ಯೋಗ ಕ್ಷೇಮ | ಆಸನ ಜಯದಿಂದ ವಾತ ಪ್ರಕೋಪ- ಗುಲ್ಮಾದಿ ದೋಷ ನಿವಾರಣೆ ಸಾಧ್ಯ

Yogakshema
Published on
ಪತಂಜಲಿಯ ಅಷ್ಟಾಂಗಯೋಗದಲ್ಲಿ ಆಸನ ಮೂರನೆಯದು. ಆಸನ ಎಂದರೇನು? ಯೋಗ ದರ್ಶನದಲ್ಲಿ ಹೀಗೆ ಸೂತ್ರೀಕರಿಸಿ ದ್ದಾರೆ. ‘ಸ್ಥಿರಂ ಸುಖಂ ಆಸನಂ’ ಎಂದು. ಅಂದರೆ ‘ನಿಶ್ಚಲವೂ ಸುಖಕರವೂ ಆದುದು ಆಸನ’. ಹಾಗೆಂದರೆ ಕ್ರಮಬದ್ಧ ಶಾರೀರಿಕ ಚಲನೆಯ ನಂತರ ದೈಹಿಕವಾಗಿ ಅಲ್ಲಾಡದಂತೆ, ನೋವಾಗದಂತೆ ಸುಖವಾಗಿ, ನಿರಾಳವಾಗಿ ಯಾವುದಾದರೂ ನಿಲುವಿನಲ್ಲಿ ಇರಿಸುವುದೇ ಆಸನ’ ಎಂಬುದು ಇದರ ಭಾವನೆಯಾಗಿದೆ. ಈ ಆಸನದತ್ತ ಎರಡು ದೃಷ್ಟಿಯಿಂದ ನೋಡಬಹುದು.

ಒಂದನೆಯದಾಗಿ- ಯೋಗದ ಮುಂದಿನ ಅಂಗಗಳಾದ ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಸಾಧನೆಗೆ ತೊಡಗುವ ಪಾರಮಾರ್ಥಿಕ ದೃಷ್ಟಿಯಿಂದ.

ಎರಡನೆಯದಾಗಿ ಶರೀರವನ್ನು ದೃಢವಾಗಿಯೂ, ರೋಗ ರಹಿತವಾಗಿಯೂ ಇಟ್ಟುಕೊಳ್ಳಲು ಅಪೇಕ್ಷಿಸುವ ಲೌಕಿಕದ ದೃಷ್ಟಿಯಿಂದ. ಈ ಪಾರಮಾರ್ಥಿಕ ಮತ್ತು ಲೌಕಿಕ ಎರಡೂ ದೃಷ್ಟಿಯವರಿಗೂ ಆಸನದ ಅವಶ್ಯಕತೆ ಇದ್ದೇ ಇರುತ್ತದೆ.

ಜೈನ ಶಾಸ್ತ್ರದಲ್ಲಿ ಯೋಗಾಸನಾನುಷ್ಠಾನ: ಜೈನ ದರ್ಶನಾನುಷ್ಠಾನಕ್ಕೆ ಯೋಗ್ಯವಾದ ಆಸನವನ್ನು ಶಾಂತರಸನ ಯೋಗರತ್ನಾಕರ ಗ್ರಂಥದಲ್ಲಿ ಮೂರನೆಯ ಅಂಗವಾಗಿ ವಿವೇಚಿಸಿದ್ದಾರೆ. ಸ್ವಸ್ತಿಕ, ಪದ್ಮ, ವಜ್ರ, ಕುಮುದ, ಷಂಡ, ಭದ್ರ, ಕುಕ್ಕುಟ, ಗರುಡ ಎನ್ನುವವು ಆಸನಭೇದಗಳು. ಅವುಗಳನ್ನು ಶ್ರದ್ಧೆಯಿಂದ ಹಾಗೂ ಬೇಸರಿಸದೆ ಅಭ್ಯಾಸ ಮಾಡುವುದರಿಂದ ಆಸನ ಜಯವಾಗುತ್ತದೆ. ಆಸನ ಜಯದಿಂದ ಆಹಾರ ಜಯವು ಪ್ರಾಪ್ತಿಯಾಗುತ್ತದೆ. ಹಾಗೆಯೇ ಆಹಾರ ಜಯದಿಂದ ನಿದ್ರಾಜಯವು ಉಂಟಾಗುತ್ತದೆ. ಆಸನ ಗಳನ್ನು ಮಾಡುವಾಗ ಒಂದು ಅಂಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂದರೆ ಆಸನಗಳನ್ನು ಹಾಕುವಾಗ ಉತ್ತರಕ್ಕೆ ಅಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕುಳಿತು ಹಾಕಬೇಕು.

