ಯೋಗ ಕ್ಷೇಮ | ಜೈನ ದರ್ಶನದಲ್ಲಿ ಯೋಗಯೋಗ್ಯನಾದವನ ಲಕ್ಷಣಗಳು

Sun
Published on

ಧರ್ಮ ಅರ್ಥ ಕಾಮ ಮೋಕ್ಷದ ಪುರುಷಾರ್ಥ ಸಾಧನೆಗೆ ಯೋಗಶಾಸ್ತ್ರವು ಮುಖ್ಯ ಸಾಧನವಾದುದು. ಈ ಯೋಗದರ್ಶನ ಸಕಲ ಶಾಸ್ತ್ರಾದಿಗಳಿಗಿಂತಲೂ ಶ್ರೇಷ್ಠವೆಂದು ಪುರಾಣೇತಿಹಾಸಗಳು ಸಾರುತ್ತಿವೆ. ದೈಹಿಕದಾರ್ಢ್ಯ, ಚಿತ್ತಶಾಂತಿ ಮತ್ತು ಆಧ್ಯಾತ್ಮ ಸಾಧನೆಯ ಸಾಧನವಾದ ‘ಯೋಗ’ ಜಗತ್ತಿಗೆ ಭಾರತೀಯರು ನೀಡಿದ ವಿಶಿಷ್ಟ ಕೊಡುಗೆಯಾಗಿದೆ.

ಯೋಗಶಾಸ್ತ್ರವು ಅನಾಗತ ದುಃಖಗಳ ನಿವಾರಣೆಗಾಗಿಯೇ ಹುಟ್ಟಿಕೊಂಡಿದೆ. ಈ ವಿಷಯವನ್ನು ‘ಹೇಯಂ ದುಃಖಮನಾಗತಮ್ ಎಂದು ಸೂತ್ರೀಕರಿಸಿ ಹೇಳಲಾಗಿದೆ. ಅಲ್ಲದೆ ಈ ಅನಾಗತ ದುಃಖವು ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಮತ್ತು ಸಮ್ಯಕ್ ದರ್ಶನದಿಂದ ನಿವಾರಣೆಯಾಗುವುದಾಗಿ ‘ಯೋಗಾಂಗಾನುಷ್ಠಾನಾದಶುದ್ದಿಕ್ಷಯೇ ಜ್ಞಾನದೀಪ್ತಿರಾವಿವೇಕಖ್ಯಾತೇಃ’ ಎಂದು ಯೋಗದರ್ಶನದಲ್ಲಿ ಹೇಳಿದೆ. ಯೋಗಾಂಗಗಳನ್ನು ಅನುಷ್ಠಾನ ಮಾಡಿದರೆ ಜ್ಞಾನದೀಪ್ತಿ, ವಿವೇಕೋದಯಗಳು ಅಭಿವೃದ್ಧಿಯಾಗುತ್ತವೆ. ಪ್ರಕಾಶಮಾನವಾಗುತ್ತವೆ. ಈ ಯೋಗಶಾಸ್ತ್ರವನ್ನು ಹಿಂದು, ಜೈನ, ಬೌದ್ಧರು ಮಾನ್ಯಮಾಡಿದ್ದಾರೆ. ಆಯಾಯ ಧರ್ಮ, ಮತ, ಪಂಥದ ಅನುಷ್ಠಾನದ ಅನುಗುಣವಾಗಿ ಕೆಲವು ಮಾರ್ಪಾಡುಗಳು ಅಲ್ಲಲ್ಲಿ ಆಗಿವೆ. ರಾಜಯೋಗ, ಹಠಯೋಗ, ಜ್ಞಾನಯೋಗ, ಕರ್ಮಯೋಗ, ಭಕ್ತಿ ಯೋಗ, ಮಂತ್ರಯೋಗ, ಲಯ ಯೋಗ ಮುಂತಾದ ಪ್ರಭೇದಗಳಿವೆ.ಜೈನದರ್ಶನದಲ್ಲಿ ಇಚ್ಚಾಯೋಗ, ಶಾಸ್ತ್ರಯೋಗ, ಸಾಮರ್ಥ್ಯಯೋಗ ಎಂಬ ಮೂರು ಭೇದಗಳನ್ನು ಗುರ್ತಿಸಬಹುದಾಗಿದೆ.

