದರಾಮಯ್ಯ ಸಿಎಂ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.