ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

Modi Marriage
Published on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಅವರ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಅಭಿಮಾನ ಮೆರೆದ ಪ್ರಕರಣಗಳು ಹಲವಾರು ಇವೆ. ಅಂಥದ್ದೇ ಒಂದು ಅಭಿಮಾನ ಇಲ್ಲೊಂದು ಮದುವೆಯಲ್ಲಿ, ಅದೂ ವರನಿಂದಲೇ ವ್ಯಕ್ತವಾಗಿರುವುದು ಎಲ್ಲೆಡೆ ಗಮನ ಸೆಳೆಯಲಾರಂಭಿಸಿದೆ.

ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದ ತಿಲಕ್ ಎಂಬ ಯುವಕ ತನ್ನ ಮದುವೆಯ ಸಮಾರಂಭವನ್ನೂ ಮೋದಿಗೆ ಅರ್ಪಿಸಿದ್ದಾನೆ. ಅರ್ಥಾತ್, ಮದುವೆಯಲ್ಲೂ ಮೋದಿ ಅಭಿಮಾನವನ್ನು ಮೆರೆದಿದ್ದಾನೆ. ಮೋದಿಯದ್ದೊಂದು ಪುತ್ಥಳಿಯನ್ನು ಮಾಡಿಸಿ, ಕಲ್ಯಾಣಮಂಟಪದ ಮುಂದಿರಿಸಿ, ಅದರ ಕೆಳಗೆ, 'ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು, ಏನಂತೀರಿ?' ಎಂದು ಬರೆಸಿದ್ದಾನೆ.

ಅಲ್ಲದೆ ಪ್ರಧಾನಿ ಮೋದಿಯವರ ಕಾರ್ಯಗಳ ಕುರಿತು ಭಿತ್ತಿಪತ್ರಗಳನ್ನು ಮಾಡಿ ಅಂಟಿಸಿದ್ದು, ಮದುವೆಗೆ ಆಗಮಿಸಿದವರ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲದೆ, ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿದ್ದು, ವೈರಲ್ ಆಗಲಾರಂಭಿಸಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ಒಂಟಿಯಾಗಿದ್ದ ಸ್ನೇಹಿತ ತಿಲಕ್ ಶಿಶಿಲ ಇಂದು ಜಂಟಿಯಾಗಿದ್ದಾನೆ. ಈತನ ಬಗ್ಗೆ ನಿಮಗೆ ನೆನಪಿರಬಹುದು, 2018ರಲ್ಲಿ ಮೋದಿಜಿ ಅಧಿಕಾರಕ್ಕೇರುವ ತನಕ ಚಪ್ಪಲಿ ಹಾಕಲ್ಲ, ಗಡ್ಡವೂ ತೆಗೆಯಲ್ಲ, ಮಾಂಸಹಾರವೂ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಮೋದಿ ಅಭಿಮಾನಿ ಈತ ಎಂದು ಹರೀಶ್ ಪೂಂಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net