ಜೈನದರ್ಶನದ ಪ್ರಕಾರ ಯೋಗಶಾಸ್ತ್ರದ ನಿರ್ವತೃ ವೃಷಭ ತೀರ್ಥಂಕರರ ಮೊಮ್ಮಗನಾದ ಮರೀಚಿ. ಪೂರ್ವಪುರಾಣದ ಪ್ರಕಾರ ‘ಸ್ವಾಮಿಯ ಮೊಮ್ಮಗನಾದ ಮರೀಚಿ ಕುಮಾರನು ಸಂನ್ಯಾಸಿಯಾಗಿ ಮಿಥ್ಯಾಶಾಸ್ತ್ರದ ಉಪದೇಶಗಳಿಂದ ಮಿಥ್ಯಾತ್ವವನ್ನು ಉಪದೇಶಿಸಿದನು. ಮೊಟ್ಟ ಮೊದಲು ಈ ಮರೀಚಿಕುಮಾರನು ಯೋಗಶಾಸ್ತ್ರವನ್ನೂ, ಸಂಖ್ಯಾಶಾಸ್ತ್ರವನ್ನೂ ನಿರ್ಮಾಣ ಮಾಡಿದನು. ಆ ಮಿಥ್ಯಾಶಾಸ್ತ್ರಗಳಿಂದ ಮೋಹಿತವಾದ ಲೋಕವು ಸಮ್ಯಕ್ ಜ್ಞಾನದಿಂದ ವಿಮುಖವಾಯಿತು.’ ಇಲ್ಲಿ ಅವರು ಅಪಸಿದ್ಧಾಂತದ ಬಗ್ಗೆ ಹೊಂದಿರುವ ನಿರಸನ ಭಾವ ತಿಳಿಯುತ್ತದೆ. ಪತಂಜಲಿ ನಿರೂಪಿತ ಅಷ್ಟಾಂಗಯೋಗದಲ್ಲಿ ಪ್ರಾಣಾಯಾಮಗಳನ್ನು ಧ್ಯಾನದ ಸಿದ್ಧಿಯಲ್ಲಿ ಬಾಧಕವೆಂದು ಭಾವಿಸಿದ್ದಾರೆ.

ಜೈನ ದರ್ಶನಾನುಗುಣವಾಗಿ ದಿಗಂಬರ ಮತ್ತು ಶ್ವೇತಾಂಬರ ಸಂಪ್ರದಾಯಗಳೆರಡರಲ್ಲಿಯೂ ಯೋಗ ನಿರೂಪಣೆ ನಡೆದಿದೆ. ಪ್ರಾಕೃತ ಮೋಕ್ಷ ಪಾಹುಡ (ಕುಂದ ಕುಂದ), ಭಾರಸ ಅಣುವೆಕ್ಖಾ, ಕತ್ತಿಗೆ ಯಾಣು ವೆಕ್ಖಾ, ಯೋಗ ಶತಕಗಳು ಅಪಭ್ರಂಶದಲ್ಲಿ ಪರಮಾತ್ಮ ಪ್ರಕಾಶ (ಯೋಗೀಂದ್ರ), ಪಾಹುಡದೋಹ (ರಾಮಸಿಂಹ) ಸಂಸ್ಕೃತದಲ್ಲಿ ಇಷ್ಟೋಪದೇಶ ಮತ್ತು ಸಮಾಧಿಶತಕ (ಪೂಜ್ಯಪಾದಗಳಲ್ಲದೆ) ತತ್ತಾ್ವರ್ಥಸೂತ್ರ (ಉಮಾಸ್ತಾತಿ), ಆತ್ಮಾನುಶಾಸನ (ಗುಣಭದ್ರ)ದ ಕೆಲವು ಭಾಗಗಳು ಜೈನದರ್ಶನ ಪ್ರಸ್ತಾಪ ಮಾಡಿದೆ. ಕನ್ನಡದಲ್ಲಿ ‘ಯೋಗ ರತ್ನಾಕರ’ (ಶಾಂತರಸ) ಯೋಗಾಮೃತ ಎನ್ನುವ ಕೃತಿಗಳಿವೆ.

