

ಬೆಂಗಳೂರು: ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ ಕೂಡ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಈ ವಿಶ್ವಕಪ್ ಪಂದ್ಯಾವಳಿ ಸಂದರ್ಭದಲ್ಲಿ ಅವರ ಕುರಿತು ಹಲವು ಸುದ್ದಿಗಳು ಹರಿದಾಡಿದ್ದವು.
ದೇಶಾದ್ಯಂತ ಇತ್ತೀಚೆಗೆ ಡೀಪ್ಫೇಕ್ ಫೋಟೋ/ವಿಡಿಯೋ ಪ್ರಕರಣಗಳು ಹೆಚ್ಚಾಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಇದು ಆತಂಕಕಾಗಿ ಸಂಗತಿಯಾಗಿ ಪರಿಣಮಿಸಿದೆ. ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರ ಡೀಪ್ಫೇಕ್ ಫೋಟೋ/ವಿಡಿಯೋಗಳು ಇತ್ತೀಚೆಗೆ ಹರಿದಾಡಿದ್ದವು.
ಇದೀಗ ತಮ್ಮ ಫೋಟೋ ಕೂಡ ಡೀಪ್ಫೇಕ್ ಆಗಿವೆ ಎಂದು ಆ ಕುರಿತು ಮಾಹಿತಿ ಹಂಚಿಕೊಂಡಿರುವ ತೆಂಡುಲ್ಕರ್ ಪುತ್ರಿ ಸಾರಾ, 'ಎಕ್ಸ್' ವಿಚಾರವಾಗಿ ಇನ್ನೊಂದು ಮಹತ್ವದ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಎಕ್ಸ್ನಲ್ಲಿ ಅರ್ಥಾತ್ ಹಳೆಯ ಟ್ವಿಟರ್ನಲ್ಲಿ ನನ್ನ ಹೆಸರಿನ ಕೆಲವು ಖಾತೆಗಳನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಲಾಗುತ್ತದೆ. ನಾನು ಎಕ್ಸ್ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿರುವ ಸಾರಾ, ಎಕ್ಸ್ ಆ್ಯಪ್ನವರು ಈ ನಕಲಿ ಖಾತೆಗಳ ಕುರಿತು ಸೂಕ್ತ ಕ್ರಮಕೈಗೊಳ್ಳಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಸಾರಾ ತೆಂಡುಲ್ಕರ್ ಹೆಸರಿನಲ್ಲಿ ಹಲವು ಎಕ್ಸ್ ಖಾತೆಗಳಿದ್ದು, ಈ ಮೂಲಕ ಸಾರಾಸಗಟಾಗಿ ಈಕೆ ಆ ಎಲ್ಲ ಖಾತೆಗಳನ್ನು ತಮ್ಮದಲ್ಲವೆಂದು ಹೇಳಿದ್ದಾರೆ.