ಯೋಗಕ್ಕೆ ಯೋಗ್ಯತೆಯನ್ನು ಸಂಪಾದಿಸಿಕೊಳ್ಳಬೇಕು. ಯೋಗ ದೊರೆಯದೆ ಏನು? ಅದೇನು ಮಹಾ! ಎಂದು ಅಭ್ಯಾಸ ಮಾಡಿದರೆ ಅದು ದೊರೆಯುವುದಿಲ್ಲ. ಹಳ್ಳ, ತಿಟ್ಟು, ಒದ್ದೆಯಾದ ಜಾಗ, ಗಾಳಿ, ಮಳೆ, ತಿಗಣೆ, ಚಿಗಟ, ನೊರಜು, ಇರುವೆಯ ಗೂಡು, ಗುಂಗುರಿನ ಶಬ್ದ, ಚೇಳು, ಹಾವುಗಳಿರುವೆಡೆ, ಜೂಜಾಡುವ, ವಾದಮಾಡುವ ಹಾಗೂ ವಿಪರೀತ ಗದ್ದಲವಿರುವ ಕಡೆ ಹಾಗೂ ಹತ್ತಿರದ ಮನೆ...ಇಂಥ ಸ್ಥಳಗಳು ಯೋಗಕ್ಕೆ ಸಲ್ಲದ ಜಾಗಗಳು. ಆಸನಕ್ಕೆ ಆರಿಸಿಕೊಳ್ಳುವ ಸ್ಥಳ ಪ್ರಶಾಂತವಾಗಿರಬೇಕು. ಹಿತವಾದ ಸ್ಥಳದಲ್ಲಿ ತನುಬಾಧೆ ಇಲ್ಲದಂತೆ, ಕತ್ತಲಾದ ಪ್ರದೇಶದಲ್ಲಿ ಮನಃಪೂರ್ವಕವಾಗಿ, ಶ್ರದ್ಧೆಯಿಂದ ನೆಟ್ಟಗೆ ಕುಳಿತಿರುವವನಿಗೆ ಯೋಗಸಿದ್ಧಿ ಪ್ರಾಪ್ತಿಯಾಗುವುದು. ಸಮತಲವಾದ ನೆಲದಲ್ಲಿ ಸಮಚಿತ್ತನಾಗಿ ಸಿದ್ಧಾಸನದಲ್ಲಿ ಸಮದೇಹವಾಗಿ ಬೇರೆಯದನ್ನು ಚಿಂತಿಸದೆ ಕುಳಿತರೆ ಯೋಗವು ನಿಶ್ಚಯವಾಗಿ ಲಭಿಸುತ್ತದೆ.

ರೋಗಾಪಹರಣವೂ ನಿರ್ಮಲವೂ ಆದ ಕೆಲವು ಕರಣಿಗಳನ್ನು ಶಾಂತರಸ ಹೀಗೆ ವಿವರಿಸಿದ್ದಾನೆ.

  • ಮಾಹಕರಣಿ : ಎಲ್ಲ ವಿಧವಾದ ಜ್ವರವನ್ನು ಪರಿಹರಿಸುತ್ತದೆ.
  • ಪ್ರೇತಂಕರಣಿ: ವಾತಪ್ರಕೋಪವನ್ನು ನಿವಾರಿಸುವುದು.
  • ರಾವಣಬಂಧ-ಗುದದರ್ಶ, ಗುಲ್ಮ ಮತ್ತು ಪ್ರಮೇಹಗಳನ್ನು,
  • ಗಜಕುಂಭ - ಬೆನ್ನುನೋವನ್ನು, ವಾಯುದೋಷವನ್ನು,
  • ಮಯೂರ - ಹಲವು ರೀತಿಯ ಗುಲ್ಮಾದಿಗಳನ್ನು,
  • ವರಾಹಕರಣಿ-ಚರಣತಳದ ನೋವನ್ನು ಹೋಗಲಾಡಿಸುತ್ತದೆ.
  • ವಜ್ರಾಸನ- ಗರುಡನ ರೀತಿಯಲ್ಲಿದ್ದು -ಗುಲ್ಮಾದಿ ದೋಷಗಳನ್ನು
  • ಗಜಕರಣ ಶರೀರದ ಅನೇಕ ರೋಗಗಳನ್ನು ಪರಿಹರಿಸುತ್ತವೆ.

ಆಸನ ಮತ್ತು ಕರಣಿಗಳನ್ನು ನಡೆಸುವುದರಿಂದ ಭಾಸುರತರ ದೇಹವಾಗಿ ನಿರುಜತ್ವ ದೊರಕುತ್ತದೆ. ಯೋಗ ನಿಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net