ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿ ತೀವ್ರ ಗದ್ದಲ ಎಬ್ಬಿಸಿರುವ ಹೈದರಾಬಾದ್ ಕ್ಷೇತ್ರದ ಸಂಸದ, ಎಐಎಂಎಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡೆಗೆ ಆಡಳಿತ ಪಕ್ಷದ ಸದಸ್ಯರು ಕಿಡಿಕಾರಿದ್ದರು. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಆಡಳಿತ ಪಕ್ಷದವರ ಬೆದರಿಕೆಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಓವೈಸಿ, ಪ್ರಮಾಣವಚನ ಸ್ವೀಕರಿಸಿದ ಸದಸ್ಯರು ಘೋಷಣೆಗಳನ್ನು ಕೂಗಿದ ಹಾಗೆ ನಾನು ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಎಂದು ಹೇಳಿದೆ. ಅದರಲ್ಲಿ ತಪ್ಪೇನಿದೆ. ತುಳಿತಕ್ಕೆ ಒಳಗಾದ ಜನರ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಆಡಳಿತ ಪಕ್ಷದ ಸದಸ್ಯರು ಇದನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ಇದನ್ನೂ ಓದಿ: ಇಂಡಿಯನ್-2 ಬಜೆಟ್ ಮೀರಲು ಇದೊಂದೆ ಕಾರಣ; ಕಮಲ್ ಹಾಸನ್ ಬಿಚ್ಚಿಟ್ರು ಅಸಲಿ ಸತ್ಯ
ಆಡಳಿತ ಪಕ್ಷದವರ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನನಗೂ ಸಂವಿಧಾನದ ಬಗ್ಗೆ ಸ್ವಲ್ಪ ತಿಳಿದಿದೆ, ನಾನು ಈ ಬಗ್ಗೆ ಮಾತನಾಡುತ್ತೇನೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವವನಲ್ಲಾ ಎಂದು ಅಸಾದುದ್ದೀನ್ ಓವೈಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿಯ ಹಿರಿಯ ಸಂಸದರೊಬ್ಬರು ಓವೈಸಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಗೃಹ ಸಚಿವರು ಹಾಗೂ ಸ್ಪೀಕರ್ ಕಚೇರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರನ್ನು ಅನರ್ಹಗೊಳಿಸುವಂತೆ ಆಗ್ರಹಿಸಲಾಗಿದೆ. ಬೇರೆ ದೇಶಕ್ಕೆ ಬದ್ಧತೆ ತೋರಿದ ಕಾರಣಕ್ಕೆ ಅವರನ್ನು ಅನರ್ಹಗೊಳಿಸಬಹುದುಎ ಎಂದು ಬಿಜೆಪಿಯ ಹಿರಿಯ ಸಂಸದರೊಬ್ಬರು ತಿಳಿಸಿದ್ದಾರೆ.