ಸೆಮಿಫೈನಲ್​ನಲ್ಲಿ ಅಫ್ಘನ್​ ಸೋಲಲು ಭಾರತವೇ ಕಾರಣ; ಗಂಭೀರ ಆರೋಪ ಮಾಡಿದ ಮಾಜಿ ಕ್ರಿಕೆಟಿಗ

Afghanistan
Published on

ಟ್ರನಿಡಾಡ್​: ಇಲ್ಲಿನ ಬ್ರಯನ್​ ಲಾರಾ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಸಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ಎದುರು ಸೋಲುಂಡಿದ್ದು, ಮೊದಲ ಬಾರಿಗೆ ಫೈನಲ್​ ಪ್ರವೇಶಿಸುವ ಆಸೆ ಭಗ್ನಗೊಂಡಿದೆ. ವಿಶ್ವಕ್ರಿಕೆಟ್​ನಲ್ಲಿ ಚೋಕರ್ಸ್​ ಎಂಬ ಹಣೆಪಟ್ಟಿಯನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದೆ.

ಇನ್ನೂ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ಸೋಲಲು ಭಾರತ ಕಾರಣ ಎಂದು ಮಾಜಿ ಕ್ರಿಕೆಟಿಗರೊಬ್ಬರು ಆರೋಪಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಸೋಲಲು ವೇಳಾಪಟ್ಟಿಯೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಅಫ್ಘಾನಿಸ್ತಾನ ಸೋಲಲು ಭಾರತ ಕಾರಣ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಇಂಗ್ಲೆಂಡ್​ ತಂಡದ ಮಾಜಿ ಆಟಗಾರ ಮೈಕೆಲ್​ ವಾನ್​, ಬಾಂಗ್ಲಾದೇಶದ ವಿರುದ್ಧ ಸೂಪರ್-8 ಪಂದ್ಯದಲ್ಲಿ ಗೆದ್ದ ಅಫ್ಘಾನಿಸ್ತಾನ್ ತಂಡಕ್ಕೆ ಕೇವಲ ಒಂದು ದಿನದ ಸಮಯವಕಾಶ ನೀಡಲಾಗಿದೆ. ಜೂನ್ 25 ರಂದು ಪಂದ್ಯ ಮುಗಿಸಿ ಜೂನ್ 26 ರಂದು ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ ಆಡಲು ಟ್ರಿನಿಡಾಡ್​ಗೆ ಬಂದಿಳಿದಿದೆ. ಇದರಿಂದ ಅಫ್ಘಾನ್ ತಂಡಕ್ಕೆ ಅಭ್ಯಾಸ ಮಾಡಲು ಸಮಯ ಸಿಕ್ಕಿಲ್ಲ. ನನ್ನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಮೊದಲು ನಡೆಯಬೇಕಿತ್ತು. ಆದರೆ ಭಾರತ ತಂಡಕ್ಕೆ ಅನುಕೂಲವಾಗುವಂತೆ 2ನೇ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾವನ್ನು ಇರಿಸಲಾಗಿದೆ. ಇದು ಪಕ್ಷಪಾತ ಧೋರಣೆ, ಇದರಿಂದ ಇತರೆ ತಂಡಗಳಿಗೆ ಅನ್ಯಾಯವಾಗಿದೆ.

ಇಲ್ಲಿ ಭಾರತ ತಂಡಕ್ಕೆ ಅನುಕೂಲವಾಗುವಂತೆ ಸೆಮಿಫೈನಲ್ ವೇಳಾಪಟ್ಟಿಯನ್ನು ಮೊದಲೇ ನಿರ್ಧರಿಸಲಾಗಿದ್ದು, ಇದರಿಂದ ಉಳಿದ ತಂಡಗಳಿಗೆ ಅನ್ಯಾಯವಾಗಿರುವುದು ಸ್ಪಷ್ಟ. ಅದರಲ್ಲೂ ಇದೇ ಮೊದಲ ಬಾರಿಗೆ ಸೆಮಿಫೈನಲ್​ಗೆ ಪ್ರವೇಶಿಸಿದ್ದ ಅಫ್ಘಾನಿಸ್ತಾನ್ ತಂಡವನ್ನು ಸೂಪರ್-8 ಪಂದ್ಯದ ಮುಕ್ತಾಯದ ಬೆನ್ನಲ್ಲೇ ಸೆಮಿಫೈನಲ್ ಆಡಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ಅಫ್ಘಾನಿಸ್ತಾನ ತಂಡದ ಕೊನೆಯ ಪಂದ್ಯಕ್ಕೂ ಮುನ್ನವೇ ಸೂಪರ್-8 ಪಂದ್ಯಗಳನ್ನು ಮುಗಿಸಿತ್ತು. ಹೀಗಾಗಿ ಮೊದಲ ಸೆಮಿಫೈನಲ್ ಪಂದ್ಯವು ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ನಡೆಯಬೇಕಿತ್ತು. ಆದರೆ ಭಾರತದ ಪರ ಪಕ್ಷಪಾತ ಮಾಡಿರುವ ಕಾರಣ ಅಫ್ಘಾನಿಸ್ತಾನ ತಂಡಕ್ಕೆ ಅನ್ಯಾಯವಾಗಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net