ಭಾರತದ ಸಹಾಯದಿಂದಾಗಿ ಅಫ್ಘನ್​ ಸೆಮಿಫೈನಲ್​ ಪ್ರವೇಶಿಸಿದೆ; ನಾವು ಇದನ್ನು ಮರೆಯುವುದಿಲ್ಲ ಎಂದ ತಾಲಿಬಾನ್​ ಆಡಳಿತ

Suhail Shaheen
Published on

ಕಾಬುಲ್​: ಟಿ20 ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಅಫ್ಘಾನಿಸ್ತಾನ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ತಾಲಿಬಾನ್​ ಆಡಳಿತವೇ ಖುದ್ದು ಕರೆ ಮಾಡಿ ಅಭಿನಂದಿಸಿದೆ. ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಈ ಸಾಧನೆಯಲ್ಲಿ ಭಾರತ ಬಹುಮುಖ್ಯ ಪಾತ್ರ ವಹಿಸಿದ್ದು, ಈ ಬಗ್ಗೆ ತಾಲಿಬಾನ್​ ಆಡಳಿತ ಧನ್ಯವಾದಗಳನ್ನು ತಿಳಿಸಿದೆ.

ಈ ಕುರಿತು ಮಾತನಾಡಿರುವ ತಾಲಿಬಾನ್​ ಸರ್ಕಾರದ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ಸುಹೇಲ್​ ಶಹೀನ್, ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಬೆಳವಣಿಗೆಯಲ್ಲಿ ನಿರಂತರವಾಗಿ ಬೆಂಬಲಿಸಿರುವ ಭಾರತ ಹಾಗೂ ಬಿಸಿಸಿಐಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಭಾರತದ ಈ ಸಹಾಕರವನ್ನು ನಾವು ಪ್ರಶಂಸಿಸುತ್ತೇವೆ.

ಭಾರತ ಸರ್ಕಾರವು ಕಂದಹಾರ್ನಲ್ಲಿ 1 ಮಿಲಿಯನ್​ ಡಾಲರ್​ ಮೌಲ್ಯದ ಕ್ರಿಕೆಟ್​ ಸ್ಟೇಡಿಯಂಅನ್ನು ನಿರ್ಮಿಸಲು ನಮಗೆ ಸಹಾಯ ಮಾಡಿದೆ. ಭಾರತ ಮಾಡಿರುವ ಈ ಸಹಾಯವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ತಾಲಿಬಾನ್​ ಸರ್ಕಾರದ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ಸುಹೇಲ್​ ಶಹೀನ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಭರ್ಜರಿ ಪ್ರದರ್ಶನದ ಹಿಂದೆ ಬಿಸಿಸಿಐನ ಕೊಡುಗೆ ಅಪಾರ ಎಂದು ಹೇಳಬಹುದಾಗಿದೆ. 2015ರಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಬಿಸಿಸಿಐ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಗ್ರೇಟರ್​ ನೋಯ್ಡಾ, ಡೆಹ್ರಾಡೂನ್​ ಹಾಗೂ ಲಖನೌನಲ್ಲಿರುವ ಕ್ರೀಡಾಂಗಣವನ್ನು ಅಫ್ಘಾನಿಸ್ತಾನ ತಂಡವು ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ.

ಅಮೆರಿಕದ ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವಿಶ್ವಕಪ್​ಗೆ ವಿದಾಯ ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net