'ನಂಗೆ ಕನ್ನಡ ತುಂಬಾ ಇಷ್ಟ..' ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!

Kapil Dev (1)
Published on

ಬೆಂಗಳೂರು: ಕನ್ನಡಿಗರಲ್ಲದವರು ಕನ್ನಡದಲ್ಲೇ ಮಾತನಾಡುವುದನ್ನು ಕೇಳುವುದು ದೊಡ್ಡ ಖುಷಿ. ಅದರಲ್ಲೂ ಕನ್ನಡೇತರ ಖ್ಯಾತನಾಮರು ಕನ್ನಡದಲ್ಲೊಂದು ಸಾಲು ಹೇಳಿದರೂ ತುಂಬಾ ಸಂತೋಷವಾಗುತ್ತದೆ. ಅಂಥದ್ದೊಂದು ಸಂಗತಿ ಕನ್ನಡ ರಾಜ್ಯೋತ್ಸವ ಆಚರಿಸುವ ನವೆಂಬರ್​ನಲ್ಲಿ ನಡೆದರೆ ಅಪ್ಪಟ ಕನ್ನಡಾಭಿಮಾನಿಗಳಿಗೆ ಅದು ಅತ್ಯಂತ ದೊಡ್ಡ ಖುಷಿ ಎಂದರೂ ತಪ್ಪೇನಲ್ಲ.

ಕನ್ನಡಿಗರಿಗೆ ಅಂಥ ಒಂದು ಖುಷಿಯನ್ನು ನಟಿ ಸಂಯುಕ್ತ ಹೊರನಾಡು ಒದಗಿಸಿದ್ದಾರೆ. ಖ್ಯಾತ ಕ್ರಿಕೆಟಿಗ, 1983ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಪಿಲ್​ ದೇವ್ ಖುದ್ದು ಕನ್ನಡ ಮಾತನಾಡುವಂತೆ ಮಾಡಿದ್ದಾರೆ ನಟಿ ಸಂಯುಕ್ತ. 'ನಂಗೆ ಕನ್ನಡ ತುಂಬಾ ಇಷ್ಟ..' ಎಂಬ ಸಾಲನ್ನು ಕಪಿಲ್ ದೇವ್ ಅವರಿಗೆ ಹೇಳಿಕೊಟ್ಟ ಸಂಯುಕ್ತ, ಬಳಿಕ ಕಪಿಲ್ ದೇವ್ ಆ ಸಾಲನ್ನು ಹೇಳುವಂತೆ ಮಾಡಿದ್ದಾರೆ. ಮಾತ್ರವಲ್ಲ, ಅದರ ವಿಡಿಯೋ ಕೂಡ ಹಂಚಿಕೊಂಡಿರುವ ಅವರು, ಕನ್ನಡಿಗರು ಖುಷಿ ಪಡುವಂತೆ ಮಾಡಿದ್ದಾರೆ.

ಚೆನ್ನೈನಲ್ಲಿ ಇಂದು ಸಂಜೆ ಆಯೋಜಿಸಲಾಗಿರುವ 'ಮೆಮೊಯರ್ಸ್ ಆಫ್ ಎ ಫುಡ್ಡೀ' ಎಂಬ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಭೇಟಿಯಾದ ಕಪಿಲ್​ ದೇವ್ ಅವರನ್ನು ಮಾತನಾಡಿಸಿದ ಸಂಯುಕ್ತ, ಅವರಿಂದ ಕನ್ನಡದಲ್ಲಿ ಈ ಸಾಲನ್ನು ಹೇಳಿಸಿದ್ದಾರೆ. ಆಹಾರಗಳ ಕುರಿತ ಈ ಪುಸ್ತಕದಲ್ಲಿ ಕಪಿಲ್ ದೇವ್, ಸಂಯುಕ್ತ ಹೊರನಾಡು ಮಾತ್ರವಲ್ಲದೆ ಇತರ ಕೆಲವು ಗಣ್ಯರ ಕುರಿತ ಬರಹಗಳೂ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net