ರಾಜಕೀಯಕ್ಕೆ ಇಳಿಯಲಿದ್ದಾರಾ ಜೂನಿಯರ್ ಅಂಬರೀಷ್?; ರಾಜಕೀಯ ಪ್ರವೇಶದ ಕುರಿತು ಅಭಿಷೇಕ್ ಹೇಳಿದ್ದೇನು?

Abhishek Ambareesh
Published on

ಹುಬ್ಬಳ್ಳಿ: ಚಿತ್ರನಟ ರೆಬೆಲ್ ಸ್ಟಾರ್ ಅಂಬರೀಷ್ ರಾಜಕೀಯಕ್ಕೆ ಧುಮುಕಿ ಸಚಿವರೂ ಆಗಿದ್ದರು. ಅವರ ಬಳಿಕ ಪತ್ನಿ ಸುಮಲತಾ ರಾಜಕೀಯ ಪ್ರವೇಶ ಮಾಡಿ ಸಂಸದೆಯೂ ಆದರು. ಇನ್ನು ಮುಂದೆ ಅವರ ಪುತ್ರ ನಟ, ಅಭಿಷೇಕ್ ಅಂಬರೀಷ್ ಕೂಡ ರಾಜಕೀಯಕ್ಕೆ ಇಳಿಯುತ್ತಾರಾ? ಎಂಬ ಪ್ರಶ್ನೆ ಹಲವರಲ್ಲಿದೆ.

ಇದೀಗ ಈ ಬಗ್ಗೆ ಖುದ್ದು ಅಭಿಷೇಕ್ ಅಂಬರೀಷ್ ಅವರೇ ತಮ್ಮ ನಿಲುವನ್ನು ಖಚಿತಪಡಿಸಿದ್ದಾರೆ. ತಮ್ಮ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರ ನ. 24ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿರುವ ಕುರಿತು ಮಾಹಿತಿ ನೀಡಿದ ಅಭಿಷೇಕ್, ಇದೇ ಸಂದರ್ಭದಲ್ಲಿ ರಾಜಕೀಯದ ಕುರಿತು ಕೂಡ ಮಾತನಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ಚಲನಚಿತ್ರ ಚಿತ್ರೀಕರಣಗೊಂಡಿದೆ. ಉತ್ತರ ಕರ್ನಾಟಕದ ಕಲಾವಿದರು ನಟಿಸಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯಾ ಮಾಡುತ್ತೇವೆ ಎನ್ನುವುದು ಕಷ್ಟ. ಪ್ಯಾನ್ ಇಂಡಿಯಾಗಿಂತ ಒಳ್ಳೆಯ ಸಿನಿಮಾ ಮಾಡಬೇಕು. ಜನರು ಇದೆಲ್ಲವನ್ನೂ ನಿರ್ಧರಿಸುತ್ತಾರೆ ಎಂದರು.

ನಿರ್ದೇಶಕ ಸೂರಿ ಅವರಿಗೆ ಅವರದೇ ಆದ ಪ್ರೇಕ್ಷಕ ವರ್ಗವಿದೆ. ಹೀಗಾಗಿ ಅವರ ಜತೆ ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ಸಿನಿಮಾ ಟ್ರೇಲರ್ ನೋಡಿದ ಮೇಲೆ ಕೆಲವರು ನನ್ನಲ್ಲಿ ಅಂಬರೀಷ್ ಅವರನ್ನು ಕಾಣುತ್ತಿದ್ದೇವೆ ಎಂದಿದ್ದಾರೆ ಎಂದು ಹೇಳಿದರು.

ತಮ್ಮ ರಾಜಕೀಯ ಪ್ರವೇಶ ಕುರಿತು ಮಾತನಾಡಿದ ಅವರು, ಸಿನಿಮಾ ನೋಡಲು ಜನರು ದುಡ್ಡು ಕೊಟ್ಟು ಬರುತ್ತಾರೆ. ರಾಜಕೀಯಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನು ಕರೆತರಬೇಕು. ತಾಯಿ ಸುಮಲತಾ ಅವರು ರಾಜಕೀಯದಲ್ಲಿ ಇರುವವರೆಗೂ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದರು.

ನನ್ನ ತಂದೆ ಅಂಬರೀಷ್ ಅವರು 30 ವರ್ಷಕ್ಕೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದರು. ಆಮೇಲೆ ರಾಜಕೀಯಕ್ಕೆ ಹೋಗಿದ್ದರು. ನಾನು ಎರಡು ದೋಣಿಯ ಮೇಲೆ ಕಾಲು ಇಡಲು ಇಷ್ಟಪಡುವುದಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಸಿನಿಮಾ ರಂಗವೇ ಬೇರೆ, ರಾಜಕಾರಣವೇ ಬೇರೆ ಎಂದರು.

ಉತ್ತರ ಕರ್ನಾಟಕ ಜನರು ಕಲಾವಿದರಿಗೆ ಬಹಳಷ್ಟು ಗೌರವ ಕೊಡುತ್ತಾರೆ. ಈ ಭಾಗದ ಜನರ ಆಶೀರ್ವಾದ ಪಡೆಯಲು ಪ್ರವಾಸ ಮಾಡುತ್ತಿದ್ದೇನೆ ಎಂದೂ ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net