ಯೋಗರತ್ನಾಕರದ ಕರ್ತೃ ಶಾಂತರಸ. ಇವನು ಜೈನಕವಿ. ಕಂದಪದ್ಯಗಳಲ್ಲಿ ಕೃತಿಯನ್ನು ರಚಿಸಿದ್ದಾನೆ. ‘ಯೋಗರತ್ನಾಕರ’ ಎಂಟು ಯೋಗಾಂಗಗಳ ವಿವರಗಳನ್ನೊಳಗೊಂಡಿದೆ. ಕೃತಿಬಂಧ ಮತ್ತು ಭಾಷಾಸ್ವರೂಪ, ಶಾಂತರಸನು ಪತಂಜಲಿಯ ಯಮಾದಿ ಅಷ್ಟಾಂಗ ಯೋಗವನ್ನೇ ಮೂಲವಾಗಿ ಪರಿಗಣಿಸಿ ಜೈನಮತಾನುಸಾರ ‘ಯೋಗರತ್ನಾಕರ’ವನ್ನು ರಚಿಸಿರುವನು.

ಯೋಗ ರತ್ನಾಕರ:

ನೇಮಿಜಿನ, ಸಿದ್ಧಾದಿಗಳು ಮತ್ತು ಸರಸ್ವತಿಯನ್ನು ಪ್ರಾರ್ಥಿಸಿ ಶಾಂತರಸ ಯೋಗರತ್ನಾಕರವನ್ನು ಪ್ರಾರಂಭಿಸಿದ್ದಾನೆ. ಶಾಸ್ತ್ರ ವಿಷಯವನ್ನು ಸುಲಭವಾಗಿಯೂ ಸುಗಮವಾಗಿಯೂ ವಿವರಿಸಿದ್ದಾನೆ. ಇದನ್ನು ಅನುಸರಣೀಯ ಎಂಬಂತೆ ವರ್ಣಿಸಿದ್ದಾನೆ. ಆದರೆ ಈ ಯೋಗಾಭ್ಯಾಸಕ್ಕೆ ಅರ್ಹತೆ ಬೇಕೆಂಬುದನ್ನು ಸ್ಪಷ್ಟಪಡಿಸಿದ್ದಾನೆ.

ಆತನ ದೇಶ, ಕುಲ, ಜಾತಿ ಶುದ್ಧ ಆಗಿರಬೇಕು. ದೇವ-ಗುರು ಭಕ್ತಿಯುತ, ಪಾಪಭೀರು, ಸತತಾಭ್ಯಾಸಿ ಆಗಿರಬೇಕು. ಭಾವುಕ, ಜಿಪುಣ, ಜೀವದಯಾಪರನಾಗಿರಬೇಕು. ಸತ್ಯವನ್ನು ಹೇಳುವವನಾಗಿರಬೇಕು. ಜಿನಮುನಿ, ಜಿನಭಾಷಿತಾಗಮಗಳನ್ನು ನಂಬುವವನೇ ಯೋಗ ಯೋಗ್ಯನಾದವನು. ಸುಳ್ಳು ಹೇಳುವವನು. ವಂಚಕ, ದುರಾಸೆಯವನು, ವ್ಯಸನಿ, ಪಾಪಿ, ಕೋಪಿ, ದೂಷಕ, ಅತಿಯಾಗಿ ಮಾತನಾಡುವವನು, ನಿಷ್ಠುರರಿಗೆ ಯೋಗವನ್ನು ಕೊಡಬಾರದು, ಸೋಮಾರಿ, ದಡ್ಡ, ಪಾಪಿ, ಜಿನಧರ್ಮದೂಷಕ, ಗುಣಹೀನ, ವ್ರತಹೀನ, ಜಾತಿಮೂರ್ಖರಿಗೆ ಯೋಗವು ಸಿದ್ದಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net